ಸಾರಾಂಶ
- ಸರ್ಕಾರಿ ನೌಕರರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭರವಸೆ
-------ಕನ್ನಡಪ್ರಭ ವಾರ್ತೆ ನಂಜನಗೂಡು
ರಾಜ್ಯ ಸರ್ಕಾರಿ ನೌಕರರು ಎನ್.ಪಿ.ಎಸ್. ರದ್ದುಗೊಳಿಸಿ ಹಳೇ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ನಡೆಸುತ್ತಿರುವ ನಿರಂತರ ಹೋರಾಟಕ್ಕೆ ನಾನು ನಿಮ್ಮ ಬೆನ್ನೆಲುಬಾಗಿ ನಿಂತು ಸರ್ಕಾರದ ಗಮನ ಸೆಳೆದು ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.ಪಟ್ಟಣದ ಗುರುಭವನದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಸರ್ವಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಸರ್ಕಾರಿ ನೌಕರರಿಗೆ ಜವಾಬ್ದಾರಿ ಹೆಚ್ಚಾಗಿದೆ. ಪ್ರಾಮಾಣಿಕವಾಗಿ ನಿರಂತರ ಸೇವೆಯಲ್ಲಿ ತೊಡಗಿರುವ ಸರ್ಕಾರಿ ನೌಕರರು ನಿವೃತ್ತಿಯಾದಾಗ ಗೌರವದಿಂದ ಬದುಕಲು ಪಿಂಚಣಿ ಸೌಲಭ್ಯ ಅಗತ್ಯವಾಗಿದೆ. ಪಿಂಚಣಿ ಸೌಲಭ್ಯ ಪಡೆದುಕೊಳ್ಳುವುದು ಸರ್ಕಾರಿ ನೌಕರರ ಹಕ್ಕು. ಆದ್ದರಿಂದ ನಿಮ್ಮ ಪ್ರಮುಖ ಬೇಡಿಕೆಗಳಾದ ಎನ್ಪಿಎಸ್ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು, 7ನೇ ವೇತನ ಆಯೋಗದ ಸಂಪೂರ್ಣ ಜಾರಿ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಜಾರಿಗಾಗಿ ಮುಖ್ಯಮಂತ್ರಿಗಳ ಗಮನ ಸೆಳೆದು ಬೇಡಿಕೆ ಈಡೇರಿಕೆಗೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಸರ್ಕಾರ ಸರ್ಕಾರಿ ನೌಕರರಿಗೆ ನೀಡಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸಿದಲ್ಲಿ ಸರ್ಕಾರಿ ನೌಕರರು ಪ್ರಮಾಣಿಕವಾಗಿ ತಮ್ಮ ವೃತ್ತಿಯನ್ನು ಸಂತೋಷದಿಂದ ಮಾಡುತ್ತಾರೆ. ಸರ್ಕಾರಿ ನೌಕರರು ಎನ್.ಪಿ.ಎಸ್. ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವಂತೆ ನಿರಂತವಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಸಹ ಸರ್ಕಾರ ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಮುಂದಾಗದಿರುವುದು ಸರಿಯಲ್ಲ, ಆದ್ದರಿಂದ ಶಾಸಕರು ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರ ಹಂತದಲ್ಲಿ ಧ್ವನಿ ಎತ್ತಬೇಕು ಅಲ್ಲದೆ ರಾಜ್ಯ ಸರ್ಕಾರಿ ನೌಕರರ ಕಟ್ಟೆ ದುರಸ್ತಿಗೆ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಾರ್ಷಿಕ ಸಭೆಯನ್ನು ಯಶಸ್ವಿಗೊಳಿಸಲಾಯಿತು.ಡಿವೈಎಸ್ಪಿ ಗೋವಿಂದರಾಜು, ಬಿಇಒ ಎ.ಟಿ. ಶಿವಲಿಂಗಯ್ಯ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ. ಗೋವಿಂದರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕಾರಯ್ಯ, ಸತೀಶ್ ದಳವಾಯಿ, ಸರ್ಕಾರಿ ನೌಕರರ ಸಂಘದ ಮಲ್ಲಿಕಾರ್ಜುನ್, ಆಸ್ಲೆಸಿರಿ, ಸಿದ್ದರಾಜು, ಪ್ರಸನ್ನ, ತಿರುಮಲ್ಲೇಶ್, ಕೆ.ಬಿ.ಸತೀಶ್, ಶಿವಕುಮಾರ್, ಮಹೇಶ್, ಮಂಜುನಾಥ್, ಯಶೋಧರ, ಯದುಗಿರೀಶ್, ಸಂಘದ ಪದಾಧಿಕಾರಿಗಳು ಇದ್ದರು.