ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮುಕ್ತಿಯ ಪಥ, ಜ್ಞಾನದ ದಾರಿ ತೋರಿಸುವವನೇ ನಿಜವಾದ ಗುರು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ರಾತ್ರಿ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರಿನ 118ನೇ ಪವಿತ್ರ ಹುಣ್ಣಿಮೆ ಕಾರ್ಯಕ್ರಮ ಹಾಗೂ ಗುರು ಪೌರ್ಣಿಮೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗುರುವಿಗೆ, ಗುರುತ್ವಕ್ಕೆ ಇರುವ ಶಕ್ತಿಯನ್ನು ಯಾರೂ ಅಲಕ್ಷ್ಯ ಮಾಡಬಾರದು. ಮನಸ್ಸಿನಲ್ಲಿ ಗುರುವಿನ ಬಗೆಗೆ ಪೂಜ್ಯ ಭಾವನೆ ಮೂಡಿಸಿಕೊಂಡು, ಗುರು ತೋರುವ ಸನ್ಮಾರ್ಗದಲ್ಲಿ ನಡೆದು, ನಮ್ಮಲ್ಲಿ ಮೂಡುವ ಜ್ಞಾನವನ್ನು ಪಸರಿಸುವ ಕೆಲಸ ಮಾಡಿಕೊಂಡು ಹೋದಾಗ ಮಾತ್ರ ಈ ಬದುಕಿಗೆ ಅರ್ಥ ಸಿಗಲಿದೆ ಎಂದರು.ಜ್ಞಾನ ಯಾರ ಸ್ವತ್ತೂ ಅಲ್ಲ, ಪ್ರತಿಯೊಬ್ಬರೂ ಜ್ಞಾನದಿಂದ ಯಶಸ್ಸನ್ನು ಸಾಧಿಸಬಹುದು. ಇದಕ್ಕೆ ಹಲವು ಮಹನೀಯರ ನಿದರ್ಶನಗಳು ನಮ್ಮ ಮುಂದಿವೆ. ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸಿದ್ಧಾರ್ಥ ತನ್ನ ಬಾಲ್ಯದಲ್ಲಿ ಎಲ್ಲವನ್ನೂ ತ್ಯಜಿಸಿ ಪರಿಶ್ರಮದಿಂದ ಬುದ್ಧನಾದ. ಅಂತಹ ಮಹಾನ್ ವ್ಯಕ್ತಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಯಿತು, ಅಂತೆಯೇ ನಮ್ಮಲ್ಲೂ ಒಳಿತುಗಳು ಬೆಳೆದಾಗ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಗುರು ಮತ್ತು ಶಿಷ್ಯ ಅಖಂಡದಲ್ಲಿ ಎರಡು ಮುಖಗಳಿದ್ದಂತೆ, ಯಾವ ವಿದ್ಯಾರ್ಥಿಯು ಕೂಡ ಗುರುವಿಲ್ಲದೇ ಗುರಿ ಮುಟ್ಟಲು ಸಾಧ್ಯವಿಲ್ಲ. ಅಂತಹ ಗುರುವನ್ನು ನೆನೆಯುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದರು.ಶ್ರೀ ಆದಿಚುಂಚನಗಿರಿ ಹಾಸನ ಮಠದ ಶಂಭುನಾಥ ಸ್ವಾಮೀಜಿ ಪ್ರಾಸ್ತವಿಕವಾಗಿ ಮಾತನಾಡಿ, ಜ್ಞಾನದ ಬೆಳಕು ಹಚ್ಚುವ ಶಕ್ತಿ ಗುರುಗಳಿಗೆ ಮಾತ್ರವಿದ್ದು, ಜೀವನ ಸಾರ್ಥಕವಾಗಬೇಕೆಂದರೆ ಜೀವಿತದ ಕೊನೆಯವರೆಗೆ ಗುರುಗಳನ್ನು ಪೂಜಿಸಬೇಕು. ಗುರುವಾಗಬೇಕೆಂದರೆ ಭಗವಂತನ ಸಾಕ್ಷಾತ್ ಗುಣಗಳಿರಬೇಕು. ಅಂದಾಗ ಮಾತ್ರ ಗುರು ಎಂಬ ಪಟ್ಟ ಧರಿಸಲು ಸಾಧ್ಯ ಎಂದು ಹೇಳಿದರು.
ಯಾವತ್ತಿಗೂ ಜ್ಞಾನ ಮಾರ್ಗ ತೋರುವವನು ಗುರುವಾಗುತ್ತಾನೆ. ಶ್ರೀ ಗುರುವಿನ ಕಾರುಣ್ಯ ಅರ್ಥೈಸಿಕೊಳ್ಳುವುದು ಸುಲಭವಲ್ಲ. ಆತ ಮನುಜ ಜನದ ಪರಂ ಜ್ಯೋತಿ ಆಗಿರುತ್ತಾನೆ. ದೇವರ ಇರುವಿಕೆಯನ್ನು ತಿಳಿಸುವವನೇ ನಿಜವಾದ ಗುರು ಎಂದರು.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಗುರು ಪರಂಪರೆಯನ್ನು ಎತ್ತಿ ಹಿಡಿದಿದೆ. ಶ್ರೀ ಮಠದ 71ನೇ ಪೀಠಾಧಿಪತಿಯಾಗಿದ್ದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಪ್ರಸ್ತುತ ಪೀಠಾಧಿಪತಿಗಳಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಗುರುವಿನ ಸ್ಥಾನದಲ್ಲಿ ನಿಂತು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶೃಂಗೇರಿ ಮಠದ ಗುಣನಾಥ,, ಮಂಗಳೂರು ಮಠದ ಧರ್ಮಪಾಲನಾಥ ಸ್ವಾಮೀಜಿ, ದಸರೀಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ, ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ, ಸ್ವತಂತ್ರ ಬಸವಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ಪತ್ರಕರ್ತ ಗುರುರಾಜ್, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಲಿಂಗೇಶ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್.ಮುದ್ದೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ, ಕಾರ್ಯಕ್ರಮದ ಸಂಚಾಲಕ ಎಚ್.ಬಿ.ಮದನಗೌಡ ಮತ್ತಿತರರಿದ್ದರು.