ಸಾರಾಂಶ
ವಿಜಯನಗರ ಜಿಲ್ಲೆಯಾದ್ಯಂತ ಗುರುವಾರ ಶ್ರದ್ಧಾ ಭಕ್ತಿಯಿಂದ ಗುರು ಪೂರ್ಣಿಮೆ ಆಚರಿಸಲಾಯಿತು. ಜಿಲ್ಲೆಯ ಶಾಲಾ, ಕಾಲೇಜ್‌ಗಳಲ್ಲೂ ಗುರು ಪೂರ್ಣಿಮೆ ಆಚರಿಸಲಾಯಿತು. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಗುರುಗಳಿಗೆ ನಮಿಸಿ ಆಶೀರ್ವಾದ ಪಡೆದರು.
ಹೊಸಪೇಟೆ: ವಿಜಯನಗರ ಜಿಲ್ಲೆಯಾದ್ಯಂತ ಗುರುವಾರ ಶ್ರದ್ಧಾ ಭಕ್ತಿಯಿಂದ ಗುರು ಪೂರ್ಣಿಮೆ ಆಚರಿಸಲಾಯಿತು.
ನಗರದ ಟಿಬಿ ಡ್ಯಾಂ ರಸ್ತೆಯ ಶ್ರೀ ಸಾಯಿಬಾಬಾ ದೇವಾಲಯ, ನಗರದ ಹಂಪಿ ರಸ್ತೆಯ ಶ್ರೀ ಸಾಯಿಬಾಬಾ ದೇವಾಲಯ, ಸ್ಟೇಷನ್ ರಸ್ತೆಯ ಶ್ರೀ ಸಾಯಿಬಾಬಾ ದೇವಾಲಯ ಸೇರಿದಂತೆ ವಿವಿಧೆಡೆ ಇರುವ ಸಾಯಿಬಾಬಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ವಿವಿಧ ದೇವಾಲಯಗಳಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ಹಂಪಿ ರಸ್ತೆಯ ಶ್ರೀ ಸಾಯಿಬಾಬಾ ದೇವಾಲಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಭಕ್ತರು ಸ್ವಯಂಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಿದರು.ಜಿಲ್ಲೆಯ ಹೊಸಪೇಟೆ, ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿ ತಾಲೂಕುಗಳಲ್ಲೂ ಶ್ರೀ ಸಾಯಿಬಾಬಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು. ಭಾರತೀಯ ಗುರು-ಶಿಷ್ಯ ಪರಂಪರೆಯನ್ನು ಸಾಕ್ಷೀಕರಿಸುವಂತೆ ಶಿಷ್ಯಂದಿರು ಕೂಡ ಗುರುಗಳನ್ನು ನಮಿಸಿದರು.
ಶಾಲಾ, ಕಾಲೇಜುಗಳಲ್ಲಿ ಆಚರಣೆ: ಜಿಲ್ಲೆಯ ಶಾಲಾ, ಕಾಲೇಜ್‌ಗಳಲ್ಲೂ ಗುರು ಪೂರ್ಣಿಮೆ ಆಚರಿಸಲಾಯಿತು. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಗುರುಗಳಿಗೆ ನಮಿಸಿ ಆಶೀರ್ವಾದ ಪಡೆದರು.ಸಾಯಿಬಾಬಾ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ:ಗುರು ಪೌರ್ಣಿಮೆಯ ಪ್ರಯುಕ್ತ ಗುರುವಾರ ಸಂಡೂರು ಪಟ್ಟಣದ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಹೋಮ, ಅಭಿಷೇಕ, ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು. ಘೋರ್ಪಡೆ ರಾಜವಂಶಸ್ಥರಾದ ಏಕಾಂಬರ ಘೋರ್ಪಡೆ ಹಾಗೂ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸಾಯಿಬಾಬಾ ದರ್ಶನ ಪಡೆದರು. ದರ್ಶನಕ್ಕಾಗಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.