ಸಾರಾಂಶ
ಕಮಲನಗರ ಪಟ್ಟಣದ ಶಾಂತಿವರ್ಧಕ ಪ.ಪೂ ಕಾಲೇಜಿನಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟನೆಯನ್ನು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಾಡಿದರು.
ಕನ್ನಡಪ್ರಭ ವಾರ್ತೆ ಕಮಲನಗರಮಾನವ ಜೀವನ ಸಾರ್ಥಕವಾಗಬೇಕಾದರೆ ಗುರುವಿನ ಸಾಕ್ಷಾತ್ಕಾರವಾಗಬೇಕಾಗುತ್ತದೆ. ಇಂತಹ ಗುರುಗಳನ್ನು ನೆನೆಯುವಂತಹ ಕಾರ್ಯ ನಡೆಯಬೇಕೆಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಾಗರ ಖಂಡ್ರೆ ಹೇಳಿದರು.
ಪಟ್ಟಣದ ಶಾಂತಿವರ್ಧಕ ಪ.ಪೂ ಕಾಲೇಜಿನಲ್ಲಿ 2002-2003 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಶನಿವಾರ ಹಮ್ಮಿಕೊಂಡ ಗುರುವಂದನಾ ಹಾಗೂ ಸುಮಧುರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆವರೆಗೂ ಉಳಿಯುವುದಿಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ. ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾಗಿದೆ. ವಿದ್ಯಾರ್ಥಿಯ ಬದುಕಿನ ಸಾರ್ಥಕತೆಯ ಹಿಂದೆ ಗುರುವಿನ ಶ್ರಮವಿದೆ. ವಿದ್ಯಾರ್ಥಿಯ ಸಾಧನೆಯಿದೆ. ಆದರೆ ಬದುಕು ಕಟ್ಟಿಕೊಂಡ ಮೇಲೆ ಅದನ್ನು ಸ್ವಂತಕ್ಕೂ ಸಮಾಜಕ್ಕೂ ಸದುಪಯೋಗ ಪಡಿಸಬೇಕು. ಸ್ವಾರ್ಥಕ್ಕಿಂತ ನಿಸ್ವಾರ್ಥ ಸೇವೆಗೆ ಹೆಚ್ಚು ಬೆಲೆ ಇದೆ ಎಂದರು.
ಶಿವಾನಂದ ಔರಾದೆ, ರಮೇಶ ಪವಾರ, ಎಸ್‌ಎಸ್‌ದ್ವಾಸೆ, ಪಿಎನ್ ಮಾನಕರಿ ಮಾತನಾಡಿದರು.ಶಾಂತಿವರ್ಧಕ ಪ್ರೌಢ ಶಾಲೆಯ ಮುಖ್ಯಗುರು ಸವೀತಾ ಕಾರಬಾರಿ ಅಧ್ಯಕ್ಷತೆ ವಹಿಸಿದರು.
ಇದೇ ವೇಳೆ 2002-2003 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಶಿಕ್ಷಕರಿಗೆ ಸನ್ಮಾನಿಸಲಾಯಿತು.