ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2001-02ನೇ ಸಾಲಿನ ಎಸ್ಎಸ್ಎಲ್‌ಸಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಬಳಗ 23 ವರ್ಷಗಳ ಬಳಿಕ ತಮ್ಮೆಲ್ಲ ಗುರುಗಳನ್ನು ಸನ್ಮಾನಿಸಿತು.
ಕೊಪ್ಪಳ: ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2001-02ನೇ ಸಾಲಿನ ಎಸ್ಎಸ್ಎಲ್‌ಸಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಬಳಗ 23 ವರ್ಷಗಳ ಬಳಿಕ ತಮ್ಮೆಲ್ಲ ಗುರುಗಳನ್ನು ಸನ್ಮಾನಿಸಿ, ಸತ್ಕರಿಸಿ ಆದರ್ಶ ಮೆರೆದಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ನೋಡಿ ಗುರುಗಳು ಆನಂದ ಬಾಷ್ಪ ಸುರಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ 2001-02ನೇ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು 23 ವರ್ಷಗಳ ಬಳಿಕ ಸೇರಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗುರುಗಳು ಮತ್ತು ಶಿಷ್ಯರ ಸಮ್ಮಿಲನ ಮತ್ತೊಮ್ಮೆ ಹಳೆಯ ದಿನಗಳನ್ನು ಸ್ಮರಿಸಿಕೊಳ್ಳುವಂತೆ ಮಾಡಿತು.ನಿವೃತ್ತ ಪ್ರಾಂಶುಪಾಲ ಡಾ. ಮಹಾಂತೇಶ ಮಲ್ಲನಗೌಡ್ರ ಮಾತನಾಡಿ, ಇದೊಂದು ಅವಿಸ್ಮರಣೀಯ ಕ್ಷಣವಾಗಿದೆ. 23 ವರ್ಷಗಳ ಬಳಿಕ ತಮ್ಮೆಲ್ಲ ಗುರುಗಳನ್ನು ಸತ್ಕಾರ ಮಾಡಿ, ಗೌರವಿಸುವ ಮೂಲಕ ವಿದ್ಯಾರ್ಥಿಗಳು ಆದರ್ಶ ಮೆರೆದಿದ್ದಾರೆ. ಇಂಥ ಶಿಷ್ಯರನ್ನು ಪಡೆದ ಶಿಕ್ಷಕರೆಲ್ಲರೂ ಧನ್ಯರು ಎಂದರು.
ನಿವೃತ್ತ ಶಿಕ್ಷಕರಾದ ಶ್ರೀಹರಿ ಮಾತನಾಡಿ, ನನ್ನ ಜೀವನದಲ್ಲಿ ಹೀಗೆ ಶಿಷ್ಯರೆಲ್ಲಾ ಸೇರಿ ಸನ್ಮಾನಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅದರಲ್ಲೂ 23 ವರ್ಷಗಳ ಬಳಿಕ ನಮ್ಮನ್ನೆಲ್ಲ ಸ್ಮರಿಸಿಕೊಂಡು, ನಮ್ಮ ವಿಳಾಸ ಪತ್ತೆ ಮಾಡಿ, ನಮ್ಮನ್ನು ಇಲ್ಲಿಗೆ ಕರೆಯಿಸಿ, ಸತ್ಕಾರ ಮಾಡಿದ್ದನ್ನು ನೋಡಿದರೆ ನಾವೆಲ್ಲ ಪಾಠ ಮಾಡಿದ್ದಕ್ಕೂ ಸಾರ್ಥಕ ಎನ್ನುವ ಭಾವನೆ ಮೂಡಿಸಿದ್ದಾರೆ ಎಂದರು.ಶಾಲೆಯಲ್ಲಿ ಪಾಠ ಮಾಡುವಾಗ ಇದ್ಯಾವುದು ನಮ್ಮ ಕಣ್ಮುಂದೆ ಬಂದಿರುವುದಿಲ್ಲ. ಆದರೆ, ಈಗ ನೀವೆಲ್ಲ ಬೆಳೆದು, ದೊಡ್ಡ ದೊಡ್ಡ ಹುದ್ದೆಯಲ್ಲಿದ್ದರೂ ನಮ್ಮನ್ನು ಸತ್ಕರಿಸಿದ್ದನ್ನು ನೋಡಿದರೆ ಈಗ ಆ ದಿನಗಳಿಗೆ ಅರ್ಥ ಬರುತ್ತದೆ. ನಾವು ಪಾಠ ಮಾಡಿದ್ದು ಈಗ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಆನಂದಬಾಷ್ಪ ಸುರಿಸಿದರು.
ನಿವೃತ್ತ ಶಿಕ್ಷಕರಾದ ಬಿ.ಎಸ್. ಗೌಡರ, ಪಂಚಾಕ್ಷರಯ್ಯ, ಮಹೇಶ ಸೊಪ್ಪಿಮಠ, ಶ್ರೀ ಹರಿ, ವೀರನಗೌಡ್ರ, ಬಸವರಾಜ ಬಿಸರಳ್ಳಿ, ಕೃಷ್ಣಾ ಸಿಂಗ್, ವೆಂಕಟೇಶ, ಶೋಭಾ ಕಂಬಾಳಿಮಠ, ಅಮೀರ್ ನದಾಫ್, ಅನಸುಯಾ, ಪ್ರಭಾದೇವಿ, ಬಸವರಾಜ ಕಮ್ಮಾರ, ಅನ್ವರ ಹುಸೇನ್ ಇದ್ದರು.ಈ ವೇಳೆ, ಬಂಗಾರ ಲೇಪಿತ ಗಣೇಶ ಮೂರ್ತಿ ಕಾಣಿಕೆಯಾಗಿ ನೀಡಿ, ಗೌರವಿಸಿದರು.
ಗುರುಗಳ ನೃತ್ಯತಮ್ಮ ಗುರುಗಳ ಎದುರಿಗೆ ಶಿಷ್ಯರೆಲ್ಲರೂ ಗುರುಗಳನ್ನು ಸ್ಮರಿಸುವ ಹಾಡಿಗೆ ನೃತ್ಯ ಮಾಡಿದರು. ಅದನ್ನು ನೋಡಿ ಕೆಲ ಗುರುಗಳೂ ಹೆಜ್ಜೆ ಹಾಕಿದರು. ಅಲ್ಲದೆ, ವಿದ್ಯಾರ್ಥಿಗಳನ್ನು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ಯಾಮ ಬೆಣಗಿ, ಮಲ್ಲು ಕಾಮನೂರು, ಗವಿ ತುಪ್ಪದ, ವಿಠ್ಠಲ, ದೇವು ಮಡಿವಾಳರ, ಇಬ್ರಾಹಿಂ ಮೆಹರಾಜ, ಫಯಾಜ್, ಹನುಮಂತಪ್ಪ ಮೊದಲಾದವರು ಇದ್ದರು.ಶಾಲಾ ದಿನ ನೆನಪುನಿಜಕ್ಕೂ ನಮಗೆ ಸಂತೋಷವಾಗುತ್ತದೆ. ಎಲ್ಲ ಗುರುಗಳನ್ನು ನೋಡಿ ಶಾಲಾ ದಿನಗಳು ನೆನಪಾದವು. ಬದುಕು ಕಲಿಸಿದ ಗುರುಗಳನ್ನು ಸತ್ಕಾರ ಮಾಡಿದ ಹಿರಿಮೆ ನಮ್ಮದು ಎಂದು ಗುತ್ತಿಗೆದಾರ ದೇವರಾಜ ಪೂಜಾರ ಹೇಳಿದರ.