ಸಾರಾಂಶ
ಮುಂಡರಗಿ:ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ, ರೀತಿ ನೀತಿಗಳು ಮರೆಯಾಗುತ್ತಿರುವ ಈ ಕಾಲದಲ್ಲಿ 33 ವರ್ಷಗಳ ಹಿಂದೆ ವಿದ್ಯೆ ನೀಡಿದ ಎಲ್ಲ ಗುರುಗಳನ್ನು ಕರೆದು ಅವರಿಗೆ ಗುರು ವಂದನೆ ಸಲ್ಲಿಸುತ್ತಿರುವ ಮುಂಡರಗಿ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾದುದು ಎಂದು ನಿವೃತ್ತ ಉಪನ್ಯಾಸಕ ವಿ.ಎಫ್. ಕೋಟ್ಯಾಳಮಠ ಹೇಳಿದರು.
ಅವರು ಗುರುವಾರ ಸಂಜೆ ಪಟ್ಟಣದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ವಿಲ್ಯಾಂಪ್ಸ್ ಇಂಡಸ್ಟ್ರಿ ಆವರಣದಲ್ಲಿ ಶ್ರೀ ಜ.ಅ. ವಿದ್ಯಾ ಸಮಿತಿಯ ಅನ್ನದಾನೀಶ್ವರ ಪ್ರೌಢ ಶಾಲೆ ಮುಂಡರಗಿಯ 1992ರ ಎಸ್.ಎಸ್.ಎಲ್.ಸಿ. ಗೆಳೆಯರ ಬಳಗದ ಆಶ್ರಯದಲ್ಲಿ ಜರುಗಿದ ಗುರುವಂದನೆ- ಸ್ನೇಹ ಸಮ್ಮಿಲನ ಹಾಗೂ ನಿವೃತ್ತ ಗುರುಗಳಿಗೆ ಸನ್ಮಾನ ಸಮಾರಂಭ- 2025 ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬದುಕಿನಲ್ಲಿ ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳಬೇಕೆಂದರೆ ಅದಕ್ಕೆ ಪ್ರತಿಯೊಬ್ಬರಿಗೂ ಇಂಗ್ಲಿಷ್ ಬರಬೇಕು, ಇಂಗ್ಲಿಷ್ ಭಾಷೆಯಲ್ಲಿಯೇ ಓದಬೇಕೆಂದು ಏನು ಇಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದವರೇ ಹೆಚ್ಚಿನ ಸಾಧನೆಗಳನ್ನು ಮಾಡಿದ್ದಾರೆ. ಬಡತನದಲ್ಲಿ ಹುಟ್ಟುವುದು ತಪ್ಪಲ್ಲ, ಆದರೆ ಬಡತನದಲ್ಲಿ ಸಾಯುವುದು ತಪ್ಪು. ಏನಾದರೂ ಸಾಧಿಸಬೇಕೆನ್ನುವ ಛಲವಿದ್ದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ನೀವೆಲ್ಲರೂ ಇಂದು ವಿವಿಧ ಕ್ಷೇತ್ರಗಳಲ್ಲಿ ಬೆಳೆದು ನಿಂತಿರುವುದೇ ಸಾಕ್ಷಿಯಾಗಿದೆ. ಇಂದು ನೀವೆಲ್ಲರೂ ಅನೇಕ ಮಾದರಿ ವ್ಯಕ್ತಿಗಳಾಗಿ ಬೆಳೆದು ನಿಂತಿರುವುದನ್ನು ಕಂಡು ಸಂತಸವಾಗಿದೆ. ಇದೊಂದು ಅತ್ಯಂತ ಸ್ಮರಣೀಯ ಕಾರ್ಯಕ್ರಮವಾಗಿದೆ ಎಂದರು.ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆ ಮುಂಡರಗಿಯ 1992ರ ಎಸ್.ಎಸ್.ಎಲ್.ಸಿ. ಗೆಳೆಯರ ಬಳಗದ ಪರವಾಗಿ ಆನಂದಗೌಡ ಪಾಟೀಲ ಮಾತನಾಡಿ, ಅಂದು ಜಾತ್ಯತೀತವಾಗಿ ಎಲ್ಲ ಮಕ್ಕಳನ್ನೂ ಒಂದೇ ಎಂದು ತಿಳಿದು ತಾವೆಲ್ಲರೂ ನೀಡಿದ ಶಿಕ್ಷಣದಿಂದಾಗಿ ಇಂದು ನಾವು ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಾ ಗೌರವಯುತವಾಗಿ ಬದುಕುತ್ತಿದ್ದೇವೆ. ತಮ್ಮ ಆಶೀರ್ವಾದ, ಹರಕೆ ಸದಾ ನಮ್ಮೆಲ್ಲರ ಮೇಲಿರಲಿ ಎಂದರು. ನಿವೃತ್ತ ಗುರುಮಾತೆ ಕವಿತಾ ಮಹಾಲಿಂಗ ಯಾಳಗಿ ಮಾತನಾಡಿ, ಈ ಜಗತ್ತಿನಲ್ಲಿ ನಿಜವಾಗಿಯೂ ಪ್ರೀತಿ, ಗೌರವ ಸಿಗಬೇಕಾದರೆ ಶಿಕ್ಷಕರಾಗಬೇಕು. ಶಿಕ್ಷಕರಿಗೆ ದೊರೆಯುವ ಪ್ರೀತಿ ಬೇರೆ ಯಾವುದೇ ಇಲಾಖೆಯ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಅದು ಸಿಗುವುದಿಲ್ಲ. ಒಲ್ಲದ ಮನಸ್ಸಿನಿಂದ ಶಿಕ್ಷಕ ಸೇವೆಗೆ ಬಂದ ನಾನು ಇದೀಗ ಸೇವಾ ನಿವೃತ್ತಿ ಹೊಂದಿದರೂ ಇನ್ನೂ ಸೇವೆ ಸಲ್ಲಿಸಬೇಕೆನ್ನುವ ಹಂಬಲದಲ್ಲಿರುವೆ. ಹಿಂದಿನ ವಿದ್ಯಾರ್ಥಿಗಳ ಕಿಡಿಗೇಡಿತನದಲ್ಲಿ ಸಂಸ್ಕಾರ ಇರುತ್ತಿತ್ತು. ಇಂದಿನ ವಿದ್ಯಾರ್ಥಿಗಳಲ್ಲಿ ಅದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ತಂದೆ ತಾಯಿ ಕೊಡುವ ಪ್ರೀತಿಯನ್ನು ನೀವು ನಮ್ಮ ಶಿಷ್ಯರಾಗಿ ನಮಗಿಂದು ನೀಡಿದ್ದೀರಿ. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ ಎಂದರು. ನಿವೃತ್ತ ಶಿಕ್ಷಕ ಎಸ್.ಎಸ್. ಇನಾಮತಿ ಮಾತನಾಡಿ, ನಾನು ಸಹ ಇದೇ ಶಾಲೆಯಲ್ಲಿ ಓದಿ ಇಲ್ಲಿಯೇ ಸೇವೆ ಮಾಡಿ ನಿವೃತ್ತಿಯಾಗಿರುವೆ. 1992ರ ಬ್ಯಾಚಿನ ಅನ್ನದಾನೀಶ್ವರ ಪ್ರೌಢಶಾಲೆಯ ಎಸ್,ಎಸ್.ಎಲ್.ಸಿ. ಬ್ಯಾಚಿನ ವಿದ್ಯಾರ್ಥಿಗಳ ಬೆಳವಣಿಗೆ ನೋಡಿದರೆ ತುಂಬಾ ಖುಷಿಯಾಗುತ್ತದೆ. ಎಷ್ಟೇ ಬೆಳೆದು ದೊಡ್ಡ ವ್ಯಕ್ತಿಗಳಾಗಿದ್ದರೂ ಶಿಕ್ಷಕರಿಗೆ ತೋರಿಸುವ ವಿನಯತೆ, ಪ್ರೀತಿ ಗೌರವ ಕಡಿಮೆಯಾಗದಿರುವುದನ್ನು ಕಂಡು ಸಂತಸವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎ.ಎಂ. ತೋಟಯ್ಯ, ಪಿ.ಜೆ.ಜವಿ, ಬಿ.ಟಿ. ಅಬ್ಬಿಗೇರಿ, ಕವಿತಾ ಯಾಳಗಿ, ಎಂ.ಎ. ಜಾತಿಗೇರ, ಎಸ್.ಎಸ್. ಇನಾಮತಿ ಹಾಗೂ ಸೇವಾ ನಿರತ ಶಿಕ್ಷಕರಾದ ಎಸ್.ಸಿ. ಚಕ್ಕಡಿಮಠ, ಎಸ್.ಬಿ. ಸವಣೂರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸೋಮಶೇಖರ ಸೋರೇಬಾನ್. ಅಮರೇಶ ಅಂಗಡಿ, ಮಾಬೂಸಾಬ್ ಹಂಚಿನಾಳ, ಸುಧೀರ ಪದಕಿ, ರವಿ ದೇವರಡ್ಡಿ, ಮಹೇಂದ್ರ ಹಂಚಿನಾಳ, ಶ್ರೀನಿವಾಸ ಮುಂಡರಗಿ, ರಾಮು ಅಳವಂಡಿ, ಶ್ರೀನಿವಾಸ ಮುಂಡರಗಿ, ನಿಂಗಪ್ಪ ಕುರಿ, ಗುರುರಾಜ ಕಾಲವಾಡ, ಮಲ್ಲಿಕಾರ್ಜುನ ಪಾಟೀಲ, ಮುಕುಂದ್ ದೇಸಾಯಿ, ಡಾ.ವಿರೇಂದ್ರ ಹಿರೇಮಠ, ವೀರಣ್ಣ ಬೇವಿನಮರದ, ಈರಣ್ಣ ಕವಡಿಮಟ್ಟಿ, ಎಸ್.ಬಿ. ಹಿರೇಮಠ, ವಿ.ಎಸ್. ಡಂಬಳ, ವಿ.ವೈ.ಬಂಡಿವ್ವಡರ, ಹನಮಂತ ಹಕ್ಕಿ, ಶೇಖಣ್ಣ ಬಳ್ಖಾರಿ, ಈರಣ್ಣ ಹಂಚಿನಾಳ, ಗಿರೀಶ ಶೆಟ್ಟೆಮ್ಮನವರ, ಪ್ರಹ್ಲಾದ್ ಡಂಬಳ, ಮಹೇಶ ಜೋಳದ, ಮಲ್ಲಿಕಾರ್ಜುನ ಹುಲ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಹೇಶ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಗದೀಶ ಹಂಚಿನಾಳ ಸ್ವಾಗತಿಸಿ, ಬಸವರಾಜ ಉಮಚಗಿ ನಿರೂಪಿಸಿ, ಉದಯಕುಮಾರ ಯಲಿವಾಳ ವಂದಿಸಿದರು.