ದಸಂಸ ಒಡಕಿಗೆ ಅಡಿಗಲ್ಲು ಹಾಕಿದ್ದೆ ಎಚ್.ಗೋವಿಂದಯ್ಯ: ಮುಖಂಡರ ಕಿಡಿ

| Published : Nov 20 2024, 12:34 AM IST

ದಸಂಸ ಒಡಕಿಗೆ ಅಡಿಗಲ್ಲು ಹಾಕಿದ್ದೆ ಎಚ್.ಗೋವಿಂದಯ್ಯ: ಮುಖಂಡರ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ದೇವನೂರ ಮಹಾದೇವ ಮತ್ತು ಬಿ. ಕೃಷ್ಣಪ್ಪ ದಸಂಸದ ಎರಡು ಕಣ್ಣು. ದಸಂಸಕ್ಕೆ ಯಾರ ಅಧ್ಯಕ್ಷರಾಗಬೇಕೆಂದಾಗ ಅತ್ಯಂತ ಶೋಷಣೆಗೆ ಒಳಗಾಗಿರುವ ಮಾದಿಗ ಸಮುದಾಯದವರನ್ನು ನೇಮಕ ಮಾಡುವಂತೆ ಹೇಳಿದವರು ದೇವನೂರ ಮಹಾದೇವ.

ಕನ್ನಡಪ್ರಭ ವಾರ್ತೆ ಮೈಸೂರು

ದಲಿತ ಸಂಘರ್ಷ ಸಮಿತಿ ಒಡಕಿಗೆ ಅಡಿಗಲ್ಲು ಹಾಕಿದ್ದೆ ಎಚ್.ಗೋವಿಂದಯ್ಯ. ಹಿರಿಯ ಸಾಹಿತಿ ದೇವನೂರ ಮಹಾದೇವ ಕುರಿತಾದ ಅವರ ಮಾತುಗಳು ಸರಿಯಲ್ಲ ಎಂದು ದಸಂಸ ಹಿರಿಯ ಹೋರಾಟಗಾರ ಎನ್. ವೆಂಕಟೇಶ್ ತೀವ್ರವಾಗಿ ಖಂಡಿಸಿದರು.

ಸಂಘಟನೆ ಒಡೆದಿದ್ದು ಮತ್ತು ಡ್ಯಾಮೇಜ್ ಮಾಡಿದ್ದು ಗೋವಿಂದಯ್ಯ. ದಸಂಸ ಛಿದ್ರವಾಗಲು ದೇವನೂರ ಮಹಾದೇವ ಕಾರಣರಲ್ಲ. ದೇವನೂರ ಮಹಾದೇವ ಅವರ ದಸಂಸದ ಶಕ್ತಿ. ಗುಣಾತ್ಮಕವಾಗಿ ಸಾಹಿತ್ಯಾತ್ಮಕವಾಗಿ ಕಲಾತ್ಮಕವಾಗಿ ಅವರು ನಮ್ಮ ನಾಯಕ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಘ ಪರಿವಾರದ ವಾದಿರಾಜ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಗೋವಿಂದಯ್ಯ ಅವರ ಸೈದ್ಧಾಂತಿಕ ಸ್ಪಷ್ಟತೆ ದುರ್ಬಲಗೊಂಡಿರುವುದಕ್ಕೆ ನಿರ್ದಶನವಾಗಿದೆ. ತಮ್ಮ ನಡಾವಳಿ ಬದಲಾಯಿಸಿಕೊಂಡ ಅವರು ಉದ್ದೇಶಪೂರ್ವಕವಾಗಿ ಮಾತಾಡಿದ್ದಾರೆ ಎಂದು ಅವರು ಕಿಡಿಕಾರಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಎನ್. ಮುನಿಸ್ವಾಮಿ ಮಾತನಾಡಿ, ದೇವನೂರ ಮಹಾದೇವ ಮತ್ತು ಬಿ. ಕೃಷ್ಣಪ್ಪ ದಸಂಸದ ಎರಡು ಕಣ್ಣು. ದಸಂಸಕ್ಕೆ ಯಾರ ಅಧ್ಯಕ್ಷರಾಗಬೇಕೆಂದಾಗ ಅತ್ಯಂತ ಶೋಷಣೆಗೆ ಒಳಗಾಗಿರುವ ಮಾದಿಗ ಸಮುದಾಯದವರನ್ನು ನೇಮಕ ಮಾಡುವಂತೆ ಹೇಳಿದವರು ದೇವನೂರ ಮಹಾದೇವ ಎಂದು ಹೇಳಿದರು.

ಸಂಘಕ್ಕೆ ದೇವನೂರ ಮಹಾದೇವ ತಾಯಿಯ ಎದೆ ಹಾಲಿನಂತೆ. ತಮ್ಮ ಜೀವನದುದ್ದಕ್ಕೂ ಕರುಣೆ ಮತ್ತು ಪ್ರೀತಿಯ ತತ್ತ್ವವನ್ನು ಧಾರೆ ಎರೆದಿದ್ದಾರೆ. ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಭ್ರಷ್ಟವಾಗದ ಮಾದರಿ ವ್ಯಕ್ತಿತ್ವ. ಎಚ್. ಗೋವಿಂದಯ್ಯ ಅವರು ಆರೋಪ ಮಾಡುವುದಕ್ಕೆ ಸಾಕ್ಷಿ, ಆಧಾರ ಇದಿಯಾ? ಅವರು ದಲಿತರ ಏಕತೆ ಬಯಸದೇ ಒಡಕಿನ ಮಾತು ಆಡಿದ್ದಾರೆ. ಸ್ವಾರ್ಥ ಇಟ್ಟುಕೊಂಡು ಮಾತಾಡುತ್ತಿದ್ದಾರೆ. ಒಡಕಿನ ಮಾತುಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಎಚ್. ಗೋವಿಂದಯ್ಯ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಆರ್‌.ಎಸ್‌.ಎಸ್ ಓಲೈಸುವ ಮಾತುಗಳನ್ನು ಆಡುತ್ತಿದ್ದಾರೆ. ಕೇಶವ ಕೃಪಾದ ಅಂಗಳದಲ್ಲಿ ನಿಂತಿದ್ದಾರೆ. ವಾದಿರಾಜನ ಶಿಷ್ಯತ್ವ ಪಡೆದು ಮತಿಭ್ರಮಣೆಗೆ ಒಳಗಾಗಿ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು.

ದೇವನೂರ ಮಹಾದೇವ ಅವರು ತಮಗೆ ಎರಡು ಬಾರಿ ಎಂ.ಎಲ್‌.ಸಿಯಾಗಿ ಒದಗಿಬಂದಿದ್ದ ಅವಕಾಶವನ್ನು ತಿರಸ್ಕರಿಸಿ ರಾಜಕೀಯ ಅಧಿಕಾರದಿಂದ ದೂರ ಉಳಿದಿದ್ದಾರೆ. ದೇವನೂರು ಅವರು ತಮಗೆ ಒದಗಿ ಬಂದಿದ್ದ ಅನೇಕ ಪುರಸ್ಕಾರಗಳನ್ನು ಸೈದ್ಧಾಂತಿಕ ಕಾರಣಗಳಿಗಾಗಿ ವಿನಯದಿಂದ ನಿರಾಕರಿಸಿ ತಮ್ಮ ಸಾರ್ವಜನಿಕ ಜೀವನದ ಸರಳತೆ, ಪ್ರಾಮಾಣಿಕತೆಗಳ ಮಾಲ್ಯಗಳನ್ನು ಹೆಚ್ಚಿಸಿದ್ದಾರೆ. ಇವರ ವಿರುದ್ಧ ತಳಬುಡವಿಲ್ಲದೆ ನಿಂದನೆ ಮಾಡುವುದು ವಿಕೃತಿ ಎಂದು ಅವರು ಖಂಡಿಸಿದರು.

ಆರ್‌.ಎಸ್‌.ಎಸ್ ಆಳ-ಅಗಲ ಪುಸ್ತಕ ಬರೆದ ದೇವನೂರ ಮಹಾದೇವ ಅವರು ದಲಿತ ಮುಖಂಡರ ಆಳ- ಅಗಲ ಬರೆಯುವಂತೆ ಹೇಳುವ ಗೋವಿಂದಯ್ಯನ ಮನಸ್ಸು ಎಷ್ಟು ಕೊಳಕಾಗಿರಬೇಕು ಎಂದು ಅವರು ಕಿಡಿಕಾರಿದರು.

ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಖಜಾಂಚಿ ಬಿ.ಡಿ. ಶಿವಮೂರ್ತಿ, ತಾಲೂಕು ಸಂಚಾಲಕ ಕಲ್ಲಹಳ್ಳಿ ಕುಮಾರ್, ಲೇಖಕ ವರಹಳ್ಳಿ ಆನಂದ್ ಇದ್ದರು.