ವಿಜೃಂಬಣೆಯಿಂದ ಹಡಪದ ಅಪ್ಪಣ ಜಯಂತಿ ಆಚರಣೆ

| Published : Jul 13 2024, 01:36 AM IST

ಸಾರಾಂಶ

ಬೀದರ್ ಡಿಸಿ ಕಛೇರಿ ಸಭಾಂಗಣದಲ್ಲಿ ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಪೂರ್ವಭಾವಿ ಸಭೆಯಲ್ಲಿ ಎಡಿಸಿ ಶಿವಕುಮಾರ ಶೀಲವಂತ ನಿರ್ಧಾರ

ಕನ್ನಡಪ್ರಭ ವಾರ್ತೆ ಬೀದರ್

ಪ್ರತಿ ವರ್ಷದಂತೆ ಜು.21ರಂದು ಹಡಪದ ಅಪ್ಪಣ್ಣ ಜಯಂತಿಯನ್ನು ಎಲ್ಲರೂ ಸೇರಿ ಅದ್ಧೂರಿಯಾಗಿ ಆಚರಿಸೋಣ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜು.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ಬೆಳಗ್ಗೆ 11 ಗಂಟೆಗೆ ಪೂಜ್ಯ ಚನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಲ್ಲಿ ಹೆಚ್ಚಿನ ಜನರು ಭಾಗವಹಿಸಬೇಕೆಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾ ರಂಗಮಂದಿರದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕು. ಬೀದರ್‌ ನಗರಸಭೆಯಿಂದ ಹಡಪದ ಅಪ್ಪಣ್ಣ ಪುತ್ಥಳಿಗೆ ವಿದ್ಯುತ್ ಹಾಗೂ ಬಣ್ಣ ಹಚ್ಚುವ ವ್ಯವಸ್ಥೆ ಮಾಡಬೇಕು. ಅಂದು ಸರ್ಕಾರದ ಎಲ್ಲಾ ವಿವಿಧ ಇಲಾಖೆಗಳಲ್ಲಿ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕೆಂದು ಹೇಳಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ ಮಾತನಾಡಿ, ಕಾರ್ಯಕ್ರಮ ದಿನದಂದು ಯಾವುದೆ ತೊಂದರೆಯಾಗದಂತೆ ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಲಾಗುವುದು. ಮಹನೀಯರ ಜಯಂತಿಗಳನ್ನು ಎಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸಬೇಕು ಎಂದರು.

ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸಂಘದ ಜಿಲ್ಲಾಧ್ಯಕ್ಷ ಪ್ರಭುರಾವ್ ತರನಳ್ಳಿ ಮಾತನಾಡಿ, ಜು.21ರಂದು ಭಾನುವಾರ ಇರುವುದರಿಂದ ಮೆರವಣಿಗೆ ಕಾರ್ಯಕ್ರಮ ನಡೆಸದೆ, ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಮಾಡಬೇಕೆಂದು ತಿಳಿಸಿದರು.

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಸಿದ್ರಾಮ ಶಿಂಧೆ, ಹಡಪದ ಅಪ್ಪಣ್ಣ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಸಂಗಮೇಶ ವಣಕೂರ, ಉಪಾಧ್ಯಕ್ಷ ಗಣೇಶ ಹಡಪದ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್ ಸೋನಾರೆ, ಅಬಕಾರಿ ಅಧಿಕಾರಿ ಬಿ.ಶರಣಮ್ಮ, ಕನ್ನಡ ಸಂಘಟನೆಯ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಶಿವಪ್ರಸಾದ, ಸಂಗೀತಾ ಬಿರಾದಾರ, ಸಂಗಪ್ಪ ಕಾಂಬಳೆ ಸೇರಿ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಹಡಪದ ಅಪ್ಪಣ್ಣ ಸಮಾಜದ ಬಾಂಧವರು ಉಪಸ್ಥಿತರಿದ್ದರು.