ಸಾರಾಂಶ
ಸಂಡೂರು: ತಾಲೂಕಿನ ಹಳೆ ದರೋಜಿ ಗ್ರಾಮದಲ್ಲಿ ಶನಿವಾರ ಸುರಿದ ಆಲಿಕಲ್ಲು ಮಳೆಯಿಂದ ೧೫೦ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆಗೆ ಸಂಪೂರ್ಣ ಹಾನಿಯಾಗಿದೆ.
ಆಲಿಕಲ್ಲು ಮಳೆಯಿಂದ ಕಟಾವಿಗೆ ಬಂದಿದ್ದ ಭತ್ತದ ಫಲಕ್ಕೆ ಹಾನಿಯುಂಟಾಗಿದೆ. ಭತ್ತದ ತೆನೆ ನೆಲಕ್ಕೆ ಬೀಳದೆ ಕೇವಲ ಅದರಲ್ಲಿನ ಕಾಳುಗಳು ನೆಲದ ಮೇಲೆ ಉದುರಿದೆ. ಗದ್ದೆ ಹಸಿಯಾಗಿರುವುದರಿಂದ ಕಾಳನ್ನು ಸಂಗ್ರಹಿಸಲು ಬಾರದಂತಹ ಸ್ಥಿತಿ ಉಂಟಾಗಿದೆ.ಹಳೆ ದರೋಜಿ ಭಾಗದ ರಾಮುಡು, ಹಸೇನ್ ಪೀರ, ರವಿ ಪ್ರಕಾಶ್, ಗುರುಮೂರ್ತಿ ಮುಂತಾದ ರೈತರ ಭತ್ತದ ಬೆಳೆ ಆಲಿಕಲ್ಲು ಮಳೆಯಿಂದ ಸಂಪೂರ್ಣ ಹಾಳಾಗಿದೆ.
ಕೃಷಿ ಅಧಿಕಾರಿಗಳ ಭೇಟಿ-ಪರಿಶೀಲನೆ:ಸಹಾಯಕ ಕೃಷಿ ನಿರ್ದೇಶಕ ಮಂಜುನಾಥರೆಡ್ಡಿ, ಕೃಷಿ ಅಧಿಕಾರಿ ಸಂತೋಷ್ ಹಾಗೂ ತಳವಾರ ಗಾಳೆಪ್ಪ ಸುದ್ದಿ ತಿಳಿದು ಭಾನುವಾರ ರೈತರ ಗದ್ದೆಗಳಿಗೆ ತೆರಳಿ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿದರು.
ಭತ್ತದ ಬೆಳೆ ಹಾನಿ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥರೆಡ್ಡಿ, ಶನಿವಾರ ಸಂಜೆ ಸುರಿದ ಆಲಿಕಲ್ಲು ಮಳೆಯಿಂದ ಹಳೆ ದರೋಜಿ ಗ್ರಾಮದ ಹಲವು ರೈತರು ಸುಮಾರು ೧೫೦ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆಗೆ ಹಾನಿಯಾಗಿದೆ. ಭತ್ತದ ಪೈರು ನೆಲಕ್ಕೆ ಒರಗಿಲ್ಲ. ಆದರೆ, ಭತ್ತದ ತೆನೆಯಲ್ಲಿನ ಕಾಳುಗಳೆಲ್ಲ ನೆಲದ ಮೇಲೆ ಉದುರಿವೆ. ಅವುಗಳನ್ನು ಸಂಗ್ರಹಿಸಲು ಬರುವುದಿಲ್ಲ. ರೈತರಿಗೆ ಬೆಳೆ ನಷ್ಟ ಉಂಟಾಗಿದೆ ಎಂದರು.ಬೆಳೆ ನಷ್ಟ ಅನುಭವಿಸಿರುವ ರೈತ ರಾಮುಡು ಮಾತನಾಡಿ, ನಾನು ೬ ಎಕರೆಯಲ್ಲಿ ಭತ್ತ ಬೆಳೆದಿದ್ದೆ. ಎಕರೆಗೆ ಸುಮಾರು ₹೫೦ ಸಾವಿರ ಖರ್ಚಾಗಿದೆ. ಆದರೆ, ಶನಿವಾರ ಸುರಿದ ಆಲಿಕಲ್ಲು ಮಳೆಯಿಂದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಕಾಳುಗಳೆಲ್ಲ ನೆಲಕ್ಕೆ ಉದುರಿವೆ. ಕಾಳುಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ. ನಮ್ಮ ಗ್ರಾಮದ ಹಲವು ರೈತರ ಸುಮಾರು ೧೮೦ ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಫಸಲು ಸಂಪೂರ್ಣವಾಗಿ ಹಾಳಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಆಲಿಕಲ್ಲಿನ ಮಳೆಯಿಂದ ಹಳೆ ದರೋಜಿಯ ಹಲವು ರೈತರು ಬೆಳೆದಿದ್ದ ಭತ್ತದ ಬೆಳೆ ಸಂಪುರ್ಣವಾಗಿ ಹಾಳಾಗಿರುವುದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರು ಒಂದೆಡೆ ಬೆಳೆ ಹಾನಿ, ಮತ್ತೊಂದೆಡೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.