ಡಿ.ಹಲಸಹಳ್ಳಿ ಬಳಿಯ ಗವಿಮಠದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ತುಮಕೂರು ಸಿದ್ಧಗಂಗಾ ಮಠದ ಕಿರಿಯಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಭೇಟಿ ನೀಡಿದ ವೇಳೆ ಮಠದ ಷಡಕ್ಷರ ಶ್ರೀಗಳು ಪೂರ್ಣಕುಂಭದೊಡನೆ ಸ್ವಾಗತಿಸಿದರು.
ಕನ್ನಡಪ್ರಭ ವಾರ್ತೆ ಹಲಗೂರು
ಷಡಕ್ಷರಿ ಗವಿಮಠದಲ್ಲಿ ನೂತನವಾಗಿ ನಿರ್ಮಿಸಿರುವ ರಾಜಗೋಪುರದ ಕಳಸಗಳಿಗೆ ತುಮಕೂರಿನ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳು ಕುಂಭಾಭಿಷೇಕ ನಡೆಸಿ ಪೂಜೆ ಸಲ್ಲಿಸಿದರು.ಡಿ.ಹಲಸಹಳ್ಳಿ ಬಳಿಯ ಗವಿಮಠದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ತುಮಕೂರು ಸಿದ್ಧಗಂಗಾ ಮಠದ ಕಿರಿಯಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಭೇಟಿ ನೀಡಿದ ವೇಳೆ ಮಠದ ಷಡಕ್ಷರ ಶ್ರೀಗಳು ಪೂರ್ಣಕುಂಭದೊಡನೆ ಸ್ವಾಗತಿಸಿದರು.
ನಂತರ ಪಾದಪೂಜೆ ನಡೆಸಿದ ನಂತರ ಶ್ರೀಗಳು ರಾಜಗೋಪುರಕ್ಕೆ ತೆರಳಿ ವಿಶೇಷವಾಗಿ ಪೂಜೆ ಸಲ್ಲಿಸಿ ಕುಂಭಾಭಿಷೇಕ ನಡೆಸಿ ನಂತರ ನೆರದಿದ್ದ ಭಕ್ತರಿಗೆ ಆಶೀರ್ವದಿಸಿದರು. ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಸ್ವಾಮೀಜಿ ಸಾನಿಧ್ಯದಲ್ಲಿ ಗವಿಮಠದ ಷಡಕ್ಷರ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಮೈಸೂರಿನ ಹೊಸಮಠದ ಚಿದಾನಂದ ಸ್ವಾಮೀಜಿಗಳ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಶ್ರೀ ಮಲೆ ಮಹದೇಶ್ವರ ಬೆಟ್ಟದ ಡಾ.ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮಲ್ಲನ ಮೂಲೆ ಕಂಭಲೇಶ್ವರ ಮಠದ ಇಮ್ಮಡಿ ಸಿದ್ದಲಿಂಗ ಸ್ವಾಮೀಜಿ, ಮಾದಹಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ, ಗಾವಡಗೆರೆ ಗುರುಲಿಂಗ ಜಂಗಮದೇವ ಮಠದ ನಟರಾಜ ಸ್ವಾಮೀಜಿ, ಬಿ.ಜಿ.ಪುರ ಹೊರಮಠದ ಚಂದ್ರಶೇಖರ ಸ್ವಾಮೀಜಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಪಡಗೂರು ಅಡವಿ ಮಠದ ಶಿವಲಿಂಗ ಸ್ವಾಮೀಜಿ, ನೆಲಮಂಗಳ ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ, ಎಂ.ಎಲ್.ಹುಂಡಿ ವಿರಕ್ತಮಠದ ಗೌರಿಶಂಕರ ಸ್ವಾಮೀಜಿ, ಸರಗೂರು ಪಡವಲು ಮಠದ ಮಹದೇವ ಸ್ವಾಮೀಜಿ, ಕಂಚು ಗಲ್ಲು ಬಂಡೆ ಮಠದ ಬಸವಲಿಂಗ ಸ್ವಾಮೀಜಿ, ತೋಟಹಳ್ಳಿ ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ, ಸಾನಿಧ್ಯದಲ್ಲಿ ನೂತನವಾಗಿ ನಿರ್ಮಿಸಿರುವ ವಿಮಾನ ಗೋಪುರ ಕಳಶರೋಹಣ ಮತ್ತು ಕುಂಭಾಭಿಷೇಕ ಅಪಾರ ಭಕ್ತಾದಿಗಳ ನಡುವೆ ಭಕ್ತಿ ಭಾವ ಪೂರಕವಾಗಿ ನಡೆಯಿತು.ಗವಿಮಠದ ಷಡಕ್ಷರ ಸ್ವಾಮೀಜಿ ಮಾತನಾಡಿ, ದಿನನಿತ್ಯ 6 ಸಾವಿರದಿಂದ 7 ಸಾವಿರ ಭಕ್ತರಿಗೆ ಬೆಳಗಿನ ಫಲಹಾರ ಸೇರಿದಂತೆ ಮಧ್ಯಾಹ್ನ ಮತ್ತು ರಾತ್ರಿ ದಾಸೋಹ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ವರ್ಗದ ಭಕ್ತರು ಸೇರಿ ಕೆಲಸ ಮಾಡುತ್ತಾ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಬಿಸಿಲಿನ ತಾಪವನ್ನು ನೀಗಿಸಿಕೊಳ್ಳಲು ಮಜ್ಜಿಗೆ ಸೇರಿದಂತೆ ಎಲ್ಲರಿಗೂ ಪ್ರಸಾದ ವಿನಯೋಗಿಸಿದ್ದಾರೆ ಎಂದು ಶ್ಲಾಘಿಸಿದರು.