ಸಾರಾಂಶ
ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ, ಮಂಗಳೂರು ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿಯ ಸಹಯೋಗದಲ್ಲಿ ಹಳೆಯಂಗಡಿ ಇಂಡಿಯನ್ ಯೋಗ ಮಂದಿರದಲ್ಲಿ ಜರಗಿದ ಗುಲಾಬಿ ಹಾಗೂ ಇತರ ಹೂವಿನ ಸಸಿಗಳ ಸಂರಕ್ಷಣೆ ಹಾಗೂ ಕಸಿ ಕಟ್ಟುವ ಉಚಿತ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮೂಲ್ಕಿ
ದೇಶದಲ್ಲಿ ಹಲವು ಬಗೆಯ ಹೂವಿನ ಸಸಿಗಳ ಸಂತಾನ ನಶಿಸಿ ಹೋಗುತ್ತಿದ್ದು ಎಲ್ಲಾ ತಳಿಯ ಹೂವಿನ ಸಸಿಗಳನ್ನು ತಮ್ಮ ಮನೆಗಳ ಸುತ್ತಲೂ, ಟೆರೇಸಿನ ಮೇಲೆ ಬೆಳೆಸುವುದು ಪರಿಸರ ಸಂರಕ್ಷಣೆ ಜೊತೆಗೆ ಆರೋಗ್ಯ ವೃದ್ದಿಗೆ ಸಹಕಾರಿ ಎಂದು ಪಾಸ್ಟರ್ ಶಾಲೋಮ್ ದಾವಣಗೆರೆ ಹೇಳಿದ್ದಾರೆ.ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ, ಮಂಗಳೂರು ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿಯ ಸಹಯೋಗದಲ್ಲಿ ಹಳೆಯಂಗಡಿ ಇಂಡಿಯನ್ ಯೋಗ ಮಂದಿರದಲ್ಲಿ ಜರಗಿದ ಗುಲಾಬಿ ಹಾಗೂ ಇತರ ಹೂವಿನ ಸಸಿಗಳ ಸಂರಕ್ಷಣೆ ಹಾಗೂ ಕಸಿ ಕಟ್ಟುವ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಭಾರತದ ಕ್ರ್ಯೆಸ್ತ ಚರ್ಚುಗಳ ಒಕ್ಕೂಟದ ಅಧ್ಯಕ್ಷ ಡೇನಿಯಲ್ ದೇವರಾಜ್ ಮಾತನಾಡಿ, ಗ್ರಾಮಸ್ಥರು ಎಲ್ಲಾ ಬಗೆಯ ಹೂವಿನ ಸಸಿಗಳನ್ನು ಬೆಳೆಸಿ, ಸಂರಕ್ಷಿಸುವುದರಿಂದ ಉತ್ತಮ ಗಾಳಿಯಿಂದ ಆರೋಗ್ಯ ವೃದ್ದಿಯಾಗುತ್ತದೆಯೆಂದು ಹೇಳಿದರು.ವೃಂದಾ ಭಟ್ ಹೂವಿನ ಸಸಿಗಳ ಕಸಿ ಕಟ್ಟುವ ವಿಧಾನ ಹಾಗೂ ಹೂವಿನ ಸಸಿಗಳನ್ನು ಬೆಳೆಸುವ ಸಂರಕ್ಷಿಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ಮಾಹಿತಿ ನೀಡಿದರು. ಗ್ರಾಮಸ್ಥರಿಗೆ ಉಚಿತವಾಗಿ ವಿವಿಧ ಬಗೆಯ ಹೂವಿನ ಸಸಿಗಳನ್ನು ವಿತರಣೆ ಮಾಡಿದರು.
ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಪಾಸ್ಟರ್ ರಾಜೇಶ್ ಕೋಟ್ಯಾನ್, ಹಿರಿಯ ಕೃಷಿಕರಾದ ನ್ಯಾನ್ಸಿ ಕರ್ಕಡ, ಅಬ್ಬುಬಕ್ಕರ್ ಸಿದ್ದಿಕ್, ಶಿಕ್ಷಕಿ ಶೀಲಾ ಶೆಟ್ಟಿ ಇದ್ದರು.ಮೂಡಬಿದಿರೆ ಡಿಕ್ಸನ್ ಸ್ವಾಗತಿಸಿದರು. ಸಿಎಸ್‌ಐ ಶಾಲಾ ಶಿಕ್ಷಕಿ ಪ್ರಸನ್ನಿ ವಂದಿಸಿದರು. ನ್ಯಾಯಾಲಯದ ಮಹಮ್ಮದ್ ಅಕ್ಬರ್ ನಿರೂಪಿಸಿದರು.