ರಾಯರ ಮಠದ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿ ಮಠದ ಸತ್ಯಾತ್ಮ ತೀರ್ಥರು ನರಹರಿ ತೀರ್ಥರ ಮಧ್ಯಾರಾಧನೆ ನಿಮಿತ್ತ ಸಮಾಗಮಗೊಂಡರು.
ಹೊಸಪೇಟೆ: ಹಂಪಿ ನರಹರಿ ತೀರ್ಥರ ಬೃಂದಾವನ ಸನ್ನಿಧಿಯಲ್ಲಿ ರಾಯರ ಮಠದ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿ ಮಠದ ಸತ್ಯಾತ್ಮ ತೀರ್ಥರು ನರಹರಿ ತೀರ್ಥರ ಮಧ್ಯಾರಾಧನೆ ನಿಮಿತ್ತ ಸಮಾಗಮಗೊಂಡರು.
ಹಂಪಿ ತುಂಗಭದ್ರಾ ನದಿ ತೀರದ ನರಹರಿ ತೀರ್ಥರ ಬೃಂದಾವನ ಸನ್ನಿಧಿಯಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ವಿಶೇಷವಾಗಿ ಉತ್ತರಾದಿ ಮಠದ ಸತ್ಯಾತ್ಮ ತೀರ್ಥರು ಬೃಂದಾವನಕ್ಕೆ ಪಂಚಾಮೃತಾಭಿಷೇಕ ನೆರವೇರಿಸಿ ಸಂಸ್ಥಾನ ಪೂಜೆ ಮಾಡಿದರು. ಬೃಂದಾವನಕ್ಕೆ ವಿಶೇಷ ಅಲಂಕಾರ, ನೈವೇದ್ಯ, ಮಹಾಮಂಗಳಾರತಿ ನೆರವೇರಿಸಿದರು. ನೆರೆದಿದ್ದ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು. ಸಂಜೆ ಸತ್ಮಾತ್ಮ ತೀರ್ಥರು ರಾಯರ ಮಠದ ಸುಬುಧೇಂದ್ರ ತೀರ್ಥರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಆನಂತರ ಉಭಯ ಸ್ವಾಮೀಜಿಗಳು ನರಹರಿ ತೀರ್ಥರ ಬೃಂದಾವನಕ್ಕೆ ಆರತಿ ಬೆಳಗಿ ಪರಸ್ಪರ ಶಾಲು ಹೊದೆಸಿ ಗೌರವಿಸಿದರು.ಬಳಿಕ ಮಾತನಾಡಿದ ಉತ್ತರಾದಿ ಮಠದ ಸತ್ಯಾತ್ಮ ತೀರ್ಥರು, ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಮಾಧ್ವ ಪ್ರಪಂಚಕ್ಕೆ ಮಾತ್ರವಲ್ಲದೆ ವೈಷ್ಣವರಿಗೆ ಅವಿಸ್ಮರಣೀಯವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸೌಹಾರ್ದ ಸಮಾಗಮ ನಡೆದಿತ್ತು. ಅದರ ಮುಂದುವರಿದಿದ್ದು ಇದು ಹೀಗೆ ಮುಂದುವರಿಯಲಿದೆ ಎಂದರು.
ಉತ್ತಾರಾಧನೆ, ಸಂಸ್ಥಾನ ಪೂಜೆ:ನರಹರಿ ತೀರ್ಥರ ಉತ್ತರಾರಾಧನೆ ನಿಮಿತ್ತ ಬೃಂದಾವನಕ್ಕೆ ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ ಭಾನುವಾರ ನೆರವೇರಿಸಿದರು. ಬಳಿಕ ಮೂಲ ರಾಮದೇವರ ಸಂಸ್ಥಾನದ ಪೂಜೆ ನೆರವೇರಿಸಿ ನೆರೆದಿದ್ದ ಭಕ್ತರಿಗೆ ಅನುಗ್ರಹ ಸಂದೇಶ ನೀಡಿ, ನರಹರಿ ತೀರ್ಥರು ಮನುಕುಲಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ಆರಾಧನೆ ದಿನದಂದು ಪಾದೋದಕ, ಹಸ್ತೋದಕ ಸ್ವೀಕಾರ ಹಾಗೂ ಅವರ ಗ್ರಂಥಗಳ ಬಗ್ಗೆ ಸ್ಮರಣೆ ಮಾಡುವುದೇ ಮಹಾಭಾಗ್ಯ ಎಂದರು.
ಬೆಂಗಳೂರಿನಲ್ಲಿ ಈಚೆಗೆ ಉತ್ತಾರಾದಿ ಮಠದ ಶ್ರೀಗಳೊಂದಿಗೆ ನಡೆದ ಸೌಹಾರ್ದ ಸಮಾಗಮದ ಸಂದರ್ಭದಲ್ಲಿ ನರಹರಿ ತೀರ್ಥರ ಎರಡು ದಿನಗಳ ಆರಾಧನೆ ನೆರವೇರಿಸಲು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ನೆರವೇರಿಸಿ ಶ್ರೀಗಳು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸೌಹಾರ್ದ ಹೆಜ್ಜೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಮುಂದುವರಿಯಲಿದೆ. ಕೇವಲ ಶ್ರೀಗಳಿಂದ ಮಾತ್ರ ಸೌಹಾರ್ದ ಆಗಿದ್ದಲ್ಲ, ಶಿಷ್ಯರು, ಭಕ್ತರು ಎಲ್ಲರೂ ಕಾರಣರಾಗಿದ್ದಾರೆ. ನರಹರಿ ತೀರ್ಥರ ಸನ್ನಿಧಿಯಲ್ಲಿ ಈ ಹಿಂದೆ ಪ್ರಕ್ಷುಬ್ಧ ವಾತಾವರಣದ ಸನ್ನಿವೇಶವಿತ್ತು. ಆದರೆ ಅದೆಲ್ಲವೂ ಮುಗಿದು ವೈಷ್ಣವರ ಪಾಲಿಗೆ ಭಾಗ್ಯದ ಕ್ಷಣವಾಗಿದೆ ಎಂದು ಹೇಳಿದರು.ನಂತರ ನೆರೆದಿದ್ದ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಶ್ರೀಮಠ ಪಂಡಿತರಾದ ಬಂಡಿ ಶಾಮಾಚಾರ್ಯ, ದ್ವಾರಕನಾಥಾಚಾರ್ಯ, ಸುಳಾದಿ ಹನುಮೇಶಾಚಾರ್ಯ, ವೆಂಕಟೇಶಾಚಾರ್ಯ, ಪಿ.ವಿ. ಹರಿನಾಥಾಚಾರ್ಯ, ಸುಮಂತ್ ಕುಲಕರ್ಣಿ, ಡಣಾಪುರ ಶ್ರೀನಿವಾಸ, ಗುರುರಾಜ್ ದಿಗ್ಗಾವಿ ಸೇರಿದಂತೆ ರಾಜ್ಯ, ಹೊರ ರಾಜ್ಯದ ಭಕ್ತರು ಇದ್ದರು.