ತಾಲೂಕಿನ ಕಮಲಾಪುರ ಪುರಾತತ್ವ ವಸ್ತು ಸಂಗ್ರಹಲಯಕ್ಕೆ ಬುಧವಾರ ಬೇಟೆ ನೀಡಿ ಹಂಪಿ ವೃತ್ತದ ವಿವಿಧ ಪ್ರದೇಶಗಳಿಗೆ ಸುದೀರ್ಘ ಪರಿಶೀಲನೆ ನಡೆಸಿದರು.

ಹೊಸಪೇಟೆ: ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯ ಸ್ಮಾರಕಗಳ ರಕ್ಷಣೆ, ಪ್ರವಾಸಿಗರ ಮೂಲಸೌಕರ್ಯ ಹಾಗೂ ಕನ್ನಡ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಈ.ತುಕಾರಾಂ ಭರವಸೆ ನೀಡಿದರು.ತಾಲೂಕಿನ ಕಮಲಾಪುರ ಪುರಾತತ್ವ ವಸ್ತು ಸಂಗ್ರಹಲಯಕ್ಕೆ ಬುಧವಾರ ಬೇಟೆ ನೀಡಿ ಹಂಪಿ ವೃತ್ತದ ವಿವಿಧ ಪ್ರದೇಶಗಳಿಗೆ ಸುದೀರ್ಘ ಪರಿಶೀಲನೆ ನಡೆಸಿದರು.

ಪ್ರಮುಖವಾಗಿ ಕಮಲಾಪುರದ ಪುರಾತತ್ವ ವಸ್ತು ಸಂಗ್ರಹಾಲಯ, ಮಹಾನವಮಿ ದಿಬ್ಬ, ಹಜಾರರಾಮ ದೇವಾಲಯ, ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡಿದ ಅವರು, ಪ್ರವಾಸಿಗರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಸದರು ಆರಂಭದಲ್ಲಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಹಂಪಿಯ ವಿಶ್ವ ಪಾರಂಪರಿಕ ಇತಿಹಾಸವನ್ನು ಬಿಂಬಿಸುವ ವಿಡಿಯೋ ಪ್ರದರ್ಶನ ವೀಕ್ಷಿಸಿದರು. ಪ್ರಸ್ತುತ ಇಂಗ್ಲಿಷ್‌ನಲ್ಲಿರುವ ಇತಿಹಾಸದ ವಿಡಿಯೋವನ್ನು ಸ್ಥಳೀಯ ಹಾಗೂ ರಾಜ್ಯದ ಪ್ರವಾಸಿಗರ ಅನುಕೂಲಕ್ಕಾಗಿ ಕನ್ನಡ ಭಾಷೆಯಲ್ಲೂ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಹಂಪಿ ವೀಕ್ಷಣೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಕೇವಲ 1 ಒಪನ್ ಅಂಬಾರಿ ಬಸ್ ವ್ಯವಸ್ಥೆಯ ಜೊತೆಗೆ, ಪ್ರವಾಸಿಗರ ಒತ್ತಡ ನಿರ್ವಹಿಸಲು ಇನ್ನು 3 ಹೊಸ ಅಂಬಾರಿ ಬಸ್ ಒದಗಿಸುವುದಾಗಿ ಭರವಸೆ ನೀಡಿದರು.

ಹಂಪಿಯ ವಿವಿಧ ಐತಿಹಾಸಿಕ ಸ್ಮಾರಕಗಳ ಬಳಿ ಇರುವ ನಾಗರಿಕ ಸಮಸ್ಯೆಗಳ ಕುರಿತು ಸಂಸದ ಈ. ತುಕಾರಾಂ ಮಾಹಿತಿ ಪಡೆದರು. ಮಹಾನವಮಿ ದಿಬ್ಬದ ಬಳಿ ಕುಡಿಯುವ ನೀರು ಮತ್ತು ಶೌಚಾಲಯದ ಗಂಭೀರ ಸಮಸ್ಯೆಯನ್ನು ಖುದ್ದಾಗಿ ಪರಿಶೀಲಿಸಿದ ಅವರು, ಶೀಘ್ರದಲ್ಲೇ ಸರಿಪಡಿಸುವುದಾಗಿ ತಿಳಿಸಿದರು. ಹಜಾರರಾಮ ದೇವಾಲಯ ಆವರಣ ಪ್ರದೇಶಗಳಿಗೂ ಭೇಟಿ ನೀಡಿ ಅಲ್ಲಿನ ಸ್ಥಳೀಯ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ವಿರೂಪಾಕ್ಷ ದೇವಾಲಯದ ಮುಂಭಾಗದಲ್ಲಿರುವ ಕುಡಿಯುವ ನೀರು ಹಾಗೂ ಚರಂಡಿ ವ್ಯವಸ್ಥೆಯನ್ನು ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅತ್ಯಂತ ವೇಗವಾಗಿ ದುರಸ್ತಿಗೊಳಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂಸದರು, ಕುಲಪತಿ ಹಾಗೂ ಕುಲಸಚಿವರೊಂದಿಗೆ ಚರ್ಚಿಸಿದರು. ಈ ವೇಳೆ ವಿಶ್ವವಿದ್ಯಾಲಯ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು ಹಾಗೂ ಬೋಧಕ ಸಿಬ್ಬಂದಿಯ ಕೊರತೆ ಬಗ್ಗೆ ಕುಲಪತಿಗಳು ಸಂಸದರ ಗಮನಕ್ಕೆ ತಂದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದರು, ಕನ್ನಡ ವಿಶ್ವವಿದ್ಯಾಲಯವು ನಾಡಿನ ಹೆಮ್ಮೆಯ ಸಂಸ್ಥೆಯಾಗಿದೆ. ಇಲ್ಲಿನ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಕರ ನೇಮಕಾತಿಗೆ ಮೊದಲ ಆದ್ಯತೆ ನೀಡಲಾಗುವುದು. ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ವಿಶೇಷ ಅನುದಾನ ಶೀಘ್ರದಲ್ಲೇ ಬಿಡುಗಡೆ ಮಾಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಖುದ್ದಾಗಿ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಂಪಿ ಎಎಸ್‌ಐ ವ್ಯಾಪ್ತಿಯ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.