ಮುಧೋಳ : ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 2,60,000 ಹುದ್ದೆಗಳು ಖಾಲಿ ಇವೆ. ಇವುಗಳನ್ನು ತುಂಬುವುದಕ್ಕೆ ಮೂರು ವರ್ಷಗಳಲ್ಲಿ 17 ಬಾರಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಯಾವುದೇ ನೇಮಕ ಆಗಿಲ್ಲ. ಪರೀಕ್ಷಾರ್ಥಿಗಳು ಸಹನೆ ಕಳೆದುಕೊಳ್ಳುತ್ತಿದ್ದಾರೆ, ದಂಗೆ ಏಳುವ ಅಪಾಯ ಕಾಣುತ್ತಿದೆ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬೇಗ ನೇಮಕಾತಿ ಪೂರ್ಣಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಹಣಮಂತ ಆರ್. ನಿರಾಣಿ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಮುಧೋಳ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 2,60,000 ಹುದ್ದೆಗಳು ಖಾಲಿ ಇವೆ. ಇವುಗಳನ್ನು ತುಂಬುವುದಕ್ಕೆ ಮೂರು ವರ್ಷಗಳಲ್ಲಿ 17 ಬಾರಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಯಾವುದೇ ನೇಮಕ ಆಗಿಲ್ಲ. ಯುವಕರು ಪರೀಕ್ಷಾ ಶುಲ್ಕ ಕಟ್ಟಿ ಹೈರಾಣಾಗಿದ್ದಾರೆ. ಅವರು ಧಾರವಾಡ ಮತ್ತು ಗುಲ್ಬರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪರೀಕ್ಷಾರ್ಥಿಗಳು ಸಹನೆ ಕಳೆದುಕೊಳ್ಳುತ್ತಿದ್ದಾರೆ, ದಂಗೆ ಏಳುವ ಅಪಾಯ ಕಾಣುತ್ತಿದೆ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬೇಗ ನೇಮಕಾತಿ ಪೂರ್ಣಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಹಣಮಂತ ಆರ್. ನಿರಾಣಿ ಒತ್ತಾಯಿಸಿದರು.ಬೆಳಗಾವಿ ಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು, ಸರಕಾರಿ ನೇಮಕದ ಗೊಂದಲಗಳು, ಹೆಚ್ಚು ಪರೀಕ್ಷಾ ಶುಲ್ಕದ ಭಾರ, ಪಾಲಕರು ಎದುರಿಸುತ್ತಿರುವ ನೋವು ಸಂಕಟದ ಗಂಭೀರ ವಿಷಯಗಳನ್ನು ಹನಮಂತ ನಿರಾಣಿ ಅವರು ವಿವರಿಸುವಾಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಮೂರು ಬಾರಿ ಸಮಯ ಮುಗಿದ ಬಗ್ಗೆ ಗಂಟೆ ಬಾರಿಸಿದರು. ಮಾತು ನಿಲ್ಲಿಸಲು ಸೂಚನೆ ಕೂಡ ನೀಡಿದರು. ಆವೇಶದಲ್ಲಿದ್ದ ಹಣಮಂತ ನಿರಾಣಿಯವರು ಮಾತು ನಿಲ್ಲಿಸದೆ ಹೇಳಬೇಕಾದದ್ದನ್ನೆಲ್ಲ ಹೇಳಿಯೇ ಬಿಟ್ಟರು.ಕೇಂದ್ರ ಸರ್ಕಾರ ನೇಮಕಾತಿ ಸ್ಪರ್ಧಾ ಪರೀಕ್ಷೆಗಳ ಫೀ ₹150 -200 ಇದೆ. ರಾಜ್ಯ ಸರ್ಕಾರ ₹750 ವಸೂಲು ಮಾಡುತ್ತಿದೆ. ಸರಕಾರ ಅನುದಾನ ಕೊಟ್ಟು ಉಚಿತವಾಗಿ ಪರೀಕ್ಷೆ ನಡೆಸಬೇಕು. ಪರೀಕ್ಷೆಯ ಮೂಲಕ ಹಣ ವಸೂಲು ಮಾಡುವ ವ್ಯಾಪಾರವನ್ನು ನಿಲ್ಲಿಸಬೇಕು. ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಬೇಕು. ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದ್ದರಿಂದ ವಯೋಮಿತಿ ಕಡ್ಡಾಯವಾಗಿ ಹೆಚ್ಚಿಸಬೇಕೆಂದು ಅವರು ಸದನದಲ್ಲಿ ಒತ್ತಾಯಪಡಿಸಿದರು.