ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು ತಾಲೂಕಿನ ಹಂಚೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಲಾಟರಿ ಮೂಲಕ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪುಷ್ಪ ಹಾಗೂ ಉಪಾಧ್ಯಕ್ಷರಾಗಿ ಷಣ್ಮುಖ ಚುನಾಯಿತರಾದರು.
ಹನ್ನೊಂದು ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಪುಷ್ಪ ಮತ್ತು ಜೆಡಿಎಸ್ ಬೆಂಬಲಿತ ಪಾರ್ವತಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಷಣ್ಮುಖ ಮತ್ತು ಜೆಡಿಎಸ್‌ನ ಮಂಜೇಗೌಡ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಗೌಪ್ಯ ಮತದಾತದಲ್ಲಿ ಪುಷ್ಪ ಮತ್ತು ಪಾರ್ವತಮ್ಮ ಹಾಗೂ ಷಣ್ಮುಖ ಮತ್ತು ಮಂಜೇಗೌಡ ತಲಾ ಐದು ಮತ ಪಡೆದುಕೊಂಡರು. ಓರ್ವ ಮಹಿಳಾ ಸದಸ್ಯರ ಮತ ತಿರಸ್ಕಾರಗೊಂಡಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು ಅವರು ಲಾಟರಿ ಆಯ್ಕೆ ಪ್ರಕ್ರಿಯೆ ನಡೆಸಿದರು. ಲಾಟರಿಯಲ್ಲಿ ಪುಷ್ಪ ಹಾಗೂ ಷಣ್ಮುಖ ಅವರಿಗೆ ಅದೃಷ್ಟ ಒಲಿಯಿತು.ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶ: ಚುನಾವಣಾ ಅಧಿಕಾರಿ ಲಿಂಗರಾಜು ಅವರು ಸದಸ್ಯರಿಗೆ ಸರಿಯಾಗಿ ಮಾಹಿತಿ ನೀಡಲಿಲ್ಲ. ಜಯಮ್ಮ ಅವರು ಅವಿದ್ಯಾವಂತರಾಗಿರುವ ಹಿನ್ನೆಲೆಯಲ್ಲಿ ತನಗೆ ಬೇಕಾದ ಅಭ್ಯರ್ಥಿಗೆ ಮತ ನೀಡಲು ಸಹಕಾರ ನೀಡುವಂತೆ ಕೋರಲಾಗಿತ್ತು. ಆದರೆ ಚುನಾವಣಾಧಿಕಾರಿಗಳು ಸಹಕಾರ ನೀಡದೆ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ತಾಲೂಕು ಪಂಚಾಯ್ತಿ ಜೆಡಿಎಸ್ ಸದಸ್ಯ ಸಿ.ವಿ. ಲಿಂಗರಾಜು ಹಾಗೂ ಜೆಡಿಎಸ್ ಮುಖಂಡರು ಜೆಡಿಎಸ್ ಕಾರ್ಯಕರ್ತರನ್ನು ಸಮಾಧಾನಪಡಿಸಿದರಾದರು ಪುನಃ ಚುನಾವಣೆ ನಡೆಸುವಂತೆ ಒತ್ತಾಯಿಸಿದರು.ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆ ತಿಳಿಸಿ, ಜನಸಾಮಾನ್ಯರಿಗೆ ಸರ್ಕಾರದಿಂದ ಬರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಲು ಕ್ರಮವಹಿಸಲಾಗುವುದು. ಹಂಚೂರು ಗ್ರಾಮ ಪಂಚಾಯಿತಿ ಇಂದಿನಿಂದಲೂ ಬಿಜೆಪಿ ಭದ್ರಕೋಟೆಯಾಗಿದ್ದು ಋಣ ನಮ್ಮ ಮೇಲಿದೆ. ಆ ಋಣವನ್ನು ತೀರಿಸಲು ನಮಗೆ ಹಾಗೂ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಬೆಂಬಲಿಸಿದ ಸದಸ್ಯರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಸಿ.ವಿ.ಲಿಂಗರಾಜು, ಪಿ ಎಲ್.ನಿಂಗರಾಜು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂವಯ್ಯ ಲೋಕೇಶ್ ಕಣಗಾಲು, ಅಜಿತ್ ಚಿಕ್ಕಣಗಾಲ್, ನಾಗರಾಜ್ ಕಟ್ಟೆಗದ್ದೆ, ಗಣೇಶ್, ಹನುಮಂತೇಗೌಡ ಇದ್ದರು.