ಸಾರಾಂಶ
ಧಾರವಾಡ: ಕೈಗಾರೀಕರಣ ಮತ್ತು ನಗರೀಕರಣದ ಪರಿಣಾಮ ಕೈಮಗ್ಗ ಉದ್ದಿಮೆ ನಶಿಸುತ್ತಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಅಗತ್ಯವಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಇಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ನಲ್ಲಿ ನ. 14ರ ವರೆಗೆ ಆಯೋಜಿಸಿರುವ ಹಾತ್‌ಕರ್ಗಾ ಕೈಮಗ್ಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಕೈಮಗ್ಗ ನೇಕಾರಿಕೆ ಶ್ರೀಮಂತ, ಸಾಂಸ್ಕೃತಿಕ ಪರಂಪರೆಯ ಆಚರಣೆಯನ್ನು ಈಗಲೂ ಮುಂದುವರಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ನೇಕಾರರ ಶ್ರಮವನ್ನು ಗೌರವಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಪ್ರಾಚೀನ ಕಾಲದಿಂದಲೂ ದೇಶದ ಇತಿಹಾಸ, ಸಂಸ್ಕೃತಿ ಹಾಗೂ ಪೂರ್ವ ಚರಿತ್ರೆಯನ್ನು ನೇಕಾರಿಕೆ ಮೂಲಕ ಪ್ರಚುರಪಡಿಸುತ್ತ ಬಂದಿದ್ದಾರೆ. ಅವರು ತಯಾರಿಸಿದ ಆಕರ್ಷಣೆಯ ಜವಳಿ ಉತ್ಪನ್ನಗಳು ಸದಾ ದೇಶದ ಭವ್ಯತೆ ಹಾಗೂ ಪರಂಪರೆಯನ್ನು ಸೂಸುತ್ತ ಬಂದಿವೆ ಎಂದು ಬಣ್ಣಿಸಿದರು.
ನೇಕಾರರ ಜೀವನವನ್ನು ಉತ್ತೇಜಿಸಲು ಕೈಮಗ್ಗ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಬೇಕು. ನೇಕಾರರ ಬದುಕನ್ನು ಉತ್ತಮಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕಿದೆ ಎಂದರು.ನೇಕಾರರ ಅಭ್ಯುದಯಕ್ಕೆ ಸರ್ಕಾರ ರೂಪಿಸಿರುವ ಯೋಜನೆಗಳನ್ನು ವಿವರಿಸಿದ ಸಚಿವರು, 2024-25ನೇ ಸಾಲಿಗೆ ಮಿತವ್ಯಯ ನಿಧಿ ಯೋಜನೆಯಡಿ 44 ಕೈಮಗ್ಗ ನೇಕಾರ ಸಹಕಾರ ಸಂಘಗಳಿಗೆ ₹30.75 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 15 ಕೈಮಗ್ಗ ನೇಕಾರ ಸಹಕಾರ ಸಂಘಗಳಿಗೆ ಶೇ. 20ರಷ್ಟು ರಿಯಾಯಿತಿ ಯೋಜನೆಯಲ್ಲಿ ₹54.30 ಲಕ್ಷ ಬಿಡುಗಡೆ ಮಾಡಲಾಗಿದೆ. ಇದೇ ಸಾಲಿನಲ್ಲಿ ನೇಕಾರ ಸಮ್ಮಾನ್ ಯೋಜನೆಯಲ್ಲಿ ಪ್ರತಿ ಕೈಮಗ್ಗ ನೇಕಾರರಿಗೆ ಐದು ಸಾವಿರಗಳಂತೆ ಒಟ್ಟು 44,006 ನೇಕಾರರಿಗೆ ₹22.20 ಕೋಟಿ ಹಾಗೂ ಒಂದು ಲಕ್ಷ ವಿದ್ಯುತ್ ಮಗ್ಗ ನೇಕಾರರಿಗೆ ₹50.28 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಪಾರಂಪರಿಕ ನೇಕಾರಿಕೆ ಸಂಸ್ಕೃತಿ ಮತ್ತು ಪರಂಪರೆಯನ್ನುಸಂರಕ್ಷಣೆ ಮಾಡುವುದು ಹಾಗೂ ಉತ್ತೇಜಿಸುವುದು ಇಂದಿನ ಅಗತ್ಯವಾಗಿದೆ ಎಂಬುದು ನನ್ನ ಭಾವನೆ. ಕೈಮಗ್ಗ ಉತ್ಪನ್ನಗಳಲ್ಲಿರುವ ವೈವಿಧ್ಯತೆ, ಸೃಜನಶೀಲತೆಗೆ ಯುವಪೀಳಿಗೆಯು ಆಕರ್ಷಣೆ ಹೊಂದಲು ಇದೊಂದು ಸುವರ್ಣ ಅವಕಾಶ ಎಂದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವರ್ಣೀತ್ ನೇಗಿ, ವಿಭಾಗೀಯ ಜಂಟಿ ನಿರ್ದೇಶಕ ಶಿವರಾಜ್ ಕುಲಕರ್ಣಿ, ರಮಾನಂದ ಕುಲಕರ್ಣಿ ಹಾಗೂ ಇತರ ಅಧಿಕಾರಿಗಳಿದ್ದರು. ಉದ್ಘಾಟನೆಯ ನಂತರ ಎಲ್ಲ ಮಳಿಗೆಗಳಿಗೆ ಸಚಿವ ಶಿವಾನಂದ ಪಾಟೀಲರು ಭೇಟಿ ನೀಡಿ ಮಾಹಿತಿ ಪಡೆದರು.ಕರಕುಶಲ ವಸ್ತುಗಳನ್ನು ಆಸಕ್ತಿಯಿಂದ ವೀಕ್ಷಿಸಿ ಮಾಹಿತಿ ಪಡೆದರು. ವಸ್ತುಪ್ರದರ್ಶನದಲ್ಲಿ ಒಟ್ಟು 62 ಮಳಿಗೆಗಳಿದ್ದು, ಹೊರ ರಾಜ್ಯಗಳಿಗೆ ಹತ್ತು ಮಳಿಗೆಗಳನ್ನು ಮೀಸಲಿಡಲಾಗಿದೆ. ಒಂಭತ್ತು ಜಿಲ್ಲೆಗಳ ನೇಕಾರರು ಈ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. 10 ಸ್ಟಾಲ್‌ಗಳಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಇದೆ.