ಅಧ್ಯಕ್ಷರು, ಮುಖ್ಯಾಧಿಕಾರಿಗೆ ಕೈ ಸದಸ್ಯರ ತರಾಟೆ

| Published : Feb 26 2025, 01:04 AM IST

ಸಾರಾಂಶ

ರಾಮನಗರ: ಆಟೋ ಟಿಪ್ಪರ್, ಜೆಸಿಬಿ ಖರೀದಿ, ಆಯುಧ ಪೂಜೆ ಹಾಗೂ ಪೌರ ಕಾರ್ಮಿಕರ ಜಯಂತಿ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಯನ್ನು ತರಾಟೆ ತೆಗೆದುಕೊಂಡು ಪ್ರಸಂಗ ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಜರುಗಿತು.

ರಾಮನಗರ: ಆಟೋ ಟಿಪ್ಪರ್, ಜೆಸಿಬಿ ಖರೀದಿ, ಆಯುಧ ಪೂಜೆ ಹಾಗೂ ಪೌರ ಕಾರ್ಮಿಕರ ಜಯಂತಿ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಯನ್ನು ತರಾಟೆ ತೆಗೆದುಕೊಂಡು ಪ್ರಸಂಗ ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಜರುಗಿತು.

ಬಿಡದಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆಯ ಸಭಾ ನಡವಳಿ ಓದಿ ರೆಕಾರ್ಡ್ ಮಾಡುವ ವಿಚಾರ ಪ್ರಸ್ತಾಪಗೊಂಡಾಗ ಕಾಂಗ್ರೆಸ್ ಸದಸ್ಯ ಸಿ.ಉಮೇಶ್ ವಾಹನಗಳ ಖರೀದಿ, ಪೂಜೆ ಮತ್ತು ಜಯಂತಿ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿರುವುದಕ್ಕೆ ಅನುಮಾನ ವ್ಯಕ್ತಪಡಿಸಿ ಚರ್ಚೆಗೆ ಅನುವು ಮಾಡಿಕೊಟ್ಟರು.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 27.60 ಲಕ್ಷ ರು. ವೆಚ್ಚದಲ್ಲಿ 3 ಆಟೋ ಟಿಪ್ಪರ್ ಮತ್ತು 36 ಲಕ್ಷದಲ್ಲಿ ಜೆಸಿಬಿ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಸಿದ್ದೀರಿ. ಮಾರುಕಟ್ಟೆಯಲ್ಲಿ ಒಂದು ಆಟೋ ಟಿಪ್ಪರ್ 3.30 ಲಕ್ಷ ಬೆಲೆಯಿದ್ದು, ಮೂರು ವಾಹನಗಳಿಗೆ 9.90 ಲಕ್ಷ ರು. ತಗಲುತ್ತದೆ. ಆದರೆ, 27.30 ಲಕ್ಷ ರು. ನೀಡಿ ಮೂರು ವಾಹನ ಖರೀದಿಸುವಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಸದಸ್ಯ ಸಿ.ಉಮೇಶ್ ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ನಾಗರಾಜು, ಜೆಸಿಬಿ ಖರೀದಿಯಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಿಸಿದಾಗ ಕಾಂಗ್ರೆಸ್ ಸದಸ್ಯರು, ಸರ್ಕಾರದ ಅನುದಾನ ಬಳಕೆ ಮಾಡುವಾಗ ಅಧಿಕಾರಿಗಳು ಕಣ್ಣು ಮುಚ್ಚಿ ಕೆಲಸ ಮಾಡಿರುವುದು ಮೋಲ್ನೋಟಕ್ಕೆ ಕಂಡು ಬಂದಿದೆ. ಇದರಲ್ಲಿ ಜೆಡಿಎಸ್ ಸದಸ್ಯರು ಕಮಿಷನ್ ಪಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಟೀಕಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಗೋಡೆ ಬರಹ - ಚಿತ್ರೀಕರಣ ಮಾಡಿಸಲು ಟೆಂಡರ್ ಕರೆದು ಸಭೆಯಲ್ಲಿ ದರ ಅನುಮೋದನೆ ಪಡೆದು ಕ್ರಮ ವಹಿಸುವಂತೆ ಸಭೆ ಒಪ್ಪಿ ತೀರ್ಮಾನಿಸಿದೆ ಎಂದು ಉಲ್ಲೇಖವಾಗಿದೆ. ದರ ಏಕೆ ನಮೂದು ಮಾಡಿಲ್ಲ. 1 ಸಾವಿರದಿಂದ 1 ಕೋಟಿ ರುಪಾಯಿ ವರೆಗೆ ಎಷ್ಟು ಬೇಕಾದರು ಖರ್ಚು ತೋರಿಸಿ ಹಣ ಲೂಟಿ ಮಾಡಲು ನಿರ್ಧರಿಸಿದ್ದೀರಾ ಎಂದು ಸದಸ್ಯ ಉಮೇಶ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಅವಧಿ ಮುಕ್ತಾಯವಾಗಿರುವ ಅಂಗಡಿ ಮಳಿಗೆಗಳಿಗೆ ಸರ್ಕಾರದ ಆದೇಶದಂತೆ ಬಾಡಿಗೆ ಮೊತ್ತ ನಿಗದಿಪಡಿಸಿ, ನ್ಯಾಯಾಲಯದ ಪ್ರಕರಣ ಮುಕ್ತಾಯವಾಗುವರೆವಿಗೂ ಪರಿಷ್ಕೃತ ಬಾಡಿಗೆ ವಸೂಲಿ ಮಾಡಲು ಅಜೆಂಡಾ ಮಾಡಿ ಸಭೆ ಸರ್ವಾನುಮತದಿಂದ ಅನುಮೋದಿಸಿದೆ ಎಂದು ಹೇಳಿದ್ದೀರಿ. ಈ ಅಂಗಡಿ ಮಳಿಗೆಗಳನ್ನು ನೆಲಸಮಗೊಳಿಸಲು ಹಿಂದಿನ ಸಭೆಯಲ್ಲಿಯೇ ತೀರ್ಮಾನ ಮಾಡಲಾಗಿದೆ. ನೀವು ಅನುಮೋದನೆ ನೀಡಿರುವ ಪ್ರತಿಯನ್ನು ಹಿಡಿದು ಮಳಿಗೆ ಬಾಡಿಗೆದಾರರು ನ್ಯಾಯಾಲಯದ ಮೊರೆ ಹೋಗುತ್ತಾರೆ. ನೀವು ಯಾರದೊ ಪರ ಲಾಭಿಗೆ ಒಳಗಾಗಿ ಉಡಾಫೆಯಿಂದ ವರ್ತಿಸಬೇಡಿ ಎಂದು ಉಮೇಶ್ ಮುಖ್ಯಾಧಿಕಾರಿ ವಿರುದ್ಧ ಕಿಡಿಕಾರಿದರು.

ಪಟ್ಟಣದಲ್ಲಿ ಮೂರು ಕಡೆಗಳಲ್ಲಿ ಹೈಮಾಸ್ ದೀಪ ಅಳವಡಿಕೆ ವಿಚಾರ ಚರ್ಚೆಗೆ ಬಂದಾಗ ಸದಸ್ಯ ಉಮೇಶ್, ಎಲ್ಲಾ ವಾರ್ಡ್ ಗಳಿಗೂ ಹೈಮಾಸ್ ದೀಪದ ಅವಶ್ಯಕತೆ ಇದ್ದು, ಒಂದೆರೆಡು ವಾರ್ಡುಗಳಿಗೆ ಅವುಗಳನ್ನು ಸೀಮಿತಗೊಳಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಅಧ್ಯಕ್ಷ ಹರಿಪ್ರಸಾದ್, ಸದಸ್ಯರು ಮತ್ತು ನಾಗರಿಕರ ಕೋರಿಕೆ ಮೇರೆಗೆ ಅವಶ್ಯಕತೆ ಇರುವ ಕಡೆಗಳಲ್ಲಿ ಹೈಮಾಸ್ ದೀಪಗಳನ್ನು ಅಳವಡಿಸಲು ಕ್ರಮ ವಹಿಸೋಣ ಎಂದು ಹೇಳಿದರು.

ಸದಸ್ಯ ರಮೇಶ್ ಮಾತನಾಡಿ ಸ್ಥಾಯಿ ಸಮಿತಿ ಸಭೆಗೆ ನಾನು ಗೈರಾಗಿದ್ದೀನಿ, ಆದರೆ ಅಧಿಕಾರಿಗಳು ಹಾಜರಿ ಹಾಕಿದ್ದೀರಿ. ನಿಮ್ಮಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಲೋಹಿತ್‌ ಕುಮಾರ್ ಸ್ಥಾಯಿ ಸಮತಿ ಸಭೆಯ ನಿರ್ಣಯಗಳನ್ನು ಬರೆದು ಸಾಮಾನ್ಯ ಸಭೆಯ ಅಜೆಂಡಾಗೆ ತರುವ ಕೆಲಸದಲ್ಲಿ ಅಧಿಕಾರಿಗಳ ಬೇಜವ್ದಾರಿ ಎದ್ದು ಕಾಣುತ್ತಿದೆ, ಇದು ಮುಂದೆ ಪುನರಾವರ್ತನೆ ಆಗದಂತೆ ಕ್ರಮ ವಹಿಸಿ ಎಂದು ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರು ಹಾಗೂ ಯುಜಿಡಿ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಮತ್ತು ಪುರಸಭೆಯಿಂದ ಕೆಲಸಗಳಿಗೆ ಅನುದಾನ ಹಾಕಿರುವ ವಾರ್ಡುಗಳಲ್ಲಿ ಮೊದಲು ಕೆಲಸ ಮಾಡಬೇಕು. ಅತ್ಯಗತ್ಯವಾಗಿರುವ ಕಡೆ ನಮ್ಮಗಳ ಗಮನಕ್ಕೆ ತಂದು ಕೆಲಸ ಮಾಡಬೇಕು ಎಂದು ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ, ಮುಖ್ಯಾಧಿಕಾರಿ ರಮೇಶ್ ಉಪಸ್ಥಿತರಿದ್ದರು.

ಬಾಕ್ಸ್‌..........

ಸ್ವೀಟ್ ಹೆಸರಲ್ಲಿ ಲಕ್ಷಾಂತರ ರು. ಖರ್ಚುಹೆಗ್ಗಡಗೆರೆ ಸದಸ್ಯ ನಾಗರಾಜು ಮಾತನಾಡಿ, ಪೌರ ಕಾರ್ಮಿಕರ ದಿನಾಚರಣೆಗೆ 5 ಲಕ್ಷ ರು. ಖರ್ಚು ಮಾಡಿದ್ದೀರಿ. ಊಟದ ವ್ಯವಸ್ಥೆ ಸರಿ ಇರಲಿಲ್ಲ. ಆಯುಧಪೂಜೆಗೆ 3 ಲಕ್ಷ ಖರ್ಚು ತೋರಿಸಿದ್ದೀರಿ. ಇವೆಲ್ಲವು ಅಧಿಕಾರಿಗಳು ಪರ್ಸೆಂಟೇಜ್ ಮಾತಾಡಿಕೊಂಡು ಕೆಲಸ ಮಾಡುತ್ತಿದ್ದೀರ ಎಂದು ಅಸಮಾಧಾನ ಹೊರಹಾಕಿದರು. ಇದಕ್ಕೆ ಅಧ್ಯಕ್ಷ ಹರಿಪ್ರಸಾದ್ ಎಲ್ಲರಿಗೂ ಸ್ವೀಟ್ ಹಂಚಿದ್ದರಿಂದ ಇಷ್ಟೊಂದು ಹಣ ಖರ್ಚಾಗಿದೆ ಎಂದರು. ಆಗ ಉಮೇಶ್ ಅದರ ಖರ್ಚುವೆಚ್ಚಗಳನ್ನು ರಸೀದಿ ಸಮೇತ ಮುಂದಿನ ಸಭೆಯಲ್ಲಿ ಪ್ರಸ್ತುತ ಪಡಿಸುವಂತೆ ಒತ್ತಾಯಿಸಿದರು.

25ಕೆಆರ್ ಎಂಎನ್ 2.ಜೆಪಿಜಿ

ಬಿಡದಿ ಪುರಸಭೆ ಸಾಮಾನ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಸಿ.ಉಮೇಶ್ ರವರು ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಯನ್ನು ತರಾಟೆ ತೆಗೆದುಕೊಂಡಿರುವುದು.