ಪೊಲೀಸ್ ಬಂದೋಬಸ್ತ್ ಸಹ ಡಿ.3ರ ಸಂಜೆಯಿಂದಲೇ ಹುಲಿಗಿ ಗ್ರಾಮದಲ್ಲಿ ಪ್ರಾರಂಭವಾಗಬೇಕು
ಎಸ್. ನಾರಾಯಣ್ ಮುನಿರಾಬಾದ್
ಡಿಸೆಂಬರ್ ತಿಂಗಳಲ್ಲಿ ಹನುಮ ಮಾಲಾಧಾರಿಗಳಿಂದ ಮಾಲಾ ವಿಸರ್ಜನೆ ಕಾರ್ಯಕ್ರಮ ಹಾಗೂ ಹೊಸ್ತಿಲ ಹುಣ್ಣಿಮೆ ಏಕಕಾಲಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತಕ್ಕೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಿದೆ.ಡಿ.2,3 ಹಾಗೂ 4ರಂದು ಜಗತ್ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ದೇಶ ಹಾಗೂ ರಾಜ್ಯದ ನಾನಾ ಕಡೆಗಳಿಂದ ಸುಮಾರು 2 ಲಕ್ಷಕೂ ಅಧಿಕ ಜನ ಹನುಮ ಮಾಲಾಧಾರಿಗಳು ಆಗಮಿಸಲಿದ್ದಾರೆ. ಇದಲ್ಲದೆ ಡಿ. 4 ರಂದು ಹುಲಿಗಿಯ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನದಲ್ಲಿ ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ಸುಮಾರು 5 ಲಕ್ಷಕ್ಕೂ ಅಧಿಕ ಜನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹೊಸ್ತಿಲ ಹುಣ್ಣಿಮೆ 4 ರಂದು ಇದ್ದರೂ ಡಿ.3ರ ಸಂಜೆಯಿಂದಲೇ ರಾಜ್ಯ ಹಾಗೂ ಹೊರ ರಾಜ್ಯದಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ಹುಲಿಗಿ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಪೊಲೀಸ್ ಬಂದೋಬಸ್ತ್ ಸಹ ಡಿ.3ರ ಸಂಜೆಯಿಂದಲೇ ಹುಲಿಗಿ ಗ್ರಾಮದಲ್ಲಿ ಪ್ರಾರಂಭವಾಗಬೇಕು. ಅಂದಾಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ.
ಅ.7ರ ಸೀಗೆ ಹುಣ್ಣಿಮೆಯಂದು ಸಂಭವಿಸಿದ ಕಾಲ್ತುಳಿತದ ಘಟನೆ ಮರು ಕಳಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಜಿಲ್ಲಾಡಳಿತದ ಮೇಲೆ ಇದೆ. ಅ. 6 ರಂದು ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆ ಪ್ರವಾಸ ಮಾಡಿದರು. ಅವರ ಆಗಮನದ ಹಿನ್ನೆಲೆ ಎಲ್ಲ ಪೊಲೀಸ್ ಪಡೆ ಅವರ ಭದ್ರತೆ ಹಾಗೂ ಬಂದೋಬಸ್ತ್‌ಗಾಗಿ ನಿಯೋಜಿಸಲಾಯಿತು. ಸೀಗೆ ಹುಣ್ಣಿಮೆ ಪ್ರಾರಂಭವಾಗುವ ಮುನ್ನಾ ದಿನ ಅ. 6 ರ ಸಂಜೆ ಯಿಂದಲೆ ಶ್ರೀ ಹುಲಿಗಮ್ಮ ದೇವಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಆದರೆ ಅಲ್ಲಿ ಭಕ್ತರಿಗಾಗಿ ಯಾವುದೇ ಭದ್ರತೆ ವ್ಯವಸ್ಥೆ ಇರಲಿಲ್ಲ, ವಾಹನ ನಿಯಂತ್ರಣವೂ ಆಗಲಿಲ್ಲ. ಸೀಗೆ ಹುಣ್ಣಿಮೆ ದಿನದಂದು ಸಹ ದೇವಸ್ಥಾನಕ್ಕೆ ಆಗಮಿಸಿದ 3 ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳಿಗೆ ಭದ್ರತಾ ವ್ಯವಸ್ಥೆಯ ಕೊರತೆ ಹಾಗೂ ವಾಹನ ದಟ್ಟಣೆ ನಿಯಂತ್ರಣ ಇಲ್ಲದ ಕಾರಣ ದೇವಸ್ಥಾನದ ರಾಜ ಬೀದಿಯಲ್ಲಿ ಕಾಲ್ತುಳಿತ ಹಾಗೂ ನೂಕುನುಗ್ಗಲು ಸಂಭವಿಸಿತ್ತು.ಡಿ.3ಮತ್ತು 4ರಂದು ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ಹುಲಿಗಮ್ಮದೇವಿ ದರ್ಶನಕ್ಕೆ ಆಗಮಿಸಲಿರುವ ಲಕ್ಷಾಂತರ ಭಕ್ತಾದಿಗಳಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸುವಂತೆ ಆಗ್ರಹಿಸಿ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ರಾವ್ ಪತ್ರ ಬರೆದಿದ್ದಾರೆ.
ಬೆಂಗಳೂರ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ತಮಿಳುನಾಡಿನ ಕರೂರಿನಲ್ಲಿ ಕಾಲ್ತುಳಿತದಿಂದ ಸಂಭವಿಸಿದ ಅವಘಡ ಮರುಕಳಿಸದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕಾಗಿದೆ ಎಂಬ ಮಾತುಗಳು ಸಾರ್ವಜನಕ ವಲಯದಲ್ಲಿ ಕೇಳಿ ಬರುತ್ತಿದೆ.ಭಕ್ತರ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಎಸ್ಪಿ ಡಾ.ರಾಮ್ ಎಲ್. ಅರಸಿದ್ಧಿ ತಿಳಿಸಿದ್ದಾರೆ.