ಸಾರಾಂಶ
ಕೊಪ್ಪಳ: ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಹನುಮದ್ ವ್ರತ ಹಿನ್ನೆಲೆಯಲ್ಲಿ ಶುಕ್ರವಾರ ಸಹಸ್ರಾರು ವ್ರತಧಾರಿ ಹನುಮಮಾಲಾಧಾರಿಗಳು ತಮ್ಮ ಮಾಲೆ ವಿಸರ್ಜಿಸಲು ಮುಂಜಾನೆಯಿಂದಲೇ ತಂಡೋಪತಂಡವಾಗಿ ಬೆಟ್ಟದತ್ತ ಹೆಜ್ಜೆ ಹಾಕಿದ್ದರಿಂದ ಸಂಪೂರ್ಣ ಅಂಜನಾದ್ರಿ ಕೇಸರಿಮಯವಾಗಿ ಗೋಚರಿಸಿತು.
ಸಾಗರೋಪಾದಿಯಲ್ಲಿ ಬಂದ ಹನುಮಮಾಲಾಧಾರಿಗಳು ಶುಕ್ರವಾರ ಬೆಳಗಿನ ಜಾವವೇ ಕೊರೆವ ಚಳಿಯಲ್ಲೂ ಬೆಟ್ಟವೇರಿ ಹನುಮಮಾಲೆ ವಿಸರ್ಜನೆ ಮಾಡಿ, ದೇವರ ದರ್ಶನ ಪಡೆದು, ಜಯಘೋಷ ಕೂಗುತ್ತಾ ಸಾಗುತ್ತಿದ್ದರು.ಗುರುವಾರದಿಂದಲೇ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಆರಂಭವಾಯಿತು. ಶುಕ್ರವಾರ ಬೆಳಗ್ಗೆ 4 ಗಂಟೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಂಜನೇಯ ಸ್ವಾಮಿಯ ಭಕ್ತರು ಆಗಮಿಸಿದ್ದರು. ಇಡೀ ಬೆಟ್ಟದ ತುಂಬೆಲ್ಲ ಹನುಮ ಮತ್ತು ಶ್ರೀರಾಮನ ಜಯಘೋಷಣೆ ಮೊಳಗಿದವು. ಸುಮಾರು 60-70 ಸಾವಿರ ಭಕ್ತರು ಅಂಜನಾದ್ರಿಗೆ ಭೇಟಿ ನೀಡಿ ಮಾಲೆ ವಿಸರ್ಜಿಸಿದರೆಂದು ಹೇಳಲಾಗಿದೆ.
ಜಿಲ್ಲೆ ಮಾತ್ರವಲ್ಲದೆ ಅಕ್ಕ-ಪಕ್ಕದ ಜಿಲ್ಲೆ ಮತ್ತು ಇತರ ರಾಜ್ಯಗಳಿಂದಲೂ ಹನುಮಮಾಲಾಧಾರಿಗಳು ಆಗಮಿಸಿ, ಹನುಮಮಾಲೆಯ ವ್ರತ ಪೂರ್ಣಗೊಳಿಸಿ, ಧನ್ಯತಾ ಭಾವ ಮೆರೆದರು.ರಸ್ತೆಗಳಲ್ಲಿ ಕಾಲ್ನಡಿಗೆ ಮುಖಾಂತರ ತಂಡೋಪತಂಡವಾಗಿ ಮತ್ತು ದೂರದ ಊರಿನಿಂದ ಬರುವ ಜನರು ವಾಹನಗಳಲ್ಲಿ ಬರುತ್ತಿರುವುದು ಕಂಡು ಬಂದಿತು.
ಪ್ರಸಾದ ವ್ಯವಸ್ಥೆ: ಬಂದ ಭಕ್ತರಿಗೆ ಚಿಕ್ಕರಾಂಪುರ ಹಿಂಭಾಗದ ವೇದಪಾಠ ಶಾಲೆಯ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹುಗ್ಗಿ, ಅನ್ನ, ಸಾಂಬಾರು, ಟೊಮಟೊ ಚಟ್ನಿ ಒಳಗೊಂಡ ಪ್ರಸಾದವನ್ನು ಭಕ್ತರು ಸವಿದರು. ನೂಕುನುಗ್ಗಲು ಆಗದಂತೆ ಸಾಕಷ್ಟು ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಶಾಂತ ರೀತಿಯಲ್ಲಿ ಪ್ರಸಾದ ಸ್ವೀಕರಿಸಲು ಅನುಕೂಲವಾಯಿತು. ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಅಡುಗೆ ಮತ್ತು ವ್ಯವಸ್ಥೆ ಬಗ್ಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.ಪೊಲೀಸರು ಪಾರ್ಕಿಂಗ್ ಸ್ಥಳ ನಿಗದಿಪಡಿಸಿದ್ದರಿಂದ ಹಾಗೂ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಸಂಚಾರ ಸಮಸ್ಯೆ ಆಗಲಿಲ್ಲ. ಪೊಲೀಸರು ವಾಹನ ಪಾರ್ಕಿಂಗ್ ಸ್ಥಳದ ಕುರಿತು ವಾಹನ ಚಾಲಕರಿಗೆ ನಿರ್ದೇಶನ ನೀಡುತ್ತಿದ್ದರು. ಪ್ರಮುಖ ರಸ್ತೆಗಳು, ಅಂಜನಾದ್ರಿಯ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ನಿಗಾ ವಹಿಸಲಾಗಿತ್ತು.
ಹೂವಿನ ಅಲಂಕಾರ: ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಅದರ ಕೆಳಗಡೆ ಇರುವ ಪಾದಗಟ್ಟಿಯಲ್ಲಿ ಹೂವಿನ ಅಲಂಕಾರ ನೋಡುಗರ ಗಮನ ಸೆಳೆಯಿತು.ಅಂಜನಾದ್ರಿ ಬೆಟ್ಟಕ್ಕೆ ವಿವಿಧ ಬಣ್ಣಗಳ ಲೈಟಿಂಗ್ ವ್ಯವಸ್ಥೆ ಮಾಡಿದ್ದರಿಂದ ಬೆಟ್ಟವು ರಾತ್ರಿ ಕಂಗೊಳಿಸುತ್ತಿತ್ತು.
ಗಂಗಾವತಿ ಮುನಿರಾಬಾದ್ ಮಾರ್ಗದಿಂದ ಬೆಟ್ಟ ಏರಲು ಜಿಲ್ಲಾಡಳಿತ ಅನುಕೂಲ ಮಾಡಿಕೊಟ್ಟಿದೆ. ಕೆಲವು ಭಕ್ತರು ಆಂಜನೇಯ ಸ್ವಾಮಿ ಪಾದುಕೆ ಬಳಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.ನಡೆದುಕೊಂಡು ಬರುವ ಹನುಮಮಾಲಾಧಾರಿಗಳಿಗಾಗಿ ಅಲ್ಲಲ್ಲಿ ಟೆಂಟ್ ನಿರ್ಮಿಸಿ, ವಿಶ್ರಾಂತಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾರ್ಗಮಧ್ಯೆ ಕೆಲವು ಗ್ರಾಮಗಳಲ್ಲಿ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ಎಲ್ಲ ಕಡೆ ಸ್ವಚ್ಛತೆ ಕಾಪಾಡಲು ಹಲವಾರು ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.
ಕುಡಿಯುವ ನೀರು, ಸ್ನಾನಗೃಹಗಳು, ವಾಹನಗಳಿಗೆ ಪಾರ್ಕಿಂಗ್, ಪ್ರಸಾದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಸಹಾಯವಾಣಿ, ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದ್ದರಿಂದ ಹನುಮ ಮಾಲಾಧಾರಿಗಳು ನೆಮ್ಮದಿಯಿಂದ ತಮ್ಮ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿಕೊಳ್ಳಲು ಸಾಧ್ಯವಾಯಿತು.ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹಾಗೂ ಇತರ ಅಧಿಕಾರಿಗಳು ಅಂಜನಾದ್ರಿ ಬೆಟ್ಟದಲ್ಲಿ ಮೊಕ್ಕಾಂ ಹೂಡಿ, ನಿಗಾ ವಹಿಸಿದರು.