ಸಾರಾಂಶ
ಮನೆ ಮುಂದೆ ಬಣ್ಣದ ನೀರು, ಬಣ್ಣದ ಪುಡಿ ಇಟ್ಟು ಕಪಿ ಸೈನ್ಯದಂತೆ ಲಗ್ಗೆ ಹಾಕುತ್ತಿದ್ದ ಯುವಕರು ಮಕ್ಕಳಿಗೆ ಬಣ್ಣ ಹಚ್ಚಿಕೊಳ್ಳಲು ನೆರವಾದರು. ಪೈಪೋಟಿಯಲ್ಲಿ ಬಣ್ಣದ ನೀರು ಎರಚಿಕೊಂಡು, ಬಣ್ಣ ಬಳಿದುಕೊಂಡು ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಗಡಿಗ್ರಾಮ ಊಗಿನಹಳ್ಳಿಯಲ್ಲಿ ಕುರುಹಿನಶೆಟ್ಟಿ ಸಮಾಜ ಭಾನುವಾರ ಸಂಭ್ರಮದಿಂದ ಹನುಮಂತೋತ್ಸವ ಆಚರಿಸಿತು.ಹನುಮಂತೋತ್ಸವದಲ್ಲಿ ದೂರದ ಊರುಗಳಿಂದ ಗ್ರಾಮದ ಮೂಲ ನಿವಾಸಿಗಳಾದ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬೇಸಿಗೆ ರಜೆ ಪ್ರಯುಕ್ತ ಮಕ್ಕಳ ಸೈನ್ಯ ಹನುಮಂತೋತ್ಸವದಲ್ಲಿ ಪಾಲ್ಗೊಂಡಿತ್ತು.
ಮಕ್ಕಳು, ಯುವಕರ ದಂಡು ಜೊತೆಗೆ ಹಿರಿಯರು ಜೈ ಹನುಮ ಎಂದು ಕೂಗುತ್ತ ಉತ್ಸವದಲ್ಲಿ ಭಾಗಿಯಾಗಿದ್ದರು. ಹನುಮದೇವರ ಭಾವಚಿತ್ರಕ್ಕೆ ವಿವಿಧ ಪರಿಮಳ, ಪುಷ್ಪಗಳಿಂದ ಅಲಂಕರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ರಾಮಮಂದಿರದಿಂದ ಸಾಗಿದ ಉತ್ಸವಕ್ಕೆಗ್ರಾಮಸ್ಥರು ಹಣ್ಣು, ಕಾಯಿ ಅರ್ಪಿಸಿ ಆರತಿ ಬೆಳಗಿದರು.ಮನೆ ಮುಂದೆ ಬಣ್ಣದ ನೀರು, ಬಣ್ಣದ ಪುಡಿ ಇಟ್ಟು ಕಪಿ ಸೈನ್ಯದಂತೆ ಲಗ್ಗೆ ಹಾಕುತ್ತಿದ್ದ ಯುವಕರು ಮಕ್ಕಳಿಗೆ ಬಣ್ಣ ಹಚ್ಚಿಕೊಳ್ಳಲು ನೆರವಾದರು. ಪೈಪೋಟಿಯಲ್ಲಿ ಬಣ್ಣದ ನೀರು ಎರಚಿಕೊಂಡು, ಬಣ್ಣ ಬಳಿದುಕೊಂಡು ಸಂಭ್ರಮಿಸಿದರು.
ನಂತರ ಮೂಲ ರಾಮಮಂದಿರ ಗುಡಿಗೆ ಉತ್ಸವ ಸಾಗಿತು. ಸ್ವಾಮಿಗೆ ಅಂತಿಮವಾಗಿ ಮಹಾಮಂಗಳಾರತಿ ಬೆಳಗಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಶನಿವಾರ ರಾತ್ರಿ ಪಟ್ಟಾಭಿರಾಮ ದೇವರ ಉತ್ಸವ ವಿದ್ಯುತ್ ದೀಪಾಲಂಕಾರದೊಂದಿಗೆ ಮಾಡಲಾಯಿತು. ತೀರ್ಥ ಪ್ರಸಾದ, ಅನ್ನದಾಸೋಹ ನಡೆಯಿತು.ಈ ವೇಳೆ ಮುಖಂಡರಾದ ಕೆಇಬಿ ತಿಮ್ಮಶೆಟ್ಟಿ, ಮುರಳೀಧರ್, ಜೇನುಗೂಡು ಮಹೇಶ್, ನ್ಯಾಯಬೆಲೆ ತಿಮ್ಮಶೆಟ್ಟಿ, ರೂಪೇಶ್, ನಂಜುಂಡಶೆಟ್ಟಿ, ಕೇಶವಶೆಟ್ಟಿ, ಗೋಪಾಲ್, ಹರೀಶ್, ಮುತ್ತುಶೆಟ್ಟಿ, ಗೋವಿಂದ, ಕೃಷ್ಣಶೆಟ್ಟಿ, ಮೇಲುಕೋಟೆ ಪುಟ್ಟಶೆಟ್ಟಿ, ಕಿಕ್ಕೇರಿ ಕೆ.ವಿ. ಅರುಣಕುಮಾರ್, ಭೀಮಣ್ಣಶೆಟ್ಟಿ ಭಾಗವಹಿಸಿದ್ದರು.