ಹಳ್ಳಿ ಹಳ್ಳಿಗೂ ಹಬ್ಬುತ್ತಿದೆ ಹನುಮ ಧ್ವಜ ಅಭಿಮಾನ..!

| Published : Feb 04 2024, 01:33 AM IST

ಸಾರಾಂಶ

ರಾಷ್ಟ್ರಧ್ವಜ ಸದಾಕಾಲ ಕಂಬದಲ್ಲಿ ಹಾರಾಡುವುದಿಲ್ಲ. ನಾಡಧ್ವಜವನ್ನೂ ನಿರಂತರವಾಗಿ ಹಾರಿಸಲಾಗುವುದಿಲ್ಲ. ಹಾಗಾಗಿ ರಾಷ್ಟ್ರೀಯ ಹಬ್ಬ ಮತ್ತು ನಾಡಹಬ್ಬದ ದಿನದಂದು ಹನುಮಧ್ವಜ ತೆಗೆಯುವುದಕ್ಕೆ ಆಕ್ಷೇಪವಿಲ್ಲ. ಉಳಿದಂತೆ ಎಲ್ಲಾ ದಿನಗಳಲ್ಲಿ ನಮ್ಮ ಭಕ್ತಿಯ ಸಂಕೇತವಾಗಿರುವ ಹನುಮಧ್ವಜ ಹಾರಾಟಕ್ಕೆ ಅವಕಾಶ ನೀಡಬೇಕೆನ್ನುವುದೇ ನಮ್ಮ ಆಗ್ರಹ ಎನ್ನುವುದು ಕೆರಗೋಡು ಜನರು ಹೇಳುತ್ತಿರುವ ಮಾತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಕೆರಗೋಡು ಗ್ರಾಮದಲ್ಲಿ ಉಂಟಾಗಿರುವ ಹನುಮ ಧ್ವಜದ ಕಿಚ್ಚು ಸುತ್ತಮುತ್ತಲ ಹಳ್ಳಿಗಳಿಗೂ ವ್ಯಾಪಿಸಲಾರಂಭಿಸಿದೆ. ಹನುಮ ಧ್ವಜ ಅಭಿಮಾನ ಎಲ್ಲೆಡೆ ವಿಸ್ತರಣೆಯಾಗುತ್ತಾ ತೀವ್ರ ಚರ್ಚೆಯಾಗುತ್ತಿದೆ.

ಕೆರಗೋಡಿನಲ್ಲಿ ಸ್ಥಾಪಿಸಲಾಗಿರುವ ಧ್ವಜಸ್ತಂಭಕ್ಕೆ ಸುಮಾರು ಹತ್ತು ಗ್ರಾಮಗಳ ಜನರಿಂದ ಹಣ ಸಂಗ್ರಹಿಸಿ ೧೦೮ ಅಡಿ ಎತ್ತರದ ಸ್ತಂಭ ನಿರ್ಮಿಸಲಾಗಿದೆ. ಮಹಾಭಾರತ ಯುದ್ಧಕ್ಕೆ ತೆರಳುವ ಮುನ್ನ ಅರ್ಜುನ ಹನುಮ ಧ್ವಜವನ್ನು ತನ್ನ ರಥದ ಮೇಲೆ ಹಾರಿಸಿರುತ್ತಾನೆ. ಅದೇ ಕಾರಣಕ್ಕೆ ಅರ್ಜುನ ಸ್ತಂಭದ ಮೇಲೆ ಹನುಮ ಧ್ವಜ ಹಾರಿಸುವ ಉದ್ದೇಶದಿಂದಲೇ ಸ್ತಂಭಕ್ಕೆ ಅರ್ಜುನ ಸ್ತಂಭ ಎಂದು ನಾಮಕರಣ ಮಾಡಿದ್ದಾರೆ ಎಂದು ಹೇಳಲಾಗಿದೆ.

ರಾಷ್ಟ್ರಧ್ವಜ ಸದಾಕಾಲ ಕಂಬದಲ್ಲಿ ಹಾರಾಡುವುದಿಲ್ಲ. ನಾಡಧ್ವಜವನ್ನೂ ನಿರಂತರವಾಗಿ ಹಾರಿಸಲಾಗುವುದಿಲ್ಲ. ಹಾಗಾಗಿ ರಾಷ್ಟ್ರೀಯ ಹಬ್ಬ ಮತ್ತು ನಾಡಹಬ್ಬದ ದಿನದಂದು ಹನುಮಧ್ವಜ ತೆಗೆಯುವುದಕ್ಕೆ ಆಕ್ಷೇಪವಿಲ್ಲ. ಉಳಿದಂತೆ ಎಲ್ಲಾ ದಿನಗಳಲ್ಲಿ ನಮ್ಮ ಭಕ್ತಿಯ ಸಂಕೇತವಾಗಿರುವ ಹನುಮಧ್ವಜ ಹಾರಾಟಕ್ಕೆ ಅವಕಾಶ ನೀಡಬೇಕೆನ್ನುವುದೇ ನಮ್ಮ ಆಗ್ರಹ ಎನ್ನುವುದು ಕೆರಗೋಡು ಜನರು ಹೇಳುತ್ತಿರುವ ಮಾತಾಗಿದೆ.

ಇನ್ನು ಹನುಮಧ್ವಜ ತೆಗೆದಿರುವುದಕ್ಕೆ ಕೆರಗೋಡಿನ ಸುತ್ತಮುತ್ತಲ ಊರುಗಳಾದ ಮರಿಲಿಂಗನದೊಡ್ಡಿ, ಕಲ್ಮಂಟಿದೊಡ್ಡಿ, ಕೆಬ್ಬಳ್ಳಿ, ಮಾರಗೌಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಹನುಮ ಧ್ವಜ ಪರವಾದ ನಿಲುವನ್ನೇ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಮರಿಲಿಂಗನದೊಡ್ಡಿಯಲ್ಲಿರುವ ಶ್ರೀರಾಮ ದೇಗುಲದ ಹಿಂಭಾಗದಲ್ಲಿ ೧೪೮ ಅಡಿ ಎತ್ತರದ ಧ್ವಜಸ್ತಂಭ ನಿರ್ಮಿಸಿ ಹನುಮ ಧ್ವಜ ಹಾರಿಸುವುದಕ್ಕೆ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಉಳಿದಂತೆ ಇತರೆ ಗ್ರಾಮಗಳಲ್ಲೂ ಧ್ವಜಸ್ತಂಭ ಸ್ಥಾಪಿಸುವ ಸಂಬಂಧ ಗ್ರಾಮಸ್ಥರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.