ಹನುಮಸಾಗರ-ಗಜೇಂದ್ರಗಡ ರಸ್ತೆ ಗುಂಡಿಮಯ

| Published : Oct 17 2024, 12:53 AM IST

ಸಾರಾಂಶ

ಗ್ರಾಮದಿಂದ ಗಜೇಂದ್ರಗಡ ಸಂಪರ್ಕಿಸುವ ರಸ್ತೆ ಹಲವಾರು ವರ್ಷಗಳಿಂದ ತಗ್ಗು-ಗುಂಡಿಗಳಿಂದ ಆವೃತವಾಗಿದ್ದು, ಮಳೆ ನೀರಿಗೆ ಮಾರ್ಗದ ಗುಂಡಿಗಳೆಲ್ಲ ಕೆರೆಯಂತಾಗಿದ್ದು, ವಾಹನ ಸವಾರರು, ಜಮೀನುಗಳಿಗೆ ತೆರಳಲು ರೈತರು, ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಜಮೀನುಗಳಿಗೆ ತೆರಳಲು ರೈತರು, ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಟ

ತಾಲೂಕಿನ ಶಾಸಕರು, ಜನಪ್ರತಿನಿಧಿಗಳಿಗೆ ಹಿಡಿಶಾಪ

ಕನ್ನಡಪ್ರಭ ವಾರ್ತೆ ಹನುಮಸಾಗರ

ಗ್ರಾಮದಿಂದ ಗಜೇಂದ್ರಗಡ ಸಂಪರ್ಕಿಸುವ ರಸ್ತೆ ಹಲವಾರು ವರ್ಷಗಳಿಂದ ತಗ್ಗು-ಗುಂಡಿಗಳಿಂದ ಆವೃತವಾಗಿದ್ದು, ಮಳೆ ನೀರಿಗೆ ಮಾರ್ಗದ ಗುಂಡಿಗಳೆಲ್ಲ ಕೆರೆಯಂತಾಗಿದ್ದು, ವಾಹನ ಸವಾರರು, ಜಮೀನುಗಳಿಗೆ ತೆರಳಲು ರೈತರು, ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಾಸಕರು, ಜನಪ್ರತಿನಿಧಿಗಳಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಹನುಮಸಾಗರದ ಹೊಸ ಬಸ್ ನಿಲ್ದಾಣದಿಂದ ಗಜೇಂದ್ರಗಡ ಪಟ್ಟಣ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ನಾಲ್ಕೈದು ವರ್ಷಗಳಿಂದ ಹಾಳಾಗಿದೆ. ವಾಹನ ಸವಾರರು ನಿತ್ಯ ಪರದಾಡುತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒ, ತಾಲೂಕಿನ ಶಾಸಕರು ಹಾಗೂ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗುತ್ತಿಲ್ಲ.

ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಮಡಿಕೇರಿ, ಬೆನಕನಾಳ, ಯಲಬುಣಚಿ ಗ್ರಾಮ ಸೇರಿ ಯಲಬುರ್ಗಾ, ರೋಣ, ಗದಗ, ಹುಬ್ಬಳ್ಳಿಗೆ ಹೋಗುವವರಿಗೆ ಈ ರಸ್ತೆಯೇ ಆಸರೆಯಾಗಿದೆ. ರಸ್ತೆ ಹಾಳಾಗಿದ್ದರಿಂದ ಜಮೀನುಗಳಿಗೆ ತೆರಳುವ ರೈತರು ಸಹ ತೊಂದರೆ ಅನುಭವಿಸುವಂತಾಗಿದೆ. ರಸ್ತೆಗೆ ಹಾಕಲಾದ ಡಾಂಬರು ಕಿತ್ತಿರುವುದರಿಂದ ಜಲ್ಲಿ ಕಲ್ಲುಗಳು ಮೇಲೆದ್ದು, ತಗ್ಗುಗಳು ನಿರ್ಮಾಣಗೊಂಡಿವೆ. ಈ ತಗ್ಗುಗಳಲ್ಲಿ ಮಳೆ ನೀರು ಸಂಗ್ರಹಗೊಂಡು ಕೆರೆಯಾಗಿ ಮಾರ್ಪಡುತ್ತಿವೆ. ನೀರು ಮುಂದೆ ಸಾಗದೆ ಎಲ್ಲ ಜನರಿಗೆ ತೊಂದರೆಯಾಗುತ್ತದೆ. ಇದರಿಂದ ರೋಗಿಗಳು ಗದಗ, ಹುಬ್ಬಳ್ಳಿಯಂತಹ ನಗರಗಳಿಗೆ ಹೋಗುವಾಗ ಕಷ್ಟ ಅನುಭವಿಸುವಂತಾಗಿದೆ. ಇದೇ ಮಾರ್ಗದಲ್ಲಿ ಖಾಸಗಿ ಶಾಲೆ ಇದ್ದು, ಶಾಲೆಗೆ ಹೋಗಲು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯ ಎರಡೂ ಬದಿಗಳಲ್ಲಿ ಜಾಲಿಗಿಡಗಳು ಬೆಳೆದಿದ್ದು, ತಿರುವುಗಳಲ್ಲಿ ಎದುರಿಗೆ ಬರುವ ವಾಹನಗಳು ಕಾಣದಂತಾಗಿವೆ. ರಸ್ತೆ ಅಭಿವೃದ್ಧಿ ಪಡಿಸುವಂತೆ ಸ್ಥಳೀಯರು ಅನೇಕ ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಆರೋಪ ಇಲ್ಲಿನ ಸಾರ್ವಜನಿಕರದ್ದು. ಕೂಡಲೇ ರಸ್ತೆ ಅಭಿವೃದ್ಧಿಗಾಗಿ ಕ್ರಮಕೈಗೊಳ್ಳದಿದ್ದರೆ ಹನುಮಸಾಗರ ಬಂದ್‌ಗೆ ಕರೆ ನೀಡುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

ಹನುಮಸಾಗರ-ಗಜೇಂದ್ರಗಡ ರಸ್ತೆ ಬಹಳ ದಿನಗಳ ಹಿಂದೆ ಹಾಳಾಗಿದೆ. ಅದನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಈ ಹಾಳಾದ ರಸ್ತೆಯಲ್ಲಿ ಸಂಚರಿಸುವಾಗ ಜನರಿಗೆ ಸಮಸ್ಯೆಯಾದರೆ ಜನಪ್ರತಿನಿಧಿಗಳು ನೇರ ಹೊಣೆಗಾರರು ಎಂದು ಹನುಮಸಾಗರ ನಿವಾಸಿ ನಾಗರಾಜ ಶೆಬಿನಕಟ್ಟಿ ತಿಳಿಸಿದ್ದಾರೆ.

ಹನುಮಸಾಗರ-ಗಜೇಂದ್ರಗಡ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಕೆಕೆಆರ್ ಡಿಬಿಗೆ ಪ್ರಸ್ತಾವನೆ ಕಳುಹಿಸಿದ್ದೇನೆ. ಅದು ಮುಂಜೂರಾದ ತಕ್ಷಣ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ದೊಡ್ಡನಗೌಡ ಪಾಟೀಲ ತಿಳಿಸಿದ್ದಾರೆ.