ಸಾರಾಂಶ
ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಿವಿಧ ಮೂಲಗಳಿಂದ ₹19 ಕೋಟಿ ಆದಾಯ ನಿರೀಕ್ಷಿಸಿದ್ದು, ₹18 ಕೋಟಿ ವಿವಿಧ ಉದ್ದೇಶಗಳಿಗೆ ಖರ್ಚಾಗಲಿದ್ದು 2025-26 ನೇ ಸಾಲಿನಲ್ಲಿ 69 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಪಪಂ ಉಪಾಧ್ಯಕ್ಷ ಆನಂದ್ ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಿವಿಧ ಮೂಲಗಳಿಂದ ₹19 ಕೋಟಿ ಆದಾಯ ನಿರೀಕ್ಷಿಸಿದ್ದು, ₹18 ಕೋಟಿ ವಿವಿಧ ಉದ್ದೇಶಗಳಿಗೆ ಖರ್ಚಾಗಲಿದ್ದು 2025-26 ನೇ ಸಾಲಿನಲ್ಲಿ 69 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಪಪಂ ಉಪಾಧ್ಯಕ್ಷ ಆನಂದ್ ಕುಮಾರ್ ತಿಳಿಸಿದರು.ಪಪಂ ಸಭಾಂಗಣದಲ್ಲಿ ಶುಕ್ರವಾರ ಮಮ್ತಾಜ್ ಭಾನು ಅಧ್ಯಕ್ಷೆತೆಯಲ್ಲಿ ಉಪಾಧ್ಯಕ್ಷ ಆನಂದ್ ಕುಮಾರ್ ಬಜೆಟ್ ಮಂಡಿಸಿ ಮಾತನಾಡಿದರು. ಹನೂರು ಪಟ್ಟಣ ಪಂಚಾಯಿತಿಯ ವಿವಿಧ ಮೂಲಗಳಿಂದ ಬರುವ ಆದಾಯ ಕ್ರೂಢೀಕರಿಸಿ ಮಾದರಿ ಪಟ್ಟಣ ಪಂಚಾಯಿತಿಯನ್ನಾಗಿ ಅಭಿವೃದ್ಧಿ ಪಡಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕರ ಸಹಕಾರದಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಪಟ್ಟಣದ 13 ವಾರ್ಡ್‌ಗಳಿಗೂ ಸಂಬಂಧಪಟ್ಟ ಸದಸ್ಯರ ಜೊತೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಹಂತ ಹಂತವಾಗಿ ಸಮಸ್ಯೆಯನ್ನು ಬಗೆಹರಿಸಲಾಗುವುದು, ಪ್ರತಿ ವಾರ್ಡ್‌ಗಳ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದರು. ಹನೂರು ಪಪಂ ವ್ಯಾಪ್ತಿಯಲ್ಲಿನ ಆಸ್ತಿಗಳನ್ನು ಡ್ರೋನ್ ಮುಖಾಂತರ ಸರ್ವೆ ನಡೆಸಿ ಶಾಶ್ವತ ಪಿಐಡಿ ನಂ.ನೀಡುವ ಮೂಲಕ ಪಟ್ಟಣದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು. ಇದರಿಂದ ಪಟ್ಟಣದ ನಾಗರಿಕರು ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದರು.
ಎತ್ತಿನ ಗುಡ್ಡ ಸಮೀಪ ಅರಣ್ಯ ಇಲಾಖೆ ಹಾಗೂ ಪಪಂ ಸಹಯೋಗದಲ್ಲಿ ಉತ್ತಮ ಪಾರ್ಕ್ ನಿರ್ಮಾಣ ಮಾಡಲು ಚರ್ಚೆ ನಡೆಸಿ ಅತಿ ಶೀಘ್ರದಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಪಟ್ಟಣ ಪಂಚಾಯಿತಿಗೆ ಸರ್ಕಾರದಿಂದ ಬಂದಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಕಾಮಗಾರಿಗಳು ನಡೆಯುವಾಗ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿರಬೇಕು ಎಂದರು. ಈ ಹಿಂದೆ ಕರ್ತವ್ಯ ನಿರ್ವಹಿಸಿದ ಮುಖ್ಯ ಅಧಿಕಾರಿಗಳು ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥವಾಗಿ ಬಳಕೆ ಮಾಡಿದ್ದಲ್ಲದೆ ನಕಲಿ ಬಿಲ್ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಸರ್ವ ಸದಸ್ಯರು ಮನವಿ ಮಾಡಿದ ಹಿನ್ನೆಲೆ ಸಾರ್ವಜನಿಕರ ಪ್ರತಿಯೊಂದು ರು. ಹಣವನ್ನು ಯಾರೊಬ್ಬರೂ ವ್ಯರ್ಥ ಮಾಡಬಾರದು. ಈಗಾಗಲೇ ತನಿಖೆ ನಡೆಯುತ್ತಿದ್ದು ವರದಿ ಬಂದ ನಂತರ ಸೂಕ್ತ ಕ್ರಮ ವಹಿಸಲಾಗುವುದು ಎಂದರು.ಆದಾಯದ ಮೂಲಗಳು:
ಎಸ್ಎಫ್ಸಿ ವೇತನ ಅನುದಾನ, ವಿಶೇಷ ಅನುದಾನ, ವಿದ್ಯುತ್ ಅನುದಾನ, ಮುಕ್ತ ನಿಧಿ ಅನುದಾನ, 15 ನೇ ಹಣಕಾಸು ಅನುದಾನ, ಶಾಸಕರ ಅನುದಾನ, ಆಸ್ತಿ ತೆರಿಗೆ ಅನುದಾನ, ಬ್ಯಾಂಕ್ ಖಾತೆ ಅನುದಾನ, ನೀರು ಸರಬರಾಜು ಶುಲ್ಕಗಳು ಹಾಗೂ ಇನ್ನೂ ಇತರೆ ಮೂಲಗಳಿಂದ ಆದಾಯ ನಿರೀಕ್ಷಿಸಲಾಗಿದೆ.ವೆಚ್ಚಗಳು:
ಪ್ರಮುಖವಾಗಿ ಪಟ್ಟಣ ಪಂಚಾಯಿತಿಗೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಖರೀದಿ, ನಿರ್ಮಾಣ ಕಾಮಗಾರಿ, ಕಚೇರಿ ಕಾಂಪೌಂಡ್, ಕಛೇರಿ ವಾಹನ ಖರೀದಿ, ಗ್ರಂಥಾಲಯ, ಸಮುದಾಯ ಭವನ ನಿರ್ಮಾಣ ಕಾಮಗಾರಿ ಸ್ವಾಗತ ಕಮಾನುಗಳು, ರಸ್ತೆ ಪಾದಚಾರಿ ಮತ್ತು ಚರಂಡಿ ಅಭಿವೃದ್ಧಿ, ಮಳೆ ನೀರಿನ ಚರಂಡಿಗಳು, ಸೇತುವೆಗಳು, ಸಾರ್ವಜನಿಕರ ಶೌಚಾಲಯ ಕಟ್ಟಡಗಳ ನಿರ್ಮಾಣ, ಸ್ಮಶಾನ ಅಭಿವೃದ್ಧಿ ವಿದ್ಯುತ್ ಚಿತಾಗಾರ ಕಾಮಗಾರಿ, ಘನ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿ, ಪಂಪ್ ಹೌಸ್ ಅಭಿವೃದ್ಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಆರ್ಥಿಕ ಹಿಂದುಳಿದ ವರ್ಗ, ಅಂಗವಿಕಲರ ಅಭಿವೃದ್ಧಿ ವೆಚ್ಚಗಳು, ನೀರು ಸರಬರಾಜು ವಿದ್ಯುತ್ ವೆಚ್ಚಗಳು ಸಾರ್ವಜನಿಕರ ಶೌಚಾಲಯ ದುರಸ್ತಿ ಹಾಗೂ ನಿರ್ವಹಣೆ ವೆಚ್ಚ, ಇನ್ನೂ ಮುಂತಾದ ಕಾಮಗಾರಿಗಳನ್ನು ಮಾಡಲು ಅಂದಾಜಿಸಲಾಗಿದೆ ಎಂದರು.ಪಪಂ ಅಧ್ಯಕ್ಷೆ ಮುಮ್ತಾಜ್ ಬಾನು, ಮುಖ್ಯಾಧಿಕಾರಿ ಎಂ.ಪಿ ಮಹೇಶ್ ಕುಮಾರ್, ಸದಸ್ಯರಾದ ಗಿರೀಶ್, ಹರೀಶ್, ಸೋಮಶೇಖರ್, ಸಂಪತ್ ಕುಮಾರ್, ಸುದೇಶ್, ಪವಿತ್ರ ರೂಪ ಮಹೇಶ್ ನಾಯ್ಕ, ನಾಮನಿರ್ದೇಶಿತ ಸದಸ್ಯರಾದ ಬಸವರಾಜು, ಮಹಾದೇಶ್, ನವೀನ್, ಕಚೇರಿ ಸಿಬ್ಬಂದಿ ಹಾಜರಿದ್ದರು.