ಚಾಮರಾಜನಗರ ಜಿಲ್ಲೆ ಹನೂರು ವಿಧಾನಸಭಾ ಕ್ಷೇತ್ರದ ಕಾವೇರಿ ವನ್ಯಜೀವಿಧಾಮದಲ್ಲಿ ಆಗಸ್ಟ್‌ 15ರಂದು ನಡೆದ ಶೂಟೌಟ್‌ ನಲ್ಲಿ ಮೃತರಾದವರು ಬೇಟೆಗಾರರಲ್ಲ, ಮುಗ್ಧ ರೈತರು. ಈ ಮೂವರನ್ನು ಸಮೀಪದಿಂದಲೇ ಶೂಟ್ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಬಿಜೆಪಿಯ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ಹನೂರು ವೆಂಕಟೇಶ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಹನೂರು (ಚಾಮರಾಜನಗರ):

ಚಾಮರಾಜನಗರ ಜಿಲ್ಲೆ ಹನೂರು ವಿಧಾನಸಭಾ ಕ್ಷೇತ್ರದ ಕಾವೇರಿ ವನ್ಯಜೀವಿಧಾಮದಲ್ಲಿ ಆಗಸ್ಟ್‌ 15ರಂದು ನಡೆದ ಶೂಟೌಟ್‌ ನಲ್ಲಿ ಮೃತರಾದವರು ಬೇಟೆಗಾರರಲ್ಲ, ಮುಗ್ಧ ರೈತರು. ಈ ಮೂವರನ್ನು ಸಮೀಪದಿಂದಲೇ ಶೂಟ್ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಬಿಜೆಪಿಯ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ಹನೂರು ವೆಂಕಟೇಶ್ ತಿಳಿಸಿದ್ದಾರೆ.

ಹನೂರು ಶೂಟೌಟ್‌ ಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಬಿಜೆಪಿ ಒಬಿಸಿ ಮೋರ್ಚಾ ಚಾಮರಾಜನಗರ ಜಿಲ್ಲಾಧ್ಯಕ್ಷ ಹನೂರು ವೆಂಕಟೇಶ್‌ ನೇತೃತ್ವದಲ್ಲಿ ಬಿಜೆಪಿಯಿಂದ ಐವರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ತನ್ನ ವರದಿ ಸಲ್ಲಿಸಿದೆ. ವರದಿ ಸಲ್ಲಿಕೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಹನೂರು ವೆಂಕಟೇಶ್‌, ಈ ಪ್ರಕರಣ ಅರಣ್ಯ ಇಲಾಖೆಯನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಮೂವರನ್ನು ಸಮೀಪದಿಂದಲೇ ಶೂಟ್ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇವರು ಬೇಟೆಗಾರರಲ್ಲ, ಮುಗ್ಧ ರೈತರು. ಮರಣೋತ್ತರ ಪರೀಕ್ಷಾ ವರದಿ ಹಾಗೂ ಪ್ರಯೋಗಾಲಯದ ವರದಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಿರುವ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿವೆ. ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸುವವರೆಗೂ ಬಿಜೆಪಿ ಅವರ ಬೆನ್ನಿಗೆ ನಿಲ್ಲುತ್ತದೆ. ಈ ವರದಿಯ ಸತ್ಯಾಂಶವನ್ನು ಇಡೀ ರಾಜ್ಯದ ಜನರಿಗೆ ತಲುಪಿಸುತ್ತೇವೆ ಎಂದು ತಿಳಿಸಿದರು.

ಘಟನೆಯೇನು?:

ಆ.15ರ ಮುಂಜಾನೆ ಕಾವೇರಿ ವನ್ಯಜೀವಿಧಾಮದ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೇಟೆಯಾಡುತ್ತಿದ್ದರು ಎಂಬ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ಗುಂಡಿನ ದಾಳಿ ನಡೆಸಿ ಮೂವರನ್ನು ಹತ್ಯೆ ಮಾಡಿದ್ದರು ಎಂದು ಇಲಾಖೆ ಹೇಳಿತ್ತು. ಆದರೆ, ಮೃತ ಕುಮಾರ್, ಪೀಟರ್ ಮತ್ತು ಅಂತೋಣಿ ಸ್ವಾಮಿ ಅವರ ಕುಟುಂಬಸ್ಥರು ಇದನ್ನು ತಳ್ಳಿಹಾಕಿದ್ದು, ನಮ್ಮವರು ಬೇಟೆಗಾರರಲ್ಲ, ಹೈನುಗಾರಿಕೆ ಮತ್ತು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮುಗ್ಧ ರೈತರು. ಕಾಡಿಗೆ ಹಸು ಹುಡುಕಲು ಹೋಗಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ಅಮಾನವೀಯವಾಗಿ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯಾಸತ್ಯತೆ ಹೊರತರಲು ಬಿಜೆಪಿಯಿಂದ ಸತ್ಯಶೋಧನಾ ಸಮಿತಿ ರಚಿಸಿ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದರು. ಹನೂರು ವೆಂಕಟೇಶ್‌ ಅಧ್ಯಕ್ಷತೆಯ ಸಮಿತಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ನಿರಂಜನ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್ ಗೌಡ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಸುನಿಲ್ ಥಾಮಸ್ ಇದ್ದರು. ಸಮಿತಿಯ ಸದಸ್ಯರು ಹನೂರಿನ ತೋಮಿಯಾರ್ ಪಾಳ್ಯದ ಚರ್ಚ್‌, ಮೃತ ಕುಟುಂಬಸ್ಥರ ಮನೆ, ಘಟನಾ ಸ್ಥಳದಿಂದ ಪರಾರಿಯಾಗಿದ್ದ ಪ್ರತ್ಯಕ್ಷದರ್ಶಿ ಮಹಿಮಾ ದಾಸ್, ಹನೂರು ಪೊಲೀಸ್ ಠಾಣೆ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಅಲ್ಲದೆ, ಮರಣೋತ್ತರ ಪರೀಕ್ಷಾ ವರದಿ, ಪ್ರಯೋಗಾಲಯಕ್ಕೆ ಕಳುಹಿಸಿದ್ದ ಫೋರೆನ್ಸಿಕ್ ವರದಿ ಮತ್ತು ಸ್ಕ್ಯಾನಿಂಗ್ ರಿಪೋರ್ಟ್‌ಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ವರದಿ ತಯಾರಿಸಿದ್ದಾರೆ.ಅರಣ್ಯ ಶಿಬಿರ, ಬೈಕ್‌ಗೆ ಬೆಂಕಿ ಕಿಡಿಗೇಡಿಗಳ ಕಿಚ್ಚಿಗೆ ಸಿಬ್ಬಂದಿ ಬೈಕ್‌, ಸರಂಜಾಮು ನಾಶ:

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಆ.15ರಂದು ಶೂಟೌಟ್‌ ನಡೆದ ತರುವಾಯ ಕಿಡಿಗೇಡಿಗಳ ಅಟ್ಟಹಾಸಕ್ಕೆ ಪಾರವೇ ಇಲ್ಲದಂತಾಗಿದೆ.

ಕಾವೇರಿ ವನ್ಯಜೀವಿ ಧಾಮದ ಶಾಗ್ಯ ಬೀಟ್‌ನಲ್ಲಿನ ಬೇಟೆಗಾರನ ಗುಡ್ಡದ ಅರಣ್ಯ ಮಾಹಿತಿ ಶಿಬಿರಗಳನ್ನು ಬೆಂಕಿ ಹಚ್ಚಿ ಸಂಪೂರ್ಣ ಧ್ವಂಸಗೊಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.ಕ್ಯಾಂಪ್‌ನಲ್ಲಿದ್ದ ಜನರೇಟರ್‌, ಸೋಲಾರ್‌ ಪ್ಯಾನಲ್, ವೈರ್‌ಲೆಸ್ ಸೆಟ್‌ಗಳು ಬೆಂಕಿಗೆ ಆಹುತಿಯಾಗಿವೆ. ಸಿಬ್ಬಂದಿ ಬಳಕೆಯ ಬೈಕ್, ಮಂಚ, ದಿನಸಿ ಸಾಮಗ್ರಿ, ಬ್ಯಾಟರಿಗಳನ್ನು ಹೊರಗೆಳೆದು ಸುಟ್ಟು ಹಾಕಲಾಗಿದೆ. ಕಟ್ಟಡದ ಗೋಡೆ ಬಾಗಿಲು ಸೇರಿದಂತೆ ಕಿಟಕಿ ಗಾಜುಗಳು ಕಬ್ಬಿಣದ ಗ್ರಿಲ್ಸ್ ಸಂಪೂರ್ಣ ನಾಶವಾಗಿವೆ.

ಶಾಗ್ಯ ಬೀಟ್‌ನಲ್ಲಿ ಒಟ್ಟು 28 ಕ್ಯಾಂಪ್‌ಗಳ ಪೈಕಿ ಈಗಾಗಲೇ 8 ಕ್ಯಾಂಪ್‌ಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅರಣ್ಯ ಇಲಾಖೆಗೆ ದುಷ್ಕರ್ಮಿಗಳ ಅಟ್ಟಹಾಸದಿಂದ ಕೋಟ್ಯಂತರ ರು. ನಷ್ಟ ಉಂಟಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.