ಸತ್ಯ ಶುದ್ಧವಾದ ಜೀವನಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆಯ ಅಗತ್ಯವಿದೆ. ಧರ್ಮದ ವೃಕ್ಷ ಬರೀ ವೃಕ್ಷವಲ್ಲ. ಅದೊಂದು ಅದ್ಭುತ ಅಶ್ವತ್ಥ ವೃಕ್ಷ.

ಲಕ್ಷ್ಮೇಶ್ವರ: ಸಿರಿತನ ಬಂದಾಗ ಹಿಗ್ಗದೇ ಬಡತನ ಬಂದಾಗ ಕುಗ್ಗದೇ ಕ್ರಿಯಾಶೀಲನಾಗಿ ಬಾಳುವುದೇ ಜೀವನದ ಗುರಿಯಾಗಬೇಕಾಗಿದೆ. ಹೊರಗಿನ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವುದರ ಜತೆಗೆ ಒಳಗಿರುವ ಆಧ್ಯಾತ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಅಧ್ಯಾತ್ಮ ಸಂಪತ್ತಿನಿಂದ ಜೀವನದಲ್ಲಿ ಸುಖ, ಶಾಂತಿ ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. ಗುರುವಾರ ಹಾಲೇವಾಡಿಮಠದ ರೇಣುಕಾಚಾರ್ಯ ಮಂದಿರದ ರಜತ ಮಹೋತ್ಸವ- ಜಯಂತ್ಯುತ್ಸವ ಹಾಗೂ ಮಾತಾ ಪಿತೃಗಳ ಪುಣ್ಯಸ್ಮರಣೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸತ್ಯ ಶುದ್ಧವಾದ ಜೀವನಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆಯ ಅಗತ್ಯವಿದೆ. ಧರ್ಮದ ವೃಕ್ಷ ಬರೀ ವೃಕ್ಷವಲ್ಲ. ಅದೊಂದು ಅದ್ಭುತ ಅಶ್ವತ್ಥ ವೃಕ್ಷ. ಸಮೃದ್ಧಿ ಶಾಂತಿಯ ತಂಗಾಳಿ ನೀಡುವ ಹೆಮ್ಮರ. ಆಚಾರ್ಯರು ಋಷಿ ಮುನಿಗಳು ಸಾಧು ಸಂತ ಮಹಾಂತರು ಜ್ಞಾನ ಸುಧೆಯನ್ನು ಹಂಚುವುದರ ಮೂಲಕ ಇತರರ ಬಾಳು ಬೆಳಗಿಸುತ್ತಾರೆ ಎಂದರು. ಸಮಾರಂಭ ಉದ್ಘಾಟಿಸಿದ ಆನಂದ ಮೆಕ್ಕಿ ಮಾತನಾಡಿ, ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮ ಶ್ರದ್ಧೆ ಮತ್ತು ಸದಾಚಾರ ಬೆಳೆದು ಬರಬೇಕಾಗಿದೆ. ಈ ದಿಶೆಯಲ್ಲಿ ಹಾಲೇವಾಡಿಮಠ ಸಹೋದರರ ಕಾರ್ಯ ಸ್ತುತ್ಯವಾದುದೆಂದರು.

ಚಂಬಣ್ಣ ಬಾಳಿಕಾಯಿ ಅವರು ಭಾವಚಿತ್ರ ಬಿಡುಗಡೆ ಮಾಡಿ ಮಾತನಾಡಿ, ಹಾಲೆವಾಡಿಮಠ ಬಂಧುಗಳು ಕೈಗೊಂಡಿರುವ ಧಾರ್ಮಿಕ ಕಾರ್ಯಗಳು ಇತರರಿಗೆ ಸ್ಫೂರ್ತಿದಾಯಕವಾಗಿವೆ ಎಂದರು.

ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ದುಡಿಮೆಯ ಬದುಕಿನಿಂದ ಉತ್ಕರ್ಷ ಸಾಧ್ಯ. ನಡೆಯುವ ಕಾಲು ದುಡಿಯುವ ಕೈಗಳು ಇರದಿದ್ದರೆ ಏನೂ ಮಾಡಲಾಗದು. ಅರಮನೆ ಇರಲಿ, ಗುಡಿಸಲೇ ಇರಲಿ. ದುಡಿಯುವುದರಲ್ಲಿ ಉತ್ಸಾಹ ಇದ್ದರೆ ಬದುಕು ಬಲಗೊಳ್ಳುತ್ತದೆ ಎಂದರು.

ಡಾ. ಸಿದ್ಧಲಿಂಗೇಶ ಸಜ್ಜನಶೆಟ್ರ ಉಪನ್ಯಾಸ ನೀಡಿದರು. ವೀರೇಶ ಕೂಗು, ವಿಜಯ ಮಹಾಂತಶೆಟ್ಟರ, ಕುಬೇರಪ್ಪ ಮಹಾಂತಶೆಟ್ಟರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೈಸೂರು- ಬನ್ನಿಕೊಪ್ಪದ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯರು, ಗಂಜೀಗಟ್ಟಿ ಡಾ. ವೈಜನಾಥ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು, ಕರೇವಾಡಿಮಠ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿದರು. ಶಿವಲಿಂಗಯ್ಯ ಹಾಲೆವಾಡಿಮಠ ಕಾರ್ಯಕ್ರಮವನ್ನು ಸಂಯೋಜನೆಗೊಳಿಸಿದ್ದರು. ಡಾ. ಎಸ್.ಜಿ. ಹಾಲೆವಾಡಿಮಠ ಸ್ವಾಗತಿಸಿದರು. ಡಾ. ಪ್ರಭುಸ್ವಾಮಿ ಜಿ. ಹಾಲೆವಾಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗುರುವಾರ ಸಂಜೆ ಮಾಜಿ ಮುಖ್ಯ ಮಂತ್ರಿ ಸಂಸದ ಬಸವರಾಜ ಬೊಮ್ಮಾಯಿಯವರು ಮುಕ್ತಿಮಂದಿರ ಕ್ಷೇತ್ರಕ್ಕೆ ಭೇಟಿ ನೀಡಿ ಲಿಂ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಗದ್ದುಗೆ ದರ್ಶನ ಮಾಡಿ ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳ ಆಶೀರ್ವಾದ ಪಡೆದರು.