ಸಾರಾಂಶ
ಕನ್ನಡಪ್ರಭ ವಾರ್ತೆ ಹಾರನಹಳ್ಳಿ
ಇಲ್ಲಿನ ಪಶು ಚಿಕಿತ್ಸಾಲಯದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ ಎರಡು ವರ್ಷವಾದರೂ ಕಾಮಗಾರಿ ಮುಗಿಯದೆ ಹಳೆ ಪಶು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸ್ಥಿತಿ ಉದ್ಭವವಾಗಿದೆ.ಸುಮಾರು 42 ಲಕ್ಷ ರು. ವೆಚ್ಚದಲ್ಲಿ ಪಶು ಇಲಾಖೆ ಕಟ್ಟಡ ಆರಂಭವಾಗಿ ಎರಡು ವರ್ಷವಾದರೂ ಕಾಮಗಾರಿ ಹಣದ ಕೊರತೆಯಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಹೊಸ ಕಟ್ಟಡದ ನೆಲಹಾಸು ಹಾಗೂ ಕಟ್ಟಡ ಮೇಲೆ ಕಟ್ಟಿದ ರೂಮ್‌ಗಳಿಗೆ ಕಾಮಗಾರಿ ಕೆಲಸಗಳು ಬಾಕಿ ಇದೆ. ಕಟ್ಟಡದ ಶಿಥಿಲಾವಸ್ಥೆಯಲ್ಲಿದ್ದು ಇದನ್ನು ಮನಗಂಡ ಇಲಾಖೆ ಹೊಸ ಕಟ್ಟಡಕ್ಕೆ ಕಟ್ಟಿಸಲು ಆರಂಭ ಮಾಡಿದ್ದು, ಹಾರನಹಳ್ಳಿ ಎರೆಹಳ್ಳಿ, ಗುತ್ತಿನಕೆರೆ, ಮಾಕನಹಳ್ಳಿ, ಹೆಬ್ಬಾರನಹಳ್ಳಿ, ಕನ್ನಕಂಚೇನಹಳ್ಳಿ, ದೊಡ್ಡೇನಹಳ್ಳಿ ಸುತ್ತಮುತ್ತಲಿನ ಗ್ರಾಮದ ಜಾನುವಾರುಗಳು ಹಾರನಹಳ್ಳಿ ಪಶು ಇಲಾಖೆಯ ನಿರ್ವಹಣೆಯಲ್ಲಿ ನಡೆಯುತ್ತಿದ್ದು, ಈ ಆರೋಗ್ಯ ಕೇಂದ್ರ ಜಾನುವಾರುಗಳಿಗೆ ಸಂಜೀವಿನಿ ಕೇಂದ್ರ ಇದ್ದಹಾಗೆ. ತಕ್ಷಣ ಪಶು ಇಲಾಖೆಯ ಕಾಮಗಾರಿಯನ್ನು ಮುಗಿಸುವಂತೆ ರೈತ ಸಂಘದ ಮುಖಂಡ ಕನ್ನಕಂಚೇನಹಳ್ಳಿ ಪ್ರಸನ್ನ ಕುಮಾರ್ ಅವರು ಆಗ್ರಹಿಸಿದ್ದಾರೆ.ಹಾರನಹಳ್ಳಿ ಪಶು ಚಿಕಿತ್ಸಾಲಯ ಕಟ್ಟಡ ಹೆಚ್ಚುವರಿ ಕಾಮಗಾರಿ ಆಗಿದ್ದು, ಸುಮಾರು 8 ಲಕ್ಷ ಅವಶ್ಯಕತೆ ಇದೆ. ಇದರ ಬಗ್ಗೆ ಅಂದಾಜು ಮಾಡಿ ಹೆಚ್ಚುವರಿ ಅನುದಾನ ಬಿಡುಗಡೆಮಾಡಲು ಜಿಲ್ಲಾ ಪಂಚಾಯತಿ ಕಳುಹಿಸಿರುವುದಾಗಿ ಅರಸೀಕೆರೆ ಪಶು ಚಿಕಿತ್ಸಾಲಯಗಳ ಇಲಾಖೆ ಅಧಿಕಾರಿ ಶಶಿಕಾಂತ್ ಬೂದಿಹಾಳ್ ತಿಳಿಸಿದ್ದರು.