ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿ ನೆಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಲು ಕಿರುಕುಳ ನೀಡುತ್ತಿದ್ದಾರೆ ಎಂದು ಕೊಳಗೊಂಡನಹಳ್ಳಿ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ರಾಜ್ಯದ ಗಡಿಭಾಗದ ಕೊಳಗೊಂಡನಹಳ್ಳಿ ಗ್ರಾಮದ ಅರಣ್ಯದ ಗಡಿಯಲ್ಲಿ ರೈತರು ಸಾಗುವಳಿ ಮೂಲಕ ಮಂಜೂರಾಗಿರುವ ಜಮೀನಿನಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ತಡೆದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊಳಗೊಂಡನಹಳ್ಳಿ ಮಾಧವ, ಶಂಭು ಶೆಟ್ಟಿ, ಶಿವು ಸೇರಿ ಹಲವು ರೈತರು ಮಾತನಾಡಿ. ಕಳೆದ ಎರಡು ತಲೆಮಾರುಗಳಿಂದ ಈ ಭೂಮಿಯನ್ನು ನಂಬಿಕೊಂಡು ಬದುಕುತ್ತಿದ್ದೇವೆ. ಸರ್ಕಾರ ಸಾಗುವಳಿ ಮೂಲಕ ರೈತರಿಗೆ ಭೂಮಿಯನ್ನು ಮಂಜೂರು ಮಾಡಿಕೊಟ್ಟಿದೆ, ಕೆಲವರ ಜಮೀನಿಗೆ ಸ್ಕೆಚ್, ಒಎಂ, ಪಹಣಿ ಕೂಡ ಬಂದಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ಭೂಮಿಯನ್ನು ಕಿತ್ತುಕೊಂಡು ನಮ್ಮನ್ನು ಒಕ್ಕಲೆಬ್ಬಿಸಲು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ನಾಲ್ಕು ದಶಕಗಳ ಹಿಂದೆ ನಮ್ಮ ಪೂರ್ವಿಕರು ಅವಿದ್ಯಾವಂತರು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅವರನ್ನು ಹೆದರಿಸಿ, ಬೆದರಿಸಿ ನಮ್ಮ ಜಮೀನಿನಲ್ಲೇ ಅರಣ್ಯದ ಗಡಿ ಗುರುತಿಸಿ ಫೆನ್ಸಿಂಗ್ ಹಾಕಿದ್ದು, ಈಗ ಆ ಗಡಿಯನ್ನೂ ಮೀರಿ ರೈತರ ಭೂಮಿಗೆ ಅತಿಕ್ರಮ ಪ್ರವೇಶ ಮಾಡಿ ರೈತರ ಜಮೀನಿನಲ್ಲೇ ರೈಲ್ವೆ ಬ್ಯಾರಿಕೇಡ್ ಕಾಮಗಾರಿಗೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಮತ್ತು ಸರ್ವೇ ಇಲಾಖೆ ಜಂಟಿ ಸರ್ವೇ ನಡೆಸಿ, ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಸಚಿವರೇ ಖುದ್ದು ಆದೇಶ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸಚಿವರ ಆದೇಶವನ್ನು ಗಾಳಿಗೆ ತೂರಿ, ರೈತರ ಭೂಮಿ ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.ಕಾಡಂಚಿನ ಸರ್ವೇ ನಂ. 75, 57 ಮತ್ತು 42 ರಲ್ಲಿರುವ ಭೂಮಿಯನ್ನು ನಂಬಿಕೊಂಡು ಹಲವಾರು ರೈತರು ಜೀವನ ನಡೆಸುತ್ತಿದ್ದಾರೆ, ಅರಣ್ಯ ಇಲಾಖೆ ಭೂಮಿಯನ್ನು ಕಿತ್ತುಕೊಂಡರೆ ಈಗ ರೈತರು ಬೀದಿಗೆ ಬೀಳಬೇಕಾಗುತ್ತದೆ. ನಮಗೆ ನ್ಯಾಯ ಕೊಡಿಸುವವರು ಯಾರು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜಮೀನಿನಲ್ಲಿ ರೈತರಿಲ್ಲದಿದ್ದಾಗ ಕದ್ದು ಮುಚ್ಚಿ ರೈಲ್ವೆ ಬ್ಯಾರಿಕೇಡ್ ಅಳವಡಿಸುತ್ತಿದ್ದಾರೆ, ರೈತರು ಬಂದ ತಕ್ಷಣ ಸ್ಥಳದಿಂದ ಓಡಿ ಹೋಗುತ್ತಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಕಾಮಗಾರಿಯನ್ನು ತಡೆದು ರೈತರಿಗೆ ನ್ಯಾಯ ಕೊಡಿಸಬೇಕು, ಇಲ್ಲದಿದ್ದರೆ ಅರಣ್ಯ ಇಲಾಖೆ ಮತ್ತು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಚಿಕ್ಕಮಾದ ಶೆಟ್ಟಿ, ಮುನಿ ಚೆನ್ನಶೆಟ್ಟಿ, ಚಂದ್ರಶೇಖರ್, ಶೇಷ, ಪಿಳ್ಳೆ ಮಾದೇವ ಸೇರಿ ಹಲವು ರೈತರು ಉಪಸ್ಥಿತರಿದ್ದರು.