ಸಾಲಗಾರರಿಗೆ ಕಿರುಕುಳ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ

| Published : Feb 05 2025, 12:30 AM IST

ಸಾಲಗಾರರಿಗೆ ಕಿರುಕುಳ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು, ಆರ್‌ಬಿಐ ಪ್ರತಿನಿಧಿ ಹಾಗೂ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಯವುದೇ ಭಾಗದಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು, ಇತರೆ ವ್ಯಕ್ತಿಗಳು, ಸಂಸ್ಥೆಗಳಿಂದ ಸಾಲಗಾರರಿಗೆ ಕಿರುಕುಳ ನೀಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಎಚ್ಚರಿಕೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು, ಆರ್‌ಬಿಐ ಪ್ರತಿನಿಧಿ ಹಾಗೂ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಲ ನೀಡುವ ಮೈಕ್ರೋಫೈನಾನ್ಸ್ ಕಂಪನಿಗಳು ಆರ್‌ಬಿಐ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಾಲಗಾರರು ಅಥವಾ ಅವರ ಕುಟುಂಬದ ಸದಸ್ಯರ ಮೇಲೆ ಸಾಲ ವಸೂಲಾತಿಗಾಗಿ ವಿನಾಕಾರಣ ಒತ್ತಡ ತರುವಂತಿಲ್ಲ. ಸಾಲ ಪಡೆದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಅವಮಾನಿಸುವುದು, ಹಿಂಸೆ ನೀಡುವಂತಿಲ್ಲ. ಸಾಲಗಾರರ ಸ್ವಾಧೀನದಲ್ಲಿರುವ ವಸ್ತುಗಳು, ಆಸ್ತಿಗಳ ಬಳಕೆಗೆ ಅಡ್ಡಿಪಡಿಸಬಾರದು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಾಲ ವಸೂಲಿ ಮಾಡಲು ಯಾವುದೇ ಬಲವಂತದ ಕ್ರಮಗಳನ್ನು ಅನುಸರಿಸಬಾರದು. ಸಾಲ ವಸೂಲಿಗಾಗಿ ಹೊರ ವ್ಯಕ್ತಿಗಳು, ಅಪರಾಧ ಹಿನ್ನೆಲೆ ಹೊಂದಿರುವವರನ್ನು ಬಳಸಿ ಬೆದರಿಕೆ ಹಾಕಬಾರದು. ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಲೇವಾದೇವಿದಾರರು ನೀಡುತ್ತಿರುವ ಕಿರುಕುಳದಿಂದ ಸಾಲಗಾರರನ್ನು ರಕ್ಷಿಸಲು ಸರ್ಕಾರದಿಂದ ಹೊರಡಿಸಲಾಗುವ ಹೊಸ ಆಜ್ಞೆ ಹಾಗೂ ಆದೇಶಗಳನ್ನು ನಿರೀಕ್ಷಿಸಲಾಗಿದೆ. ಇದರಂತೆ ಕಿರುಕುಳ ನೀಡುವ ಮೈಕ್ರೊ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮವಹಿಸಲಿದ್ದೇವೆ ಎಂದರು. ಮೈಕ್ರೊ ಫೈನಾನ್ಸ್ ಕಂಪನಿ ಕಿರುಕುಳ ಕುರಿತ ದೂರು ಸಲ್ಲಿಸಲು ಸಹಾಯವಾಣಿ ತೆರೆಯಲಾಗಿದೆ. ನೋಂದಣಿ ಪರವಾನಗಿ ಹೊಂದಿರುವವರು ಹಾಗೂ ಇಲ್ಲದಿರುವ ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು ಇತರೆ ಸಾಲ ನೀಡುವವರ ಮೇಲೆ ನಿಗಾವಹಿಸಿದ್ದೇವೆ. ಎಲ್ಲ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಜಿಲ್ಲೆಯ ಎಲ್ಲಿಯೇ ಆಗಲಿ ಸಾಲಗಾರರಿಗೆ ಅನಾವಶ್ಯಕವಾಗಿ ತೊಂದರೆ ನೀಡುವವರ ವಿರುದ್ದ ಕ್ರಮ ವಹಿಸುತ್ತೇವೆ. ಕಂಪನಿಗಳು ನಿಯಮಾವಳಿ, ಮಾರ್ಗಸೂಚಿ ಉಲ್ಲಂಘನೆ ಮಾಡಬಾರದು ಎಂದು ಜಿಲ್ಲಾಧಿಕಾರಿಯವರು ಕಟುನಿಟ್ಟಿನ ಸೂಚನೆ ನೀಡಿದರು.

ಆರ್‌ಬಿಐ ನಿಯಮಗಳ ಪ್ರಕಾರ ನೀಡಲಾಗುವ ಸಾಲದ ಮೊತ್ತ, ವಿಧಿಸಿರುವ ಬಡ್ಡಿದರ, ಮಾಸಿಕ ಕಂತುಗಳು ಸೇರಿದಂತೆ ಎಲ್ಲ ವಿವರಗಳನ್ನು ಸ್ಥಳೀಯ ಭಾಷೆಯಲ್ಲಿ ಸಾಲ ಪಡೆದವರಿಗೆ ವಿವರಿಸಬೇಕು. ಪಾರದರ್ಶಕವಾಗಿ ಪ್ರಕ್ರಿಯೆ ಇರಬೇಕು. ಜಿಲ್ಲೆಯಲ್ಲಿ ವ್ಯಾಪಕವಾಗಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ. ಗ್ರಾಮ ಸಭೆಗಳಲ್ಲೂ ಜಾಗೃತಿ ಶಿಬಿರ ಹಮ್ಮಿಕೊಳ್ಳಲು ಸೂಚನೆ ನೀಡಿದ್ದೇವೆ. ಇಂತಹ ಕಾರ್ಯಕ್ರಮಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿ ಜನರಿಗೆ ವಾಸ್ತವ ಅಂಶಗಳನ್ನು ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಸಾಲಗಾರರಿಗೆ ಶೋಷಣೆ ಮಾಡುವಂತಿಲ್ಲ. ಸಾಲ ಕಟ್ಟುವ ಸಾಮರ್ಥ್ಯವಿಲ್ಲದಿದ್ದರೂ ಲಾಭವನ್ನಷ್ಟೇ ಕೇಂದ್ರಕರಿಸಿ ಸಾಲ ನೀಡಿ ಬಳಿಕ ಬಲವಂತದ ವಸೂಲಿಗೆ ಫೈನಾನ್ಸ್ ಕಂಪನಿಗಳು ಮುಂದಾಗಬಾರದು. ಸಾಲ ನೀಡುವ ಮುನ್ನ ಸಾಲಗಾರರ ದುಡಿಮೆ ಆದಾಯವನ್ನು ನೋಡಬೇಕು. ಸಾಲ ಪಡೆದುಕೊಂಡವರಿಗೆ ಕಿರುಕುಳ, ಅವಮಾನ, ನಿಂದನೆ ಮಾಡುವುದನ್ನು ಸಹಿಸುವುದಿಲ್ಲ. ಕಿರುಕುಳಕ್ಕೆ ಸಂಬಂಧಿಸಿದ ದೂರುಗಳು ಬಂದರೆ ನಿಯಮಾನುಸಾರ ಪ್ರಕರಣ ದಾಖಲು ಮಾಡಿ ತ್ವರಿತವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಆರ್‌ಬಿಐನ ಲೀಡ್ ಜಿಲ್ಲಾ ಅಧಿಕಾರಿ ವಿಜಯಶ್ರೀ ಮಾತನಾಡಿ, ಮೈಕ್ರೋಫೈನಾನ್ಸ್ ಕಂಪನಿಗಳು 3 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರಿಗೆ ಸಾಲ ನೀಡಬೇಕಿದೆ. ಸಾಲ ಮರುಪಾವತಿಸುವ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ವಿತರಿಸಬೇಕು. ನಿಯಮಾವಳಿಗಳ ಪ್ರಕಾರ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಸಾಲಗಾರರ ಮನೆಯ ಬಳಿ ತೆರಳಬೇಕು. ನಿಗದಿತ ವೇಳೆಯ ನಂತರ ಸಾಲ ವಸೂಲಿ ಮಾಡುವಂತಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಎನ್.ಸುರೇಖ, ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಮೈಕ್ರೋಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.