ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಹನುಮ ಧ್ವಜ ವಿಚಾರವಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಮೇಲೆ ರಾಜಕೀಯ ಪ್ರಭಾವದಿಂದ ರೌಡಿಶೀಟರ್ ತೆರೆಯಲು ನೋಟಿಸ್ ನೀಡಿರುವ ಕ್ರಮ ವಿರೋಧಿಸಿ ಹಾಗೂ ಹನುಮ ಭಕ್ತರ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು ಗ್ರಾಮಸ್ಥರೊಂದಿಗೆ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.ಗ್ರಾಮದ ಬಸ್ ನಿಲ್ದಾಣ ಸಮೀಪದ ವೃತದಿಂದ ಹಿಂದೂ ಸಂಘಟನೆಯ ಕಾರ್ಯಕರ್ತರು ಮೆರವಣಿಗೆ ಹೊರಟು ಜೈ ಶ್ರೀ ರಾಮ್ ಘೋಷಣೆ ಕೂಗುತ್ತಾ ಕೆರಗೋಡು ಪೊಲೀಸ್ ಠಾಣೆಗೆ ಆಗಮಿಸಿದರು. ನಂತರ ಪೊಲೀಸರು ಜಾರಿ ಮಾಡಿದ್ದ ನೋಟಿಸ್‌ಗೆ ಹೈಕೋರ್ಟ್ ವಕೀಲ ಎಲ್.ಎನ್.ಹೆಗಡೆ ಉತ್ತರ ನೀಡಿದರು.
ಕೆರಗೋಡು ಹನುಮ ಧ್ವಜ ಹೋರಾಟದಲ್ಲಿ ಭಾಗಿಯಾಗಿದ್ದ ಹನುಮ ಭಕ್ತರ ಮೇಲೆ ರಾಜಕೀಯ ಪ್ರಭಾವಕ್ಕೊಳಗಾಗಿ ನಿರಂತರ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿರುವ ಸಿಪಿಐ ಮಹೇಶ್ ಮತ್ತು ಪಿಎಸ್‌ಐ ರಂಗಪ್ಪ ಸರಾಪುರ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.ಕೆರಗೋಡು ಗ್ರಾಮದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಹನುಮ ಧ್ವಜಸ್ತಂಬದಲ್ಲಿ ಹನುಮ ಧ್ವಜ ಹಾರಾಟ ಗ್ರಾಮಸ್ಥರು ಹಾಗೂ ಹನುಮ ಭಕ್ತರು ಹೋರಾಟ ಮಾಡಿದ್ದರು. ಈಗ ಪ್ರತಿಭಟನೆ ಮಾಡಿದವರ ಮೇಲೆ ರೌಡಿಶೀಟರ್ ತೆರೆದಿದ್ದು, ರಾಜ್ಯ ಸರ್ಕಾರ ಹಾಗೂ ಸಚಿವ, ಶಾಸಕರ ಒತ್ತಡಕ್ಕೆ ಮಣಿದು ಇಂತಹ ಕೃತ್ಯಕ್ಕೆ ಪೊಲೀಸರು ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಹನುಮ ಧ್ವಜ ತೆರವು ಮಾಡಿ ರಾಷ್ಟ್ರಧ್ವಜ ಹಾರಿಸಲಾಗಿದೆ. ಅಂದು ಹೋದ ಅಧಿಕಾರಿಗಳು ಇಂದಿಗೂ ಸಹ ಇತ್ತ ತಲೆ ಹಾಕದೆ ರಾಷ್ಟ್ರಧ್ವಜವನ್ನು ಸಹ ಹಾರಿಸದೆ ಅಗೌರವ ತೋರುತ್ತಿದ್ದಾರೆ. ಹನುಮಧ್ವಜ ಹೋರಾಟದಲ್ಲಿ ಭಾಗಿಯಾಗಿದ್ದವರ ಮೇಲೆ ಶಾಸಕರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ರಾಜಕೀಯ ಒತ್ತಡಕ್ಕೆ ಒಳಗಾಗಿರುವ ಪೊಲೀಸರು ಅಮಾಯಕರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿದ್ದಾರೆ. ಜೈ ಶ್ರೀ ರಾಮ್ ಘೋಷಣೆ ಕೂಗಿದವರನ್ನು ಠಾಣೆಗೆ ಕರೆಸಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಹನುಮ ಧ್ವಜ ಹೋರಾಟದಲ್ಲಿ ಭಾಗಿಯಾಗಿದ್ದ ಬಾಲಕೃಷ್ಣ, ಶಿವು, ಕಾರ್ತಿಕ್ ಹಾಗೂ ಹರೀಶ್ ಎಂಬ ಅಮಾಯಕರ ಮೇಲೆ ನಿಮ್ಮನ್ನು ಏಕೆ ರೌಡಿ ಶೀಟರ್ ಪಟ್ಟಿಗೆ ಸೇರಿಸಬಾರದು ಎಂದು ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿದರು.ರೌಡಿ ಶೀಟರ್ ಪಟ್ಟಿಗೆ ಸೇರ್ಪಡೆ ಮಾಡಲು ಅದಕ್ಕೆ ಆದ ನಿಯಮಾವಳಿಗಳಿವೆ. ಆದರೆ, ಅದನ್ನು ಗಾಳಿಗೆ ತೂರಿ ಯಾವುದೇ ಕ್ರಿಮಿನಲ್ ಅಪರಾಧ ಇಲ್ಲದಿದ್ದರೂ ಹನುಮ ಧ್ವಜ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ರೌಡಿಶೀಟರ್ ಪಟ್ಟಿಗೆ ಸೇರಿಸಲು ಪೋಲಿಸ್ ಅಧಿಕಾರಿಗಳು ಮುಂದಾಗಿದ್ದಾರೆ. ಇದು ನಿಲ್ಲದಿದ್ದರೆ ಪ್ರತಿಭಟನೆ ನಿರಂತರವಾಗಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೆರಗೋಡು ಠಾಣೆ ಸಬ್ ಇನ್ಸ್‌ಪೆಕ್ಟರ್, ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್‌ಪಿ ಅವರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿ ಮಾಡಿದ್ದಾರೆ, ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡದಿಂದ ಯುವಕರನ್ನು ಹೆದರಿಸಿ, ಬೆದರಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ ಎಂದು ದೂರಿದರು.ಹನುಮಧ್ವಜ ವಿಚಾರದಲ್ಲಿ ಜಿಲ್ಲಾಡಳಿತ ನಮ್ಮಗಳ ವಿರುದ್ಧ ನಿಂತಾಗ ಕಾನೂನಾತ್ಮಕ ಹೋರಾಟದಿಂದ ನ್ಯಾಯ ಪಡೆಯಲು ಮುಂದಾಗಿದ್ದು, ಆದರೆ, ಪೊಲೀಸರು ಕೆರಗೋಡು ಮತ್ತು ಸುತ್ತಮುತ್ತಲ ಗ್ರಾಮದ ಯುವಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವುದು ಸರಿಯಲ್ಲ. ಕೂಡಲೇ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ರಘುನಂದನ್, ವಸಂತ್‌ರಾಜ್, ಭೀಮೇಶ್, ಯೋಗೇಶ್, ನರಸಿಂಹಮೂರ್ತಿ, ವಿರೂಪಾಕ್ಷ, ಬಾಲು ಚಿಕ್ಕಬಳ್ಳಿ, ಶ್ರೀನಿವಾಸ್, ಶಿವು, ಕಾರ್ತಿಕ್, ಹರೀಶ್, ಮೋಹನ್, ರಾಜೇಶ್ ಇತರರು ಭಾಗವಹಿಸಿದ್ದರು.