ಸಾರಾಂಶ
ಹಾವೇರಿ: ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಾಳಲಾರದೇ ಕಿರಾಣಿ ಅಂಗಡಿ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಂಕಾಪುರ ಪಟ್ಟಣದಲ್ಲಿ ಸಂಭವಿಸಿದೆ.
ಬಂಕಾಪುರದ ನಾಗಪ್ಪ ಪುಟ್ಟಪ್ಪ ಗುಂಜಾಳ (೩೬) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.ಈತ ಕಿರಾಣಿ ಅಂಗಡಿ ನಡೆಸಲು ವಿವಿಧ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಹಾಗೂ ಕೈಗಡ ಅಂತಾ ಬೇರೆ, ಬೇರೆ ಕಡೆ ಸುಮಾರು ೧೫ ಲಕ್ಷ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗದೇ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸಾಲ ಮರುಪಾವತಿಸುವಂತೆ ಮೈಕ್ರೋ ಫೈನಾನ್ಸ್‌ನವರು ಇತ್ತೀಚೆಗೆ ಕಿರುಕುಳ ನೀಡುತ್ತಿದ್ದರು ಎಂಬ ದೂರುಗಳು ಸಹ ಕೇಳಿ ಬಂದಿವೆ.
ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಊರು ತೊರೆದ ಮಹಿಳೆ:ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮುಂದುವರೆದಿದ್ದು, ಮತ್ತೊಬ್ಬರಿಗೆ ಸಾಲ ತೆಗೆದುಕೊಟ್ಟು ಮಹಿಳೆಯೊಬ್ಬಳು ಇದೀಗ ಸಂಕಷ್ಟ ಎದುರಿಸುತ್ತಿದ್ದಾಳೆ.ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪದ ಸಾವಿತ್ರಮ್ಮ ವಡ್ಡರ ಸಂಕಷ್ಟಕ್ಕೆ ಸಿಲುಕಿದ್ದು, ಸ್ಪಂದನ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಾಟಕ್ಕೆ ಮನೆ ಬಿಟ್ಟು ಹಾನಗಲ್ಲ ಪಟ್ಟಣದ ಬೇರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ.ಸಾವಿತ್ರಮ್ಮ ವಡ್ಡರ ಅವರು ತಮ್ಮ ಸಂಬಂಧಿಯೊಬ್ಬರಿಗೆ ತಮ್ಮ ಹೆಸರಿನಲ್ಲಿ ಸಾಲ ತೆಗೆದು ಕೊಟ್ಟಿದ್ದರು. ಸಾಲದ ಕಂತು ಕಟ್ಟದ ಪರಿಣಾಮ ಮೈಕ್ರೋಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಹಣ ಕಟ್ಟುವಂತೆ ಪೀಡಿಸುತ್ತಿದ್ದರಂತೆ. ಇದರಿಂದ ಬೇಸತ್ತ ಸಾವಿತ್ರಮ್ಮ ಮನೆ ಬಿಟ್ಟು ಹಾನಗಲ್ಲಿನ ಸುಶೀಲಮ್ಮ ಪಾಟೀಲ್ ಮನೆಯಲ್ಲಿ ಆಶ್ರಯ ಪಡೆದಿದ್ದರು. ಮನೆ ಬಿಟ್ಟು ಬಂದು ಬೇರೆಯೊಂದು ಜಾಗದಲ್ಲಿರುವ ಮಾಹಿತಿ ತಿಳಿದು ಹಣ ಕಟ್ಟುವಂತೆ ಫೈನಾನ್ಸ್ ಸಿಬ್ಬಂದಿ ಮತ್ತೆ ಕಾಟ ಕೊಡಲು ಮುಂದಾಗಿದ್ದು, ಸ್ಥಳೀಯರಿಗೆ ಈ ವಿಷಯ ಗೊತ್ತಾಗಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.ಗಂಡನನ್ನು ಕಳೆದುಕೊಂಡಿರುವ ಸಾವಿತ್ರಮ್ಮ ಅವರು ತಮ್ಮ ಮಗಳೊಂದಿಗೆ ಬದುಕು ನಡೆಸುತ್ತಿದ್ದು, ಫೈನಾನ್ಸ್ ಸಿಬ್ಬಂದಿ ಕಾಟ ತಾಳಲಾರದೇ ಪಾಳು ಮನೆಯಲ್ಲಿ ಬಂದು ವಾಸ ಮಾಡುತ್ತಿದ್ದೇನೆ. ಸಾಲದ ವಿಚಾರಕ್ಕೆ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಪ್ಪಿಸಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮಾಂಗಲ್ಯ ಬದಲು ಅರಿಶಿಣ ಕೊಂಬು ಕಟ್ಟಿಕೊಂಡ ಮಹಿಳೆ:ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಸಿಎಂಗೆ ಮಾಂಗಲ್ಯ ಪೋಸ್ಟ್ ಮಾಡಿದ್ದ ರಾಣಿಬೆನ್ನೂರು ನಗರದ ಶೈಲಾ ಎಂಬುವರು ಕೊರಳಲ್ಲಿ ತಾಳಿ ಬದಲು ಅರಿಶಿಣ ಕೊಂಬು ಕಟ್ಟಿಕೊಂಡಿದ್ದಾರೆ.ಅಪಘಾತದಲ್ಲಿ ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಮಗನ ಬದುಕಿಸಿಕೊಳ್ಳಲು ಶೈಲಾ ಲಕ್ಷಗಟ್ಟಲೇ ಸಾಲ ಮಾಡಿದ್ದರು. ಮಾಡಿದ ಸಾಲದ ಬಡ್ಡಿ ತೀರಿಸಲು ಮಾಂಗಲ್ಯ ಮಾರಿದ್ದರು. ಸಾಲ ಕಟ್ಟಲು ಅವಕಾಶ ನೀಡುವಂತೆ ಕಣ್ಣೀರು ಸುರಿಸಿ ಅಂಗಲಾಚಿದರೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಅದಕ್ಕೆ ಕ್ಯಾರೇ ಎಂದಿಲ್ಲ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮನೆಯ ಯಜಮಾನರು ಮನೆ ಬಿಟ್ಟು ಹೋಗಿದ್ದಾರೆ. ಹೀಗಾಗಿ ಆಕೆ ಅಂಗವಿಕಲ ಪುತ್ರನ ಜತೆ ಜೀವನ ಸಾಗಿಸುತ್ತಿದ್ದು, ಮೈಕ್ರೋ ಫೈನಾನ್ಸ್ ದಬ್ಬಾಳಿಕೆಗೆ ಕಡಿವಾಣ ಹಾಕುವಂತೆ ಸಿಎಂಗೆ ಮನವಿ ಮಾಡಿದ್ದಾರೆ.