ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತಿ ನೌಕರರಿಗೆ ನೀಡಬೇಕಾದ ಸೌಲಭ್ಯವನ್ನು ನೀಡುವಲ್ಲಿ ವಿಳಂಬ ಮಾಡುತ್ತಿರುವ ಹಾಗೂ ಪ್ರಸ್ತುತ ಸಾರಿಗೆ ಸಂಸ್ಥೆಯ ನೌಕರರಿಗೆ ಕಿರುಕುಳ ನೀಡುತ್ತಿರುವ ಮೇಲಧಿಕಾರಿಗಳ ಕ್ರಮ ಖಂಡಿಸಿ ಡಿ.28ರಿಂದ ಜಿಲ್ಲಾಡಳಿತ ಭವನದ ಎದುರಿಗೆ ನಿವೃತ್ತ ನೌಕರರು ತಮ್ಮ ಕುಟುಂಬದವರ ಜೊತೆ ನಿರಂತರ ಧರಣಿ ಹಮ್ಮಿಕೊಳ್ಳಲಿದ್ದಾರೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಕುಲಕರ್ಣಿ ತಿಳಿಸಿದರು. ನವನಗರದ ಪತ್ರಿಕಾಭವ ನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರುವರಿ 2023ರಲ್ಲಿ ನಿವೃತ್ತರಾದ ನೌಕರರಿಗೆ ಇನ್ನೂ ಕೂಡ ನಿವೃತ್ತಿ ಉಪಧನ ಹಾಗೂ ರಜಾ ನಗದೀಕರಣದ ಸೌಲಭ್ಯವನ್ನು ಸಾರಿಗೆ ಇಲಾಖೆ ನೀಡಿಲ್ಲ ಎಂದು ದೂರಿದರು. ರಾಜ್ಯದ ಕಲ್ಯಾಣ ಕರ್ನಾಟಕ ಸಾರಿಗೆ, ಕೆಎಸ್‌ಆರ್‌ಟಿಸಿ ವಿಭಾಗಗಳಲ್ಲಿ ನಿವೃತ್ತರಾದ ನೌಕರರಿಗೆ ತಕ್ಷಣವೇ ನಿವೃತ್ತಿಯ ಸೌಲಭ್ಯವನ್ನು ನೀಡಲಾಗುತ್ತಿದೆ. ಆದರೆ, ಉತ್ತರ ಕರ್ನಾಟಕದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ನಿವೃತ್ತರಾದ ನೌಕರರಿಗೆ ಮಾತ್ರ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕೈಗಾರಿಕೆ ಒಪ್ಪಂದದಂತೆ ನೌಕರರಿಗೆ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ. ಆದರೆ, 2020ರಿಂದ 2023ರವರೆಗೆ ಬಂದ ನೌಕರರಿಗೆ ವೇತನ ಪರಿಷ್ಕರಣೆ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಈ ಸೌಲಭ್ಯ ನೀಡಲಾಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು, ಡಿಸಿಎಂ ಹಾಗೂ ಸರ್ಕಾರ ನಿಗಮದ ಮುಖ್ಯಸ್ಥರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ, ನಿವೃತ್ತ ನೌಕರರು ಬೀದಿಗೆ ಬಂದು ಪ್ರತಿಭಟನೆ ನಡೆಸಬೇಕಾದ ಪ್ರಸಂಗ ಬಂದಿದೆ ಎಂದು ಹೇಳಿದರು. 1998ರ ಮುಂಚೆ ನಾಲ್ಕು ನಿಗಮ ಒಂದೇ ಇದ್ದಾಗ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯೇ ಅಖಂಡ ಕರ್ನಾ ಟಕ ಸಾರಿಗೆ ಸಂಸ್ಥೆಯ ನೌಕರರು ಸಂಬಳ ನೀಡುವಷ್ಟು ಆದಾಯ ನೀಡುತ್ತಿತ್ತು. ಆದರೆ, ನಂತರದ ದಿನಗಳಲ್ಲಿ ನಾಲ್ಕು ನಿಗಮಗಳು ಪ್ರತ್ಯೇಕವಾದಾಗ ಉತ್ತರ ಕರ್ನಾಟಕದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಗ್ಗೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರ್ಲಕ್ಷ್ಯದಿಂದ ವಾಯವ್ಯ ಸಾರಿಗೆ ಲಾಭ ನೀಡುತ್ತಿದ್ದರೂ ನಷ್ಟದಲ್ಲಿದೆ ಎಂದು ತೋರಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಶಕ್ತಿ ಯೋಜನೆ ಜಾರಿಯಾದ ನಂತರ ನಾಲ್ಕು ನಿಗಮಗಳು ಶಕ್ತಿಯುತವಾಗಿ ಲಾಭದಲ್ಲಿದೆ ಎನ್ನುತ್ತಾರೆ. ಆದರೆ, ಶಕ್ತಿ ಯೋಜನೆಯಡಿ ಶೇ 60ರಷ್ಟು ಮಾತ್ರ ಹಣವನ್ನು ಸರ್ಕಾರ ತುಂಬುತ್ತಿದೆ. ಇನ್ನೂ ಶೇ 40ರಷ್ಟು ಹಣವನ್ನು ಬಾಕಿ ಉಳಿಸಲಾಗಿದೆ. ನೌಕರರ ಸಂಬಳದ ಭವಿಷ್ಯ ನಿಧಿಗಾಗಿ ಆಯುಕ್ತರ ಕಚೇರಿಗೆ ತುಂಬಬೇಕಾದ ₹700 ಕೋಟಿ ತುಂಬಿಲ್ಲ. ಸಾರಿಗೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡುವ ಪರಿಣಾಮ ನೌಕರರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ಜಿ.ಬಿ.ಮಠ, ಆರ್.ಆರ್.ಬೆಳಗಲಿ, ಎಂ.ಎಂ.ಗುಡಸಲಮನಿ, ಎಂ.ಡಿ.ರಾಜೂರ, ಎಸ್.ಕೆ.ಕೊಪ್ಪದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.