ಬೀದಿನಾಯಿ ಕಾಟ: ಹರಿಹರ ನಗರಸಭೆ ಕಚೇರಿಗೆ ಬೀಗ ಜಡಿದ ಸದಸ್ಯರು!

| Published : Aug 31 2024, 01:35 AM IST

ಸಾರಾಂಶ

ಹರಿಹರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ಕ್ರಮಕ್ಕೆ ಆಗ್ರಹಿಸಿ ನಗರಸಭಾ ಸದಸ್ಯರೇ ನಗರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆಯಿತು.

- ಜನರ ಮೇಲೆ ದಾಳಿಗೆ ಮುನ್ನ ಎಚ್ಚೆತ್ತುಕೊಳ್ಳಲು ಸದಸ್ಯರು ಒತ್ತಾಯ- - - ಕನ್ನಡಪ್ರಭ ವಾರ್ತೆ, ಹರಿಹರ

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ಕ್ರಮಕ್ಕೆ ಆಗ್ರಹಿಸಿ ನಗರಸಭಾ ಸದಸ್ಯರೇ ನಗರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆಯಿತು.

ನಗರಸಭಾ ಸದಸ್ಯ ದಾದಾ ಖಲಂದರ್ ಮಾತನಾಡಿ, ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ನಿಯಂತ್ರಣಕ್ಕೆ ಕೋರಿ ಹಲವಾರು ಬಾರಿ ಮನವಿ ಮಾಡಿದರೂ ಅಧಿಕಾರಿಗಳಿಂದ ಯಾವುದೇ ಪ್ರಯೋಜನ ಸಿಕ್ಕಿಲ್ಲ. ಬೇರೆ ದಾರಿ ಕಾಣದೇ ನಗರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಎಲ್ಲೆಂದರಲ್ಲಿ ಬೀದಿನಾಯಿಗಳು ಗೋಚರಿಸುತ್ತಿವೆ. ನಾಯಿಗಳು ಹಂದಿಯನ್ನು ಹಿಡಿದು ಎಳೆದಾಡುತ್ತಿರುವ ದೃಶ್ಯ ನೋಡಲು ಭಯಾನಕವಾಗಿದೆ. ರಕ್ತದ ರುಚಿ ನೋಡಿರುವ ಈ ಬೀದಿ ನಾಯಿಗಳು ನಾಳೆ ಮಕ್ಕಳ ಮೇಲೆ ದಾಳಿ ಮಾಡಿ ಯಾವುದಾದರೂ ಅನಾಹುತ ಆಗಿ ಜೀವ ಹಾನಿಯಾದರೆ ಯಾರು ಹೊಣೆ? ಎಂದು ಆತಂಕದಿಂದ ಪ್ರಶ್ನಿಸಿದರು.

ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‍ಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀತಿದೆ. ಜನರ ಕಾಳಜಿ ದೃಷ್ಟಿಯಿಂದ ಹಲವಾರು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿ, ನಾಯಿಗಳ ನಿಯಂತ್ರಣಕ್ಕೆ ಒತ್ತಾಯಿಸಿದ್ದೇನೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ನಗರಸಭೆ ಸದಸ್ಯನ ಮನವಿ, ಸೂಚನೆಗೇ ಈ ಗತಿಯಾದರೆ ಇನ್ನು ಜನಸಾಮಾನ್ಯರ ಆಗ್ರಹಗಳಿಗೆ ಅಧಿಕಾರಿಗಳು ಸ್ಪಂದಿಸುವರೇ ಬೇಸರ, ಆಕ್ರೋಶ ವ್ಯಕ್ತ ಪಡಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಸ್ಥಳ:ಕ್ಕೆ ಆಗಮಿಸಿದರು. ನಗರಸಭಾ ಸದಸ್ಯರು ಈ ಸಂದರ್ಭ ದಾದಾ ಖಲಂದರ್‌ ಮಾತಿಗೆ ದನಿಗೂಡಿಸಿದರು. ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಬೀದಿ ನಾಯಿಗಳನ್ನು ಶೀಘ್ರ ಹಿಡಿಸಬೇಕು. ನಗರದ ತುಂಬೆಲ್ಲ ಹಂದಿಗಳ ಹಾವಳಿಯೂ ಜಾಸ್ತಿಯಾಗಿದೆ. ಅವುಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಬೀದಿನಾಯಿ ಹಿಡಿಯುವವರ ಜೊತೆ ಮಾತನಾಡಲಾಗಿದೆ. ಕೆಲವೇ ದಿನಗಳಲ್ಲಿ ಅವರು ನಗರಕ್ಕೆ ಆಗಮಿಸಿ ನಾಯಿಗಳನ್ನು ಹಿಡಿಯುವ ಕಾರ್ಯ ಆರಂಭಿಸಲಿದ್ದಾರೆ ಎಂದು ಭರವಸೆ ನೀಡಿದರು. ಬಳಿಕ ಕಚೇರಿಯ ಬೀಗ ತೆಗೆದು, ಕರ್ತವ್ಯಕ್ಕೆ ಅವಕಾಶ ಕಲ್ಪಿಸುವ ಮೂಲಕ ಪ್ರತಿಭಟನೆ ಅಂತ್ಯಗೊಳಿಸಲಾಯಿತು.

ನಗರಸಭಾ ಸದಸ್ಯ ಆರ್.ಸಿ ಜಾವಿದ್, ಮುಜಾಮಿಲ್, ಕಾಂಗ್ರೆಸ್ ಮುಖಂಡ ದಾದಾಪೀರ್ ಭಾನುವಳ್ಳಿ, ರೆಹಮಾನ್, ಆರೋಗ್ಯ ನೀರಿಕ್ಷಕ ಸಂತೋಷ್ ನಾಯ್ಕ್ ಸೇರಿದಂತೆ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

- - - -30ಎಚ್‍ಆರ್‍ಆರ್2:

ಹರಿಹರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದೆ ಎಂದು ನಗರಸಭೆ ಕಚೇರಿಗೆ ಶುಕ್ರವಾರ ಬೀಗ ಹಾಕಿ ಪ್ರತಿಭಟನೆ ವೇಳೆ ನಗರಸಭಾ ಸದಸ್ಯರಾದ ದಾದಾ ಖಲಾಂದರ್, ಆರ್.ಸಿ.ಜಾವೀದ್, ಮುಜಾಮಿಲ್ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಜತೆ ವಾಗ್ವಾದ ನಡೆಸಿದರು.