ಸಾರಾಂಶ
ಕುಮಟಾ: ತಾಲೂಕಿನಲ್ಲಿ ಭಾನುವಾರ ತಡರಾತ್ರಿ ಸಿಡಿಲು-ಗುಡುಗಿನೊಂದಿಗೆ ಅರ್ಧ ಗಂಟೆಗೂ ಹೆಚ್ಚುಕಾಲ ಸುರಿದ ಜೋರಾದ ಮಳೆಗೆ ಕೊಯ್ಲಿನ ಹಂತದಲ್ಲಿದ್ದ ಬತ್ತದ ಗದ್ದೆಗಳು ಒದ್ದೆಮುದ್ದೆಯಾಗಿದ್ದು ರೈತರನ್ನು ಆತಂಕಕ್ಕೀಡುಮಾಡಿದೆ.
ನವರಾತ್ರಿಯ ಹಬ್ಬದ ಬೆನ್ನಲ್ಲೇ ತಾಲೂಕಿನ ಹಲವು ಕಡೆಗಳಲ್ಲಿ ಗದ್ದೆ ಕೊಯ್ಲು ಆರಂಭವಾಗಿದೆ. ಎತ್ತರ ಪ್ರದೇಶದಲ್ಲಿರುವ ಬಹುತೇಕ ಎಲ್ಲ ಗದ್ದೆಗಳಲ್ಲಿ ಬತ್ತದ ಕೊಯ್ಲು ನಡೆಸಲಾಗಿದೆ. ತಗ್ಗು ಪ್ರದೇಶದ ಗದ್ದೆಗಳಲ್ಲಿ ಇನ್ನೂ ಒಂದೆರಡು ವಾರದ ತೆನೆಗಳ ಬೆಳವಣಿಗೆಯ ಬಳಿಕ ಅಲ್ಲಿಯೂ ಕೊಯ್ಲು ನಡೆಯುತ್ತದೆ. ಕೊಯ್ಲು ಮಾಡಲಾದ ಗದ್ದೆಗಳಲ್ಲಿ ಬತ್ತದ ತೆನೆಗಳನ್ನು ಹುಲ್ಲುಸಮೇತವಾಗಿ ಒಂದೆರಡು ದಿನದ ಮಟ್ಟಿಗೆ ಸಂಪೂರ್ಣ ಒಣಗಲೆಂದು ಹರವಲಾಗುತ್ತದೆ. ಕೊಯ್ಲು ಎಲ್ಲೆಡೆ ಮುಗಿಯುತ್ತಿದ್ದಂತೆ ಗದ್ದೆಯಲ್ಲಿ ಹರಡಿಕೊಂಡು ಒಂದೆರಡು ದಿನ ಬಿಸಿಲಿಗೆ ಒಣಗಿದ ತೆನೆಗಳನ್ನು ಹೊತ್ತೊಯ್ದು ಸೂಕ್ತ ಜಾಗದಲ್ಲಿ ಬಣವೆ ಹಾಕುವುದು ರೈತರ ಸಾಮಾನ್ಯ ಪದ್ಧತಿಯಾಗಿದೆ.ಆದರೆ ಈ ಬಾರಿ ಕೊಯ್ಲು ಆರಂಭವಾದ ಬೆನ್ನಲ್ಲೇ ಮಳೆ ಸುರಿದು ಗದ್ದೆಗಳಲ್ಲಿ ನೀರು ತುಂಬಿ ಕೋಡಿಯಾಗಿ ಹರಿದುಹೋಗಿದೆ. ಪಟ್ಟಣದ ವಕ್ಕನಳ್ಳಿ, ಉಪ್ಪಿನಗಣಪತಿ ಮುಂತಾದ ಕಡೆಗಳಲ್ಲಿ ರೈತರು ರಾತ್ರೋರಾತ್ರಿ ಮಳೆ ಸುರಿಯುತ್ತಿರುವಾಗಲೇ ಗದ್ದೆಯಲ್ಲಿ ಕಾಲುವೆ ಕಡಿದು ತಾತ್ಕಾಲಿಕವಾಗಿ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದ್ದರಿಂದ ಮಳೆ ನೀರಲ್ಲಿ ತೆನೆಗಳು ತೇಲಿಹೋಗುವುದು ತಪ್ಪಿದೆ. ಆದರೂ ಗದ್ದೆಗಳಲ್ಲಿ ನೀರು ನಿಂತಿದ್ದು ಬತ್ತದ ತೆನೆಗಳು ಒದ್ದೆಯಾಗಿ ನೀರಿನಲ್ಲಿ ನೆನೆಹಾಕಿದಂತಾಗಿದೆ. ಸದ್ಯಕ್ಕೆ ಬಿಸಿಲು ಬಿದ್ದರೆ ತೊಂದರೆಯಿಲ್ಲ, ಹೇಗೋ ಸುಧಾರಿಸಬಹುದು. ಆದರೆ ಇದೇ ರೀತಿ ಮತ್ತೆ ಮಳೆ ಸುರಿದರೆ ದೇವರೇ ಗತಿ. ಬತ್ತಕ್ಕೆ ತೀವ್ರ ಹಾನಿಯಾಗುವುದನ್ನು ತಪ್ಪಿಸಲಾಗದು. ಕಟಾವಿನ ಹಂತದಲ್ಲಿ ಬತ್ತಕ್ಕೆ ಮಳೆ ನೀರು ಸಿಕ್ಕಿರುವುದು ಒಳ್ಳೆಯದಲ್ಲ. ಇದರಿಂದಾಗಿ ಗದ್ದೆ ಕೊಯ್ಲನ್ನು ಮುಂದುವರಿಸುವುದಕ್ಕೂ ಅನುಮಾನ ಪಡುವಂತಾಗಿದೆ. ಕನಿಷ್ಠ ಇನ್ನೊಂದು ವಾರ ಮಳೆ ಕಾಡದಿದ್ದರೆ, ಬತ್ತವನ್ನು ಸುರಕ್ಷಿತವಾಗಿ ಎಲ್ಲೆಡೆ ಬಣವೆ ಹಾಕಿಕೊಳ್ಳಬಹುದು ಎಂದು ಬತ್ತ ಬೆಳೆಗಾರರು ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))