ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಹಸೆ ಚಿತ್ತಾರ ಕಲಾವಿದೆಗೆ ಆಹ್ವಾನ

| Published : Aug 09 2025, 12:02 AM IST

ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಹಸೆ ಚಿತ್ತಾರ ಕಲಾವಿದೆಗೆ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಯ ಜತೆಗೆ ಈ ಕಲೆಯಲ್ಲೂ ಸಾಧನೆ ಮಾಡುತ್ತ ಬಂದರು.

ಸಿದ್ದಾಪುರ: ತಾಲೂಕಿನ ಹಸವಂತೆಯ ಪ್ರಸಿದ್ಧ ಹಸೆ ಚಿತ್ತಾರ ಕಲಾವಿದೆ ಸರಸ್ವತಿ ಈಶ್ವರ ನಾಯ್ಕ ಅವರಿಗೆ ಈ ವರ್ಷದ ದೆಹಲಿಯಲ್ಲಿನ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿದೆ.

ಬಾಲ್ಯದಿಂದಲೂ ಸಾಂಪ್ರದಾಯಿಕ ಹಸೆ ಚಿತ್ತಾರ ಕಲೆಯನ್ನು ರೂಢಿಸಿಕೊಂಡಿದ್ದ ಸರಸ್ವತಿ ನಾಯ್ಕ ಪ್ರಸಿದ್ಧ ಹಸೆ ಚಿತ್ತಾರ ಕಲಾವಿದ ಈಶ್ವರ ನಾಯ್ಕ ಅವರನ್ನು ವಿವಾಹವಾದ ನಂತರ ಹಸೆ ಚಿತ್ತಾರದ ಕುರಿತು ಹೆಚ್ಚಿನ ತರಬೇತಿ ಪಡೆದುಕೊಂಡಿದ್ದರು. ಕೃಷಿಯ ಜತೆಗೆ ಈ ಕಲೆಯಲ್ಲೂ ಸಾಧನೆ ಮಾಡುತ್ತ ಬಂದರು. ಕಳೆದ ೨೨ ವರ್ಷಗಳಿಂದ ಹಸೆ ಚಿತ್ತಾರದಲ್ಲಿ ಪರಿಣಿತಿ ಪಡೆದಿರುವ ಸರಸ್ವತಿ ನಾಯ್ಕ ಎನ್.ಆರ್.ಎಂ.ಎಲ್, ಸಂಜೀವಿನಿ ನಡೆಸುವ ಸರಸ್ ಮೇಳಗಳು ಸೇರಿದಂತೆ ರಾಜ್ಯದ, ದೇಶದ ಹಲವೆಡೆ ಹಸೆ ಚಿತ್ತಾರ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ೨೦೦೭ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೂಡ ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಗತಿ ಸ್ತ್ರೀಶಕ್ತಿ ಸಂಘದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿರುವ ಸರಸ್ವತಿ ನಾಯ್ಕ ಅವರನ್ನು ಈ ಬಾರಿ ಕೇಂದ್ರ ಸರ್ಕಾರ ದೆಹಲಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದೆ. ಮಾತ್ರವಲ್ಲ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಪಾಲ್ಗೊಳ್ಳುವ ಅವಕಾಶವನ್ನು ಪಡೆದಿರುವ ರಾಜ್ಯದ ಏಕೈಕ ಕಲಾವಿದೆ ಇವರಾಗಿದ್ದಾರೆ.

ಸರಸ್ವತಿ ನಾಯ್ಕ ಅವರಿಗೆ ದೊರೆತ ಈ ಅವಕಾಶಕ್ಕಾಗಿ ತಾಲೂಕಿನ ಜನತೆ ಸಂತಸ ವ್ಯಕ್ತಪಡಿಸಿದೆ.