ಸಾರಾಂಶ
ಕನ್ನಡಪ್ರಭ ವಾರ್ತೆ, ಹಾಸನ
ಮೊಸಳೆ ಹೊಸಳ್ಳಿಯಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ಸಂಭವಿಸಿದ ಭೀಕರ ಅಪಘಾತದ ಸ್ಥಳಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ, ವ್ಹೀಲ್ ಚೇರಿನಲ್ಲೇ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ನಂತರ, ಸಂತ್ರಸ್ತರ ಪ್ರತಿ ಮನೆಗಳಿಗೆ ಭೇಟಿ ನೀಡಿ, ಅವರಿಗೆ ಸಾಂತ್ವನ ಹೇಳಿದರು.ಇದೇ ವೇಳೆ, ಪಕ್ಷದ ವತಿಯಿಂದ ಮೃತ ಕುಟುಂಬಕ್ಕೆ ತಲಾ 1 ಲಕ್ಷ ರೂ. ಪರಿಹಾರದ ಘೋಷಣೆ ಮಾಡಿದರು. ಜೊತೆಗೆ, ಮೃತ ಕುಟುಂಬವೊಂದರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊರುವುದಾಗಿ ಭರವಸೆ ನೀಡಿದರು. ಗಂಭೀರವಾಗಿ ಗಾಯಗೊಂಡವರಿಗೆ 25 ಸಾವಿರ ರು., ಸಣ್ಣ ಪುಟ್ಟ ಗಾಯಗಳಾದವರಿಗೆ 20 ಹಾಗೂ 15 ಸಾವಿರ ರು.ಗಳ ನೆರವು ನೀಡಲಾಗುವುದು. ಈ ಮೊತ್ತವನ್ನು ಜಿಲ್ಲಾಡಳಿತವೇ ವಿತರಿಸುವುದಾದರೆ ಪಕ್ಷದಿಂದ 10 ಲಕ್ಷ ರು.ಗಳನ್ನು ಅವರಿಗೇ ನೀಡುತ್ತೇವೆ. ಹಾಗೆಯೇ ಮೃತರು ಹಾಗೂ ಗಾಯಾಳುಗಳು ನೆರವು ಬೇಕಿದ್ದಲ್ಲಿ ತಮ್ಮ ಪಕ್ಷದ ಶಾಸಕರನ್ನು ಸಂಪರ್ಕಿಸಬಹುದು ಎಂದು ಸಲಹೆ ನೀಡಿದರು.
ಅನಾಹುತದಲ್ಲಿ ಕೆಲವರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಕೆಲವರು ತಂದೆಯನ್ನು ಕಳೆದುಕೊಂಡಿದ್ದಾರೆ. ಇವರಲ್ಲಿ ಕೆಲವರು ಸಾಕಷ್ಟು ಬಡತನದಲ್ಲಿದ್ದಾರೆ. ಹಾಗಾಗಿ, ರಾಜ್ಯ, ಕೇಂದ್ರ ಸರ್ಕಾರದಿಂದ ಸಿಗುವ ಪರಿಹಾರದ ಹಣವನ್ನು ದುಂದುವೆಚ್ಚ ಮಾಡದೆ ಜಾಗ್ರತೆಯಿಂದ ಬಳಸಿಕೊಳ್ಳುವಂತೆ ಮೃತರ ಕುಟುಂಬಸ್ಥರಿಗೆ ಕಿವಿಮಾತು ಹೇಳಿದರು.(ಬಾಕ್ಸ್):ಸಿದ್ದು, ನಾನು ಒಟ್ಟಿಗೆ ಕೆಲಸ ಮಾಡಿದ್ದೇವೆ:
ಬಳಿಕ, ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೆ ಕೆಲಸ ಮಾಡಿದ್ದೇವೆ. ಇಂದು ನಾವು ಬೇರೆ, ಬೇರೆ ಪಕ್ಷಗಳಲ್ಲಿ ಇದ್ದರೂ, ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಒಗ್ಗಟ್ಟಿನಿಂದ ನಡೆಯುವುದು ಅವಶ್ಯಕ ಎಂದು ಸ್ಪಷ್ಟಪಡಿಸಿದರು.93ನೇ ವಯಸ್ಸಿನಲ್ಲಿರುವ ನಾನು ರಾಜಕೀಯ ಲಾಭಕ್ಕಾಗಿ ಮಾತನಾಡುವುದಿಲ್ಲ. 64 ವರ್ಷಗಳ ರಾಜಕೀಯ ಜೀವನದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಶಕ್ತಿಮೀರಿ ಹೋರಾಟ ಮಾಡಿದ್ದೇನೆ. ಜನರ ಒಳಿತಿನ ವಿಷಯದಲ್ಲಿ ರಾಜಕೀಯ ಮಾಡುವುದು ತರವಲ್ಲ ಎಂದು ಹೇಳಿದರು.
ಹೆದ್ದಾರಿ ಯೋಜನೆಗೆ ಕೇಂದ್ರದ ನೆರವು ಅಗತ್ಯ:ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ಮುಗಿದಿರುವುದನ್ನು ಉಲ್ಲೇಖಿಸಿ, ಉಳಿದ ಕಾಮಗಾರಿಗಾಗಿ ಅಗತ್ಯವಿರುವ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಹೈದರಾಬಾದ್-ಬೆಂಗಳೂರು ರಸ್ತೆಯೂ ಪೂರ್ತಿಯಾಗಬೇಕು. ಈ ಮೂರು ಪ್ರಮುಖ ರಸ್ತೆಗಳು (ಚೆನ್ನೈ-ಬೆಂಗಳೂರು, ಹೈದರಾಬಾದ್-ಬೆಂಗಳೂರು, ಶಿರಾಡಿಘಾಟ್) ಸಂಪೂರ್ಣವಾದರೆ ರಾಜ್ಯದ ಅಭಿವೃದ್ಧಿಗೆ ದೊಡ್ಡ ದಾರಿ ತೆರೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. ಆಸ್ಕರ್ ಫರ್ನಾಂಡಿಸ್ ಅವರ ಕಾಲದಲ್ಲಿಯೇ ಶಿರಾಡಿಘಾಟ್ ನಲ್ಲಿ 10 ಕಿಲೋಮೀಟರ್ ಉದ್ದದ ಸುರಂಗ ನಿರ್ಮಾಣಕ್ಕೆ ಮನವಿ ಮಾಡಿದ್ದೆ. ಅದು ಇನ್ನೂ ಆಗಿಲ್ಲ. ಈಗ ಬೆಟ್ಟಗಳು ನಿರಂತರವಾಗಿ ಕುಸಿಯುತ್ತಿವೆ. ಇದಕ್ಕೆ ಶಾಶ್ವತ ಪರಿಹಾರವೆಂದರೆ ಸುರಂಗ ನಿರ್ಮಾಣ. ಸುರಂಗ ನಿರ್ಮಾಣ ಮಾಡಿದ ನಂತರ ಮರಗಳನ್ನು ನೆಡಿಸಿ ಅರಣ್ಯವನ್ನೂ ಬೆಳೆಸಬಹುದು. ಆದಷ್ಟು ಬೇಗ ಈ ಕೆಲಸ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.ವ್ಹೀಲ್‌ಚೇರ್‌ನಲ್ಲಿಯೇ ಸಂಸತ್ತಿಗೆ ಹೋಗುವ ಶಕ್ತಿ ನನಗಿದೆ:ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾತನಾಡಿ, ಇನ್ನೂ 11 ತಿಂಗಳು ರಾಜ್ಯಸಭಾ ಅವಧಿ ಉಳಿದಿದೆ. ಆದರೆ, ಅವಧಿ ಮುಗಿದ ಮೇಲೂ ನಾನು ಹೋರಾಟ ನಿಲ್ಲಿಸುವುದಿಲ್ಲ. ಅಗತ್ಯ ಬಿದ್ದರೆ ವೀಲ್‌ಚೇರ್‌ನಲ್ಲಿಯೇ ಸಂಸತ್ತಿಗೆ ಹೋಗುವ ಶಕ್ತಿ ನನ್ನಲ್ಲಿದೆ. ನನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ಆದರೂ ರಾಜ್ಯದ ಹಿತಕ್ಕಾಗಿ ಹೋರಾಡುವ ಮನೋಬಲ ನನಗಿದೆ ಎಂದರು.ಮೋದಿ ಬಗ್ಗೆ ಮೆಚ್ಚುಗೆ:ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ ದೇವೇಗೌಡ, ಮೋದಿಯವರು ತಮ್ಮ ಅವಧಿಯನ್ನು ಸಂಪೂರ್ಣವಾಗಿ ಮುಗಿಸುತ್ತಾರೆ. ಈ ಬಗ್ಗೆ ಸಂದೇಹ ಇಲ್ಲ. ನನ್ನ, ಅವರ ಸಂಬಂಧ ಮೈತ್ರಿ ಬಳಿಕ ಆರಂಭವಾದುದಲ್ಲ. ಕಳೆದ 10 ವರ್ಷಗಳಿಂದ ನಾವು ಪರಸ್ಪರ ಗೌರವದಿಂದ ಇದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ಮೋದಿ ಅವರು ಸದಾ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂದರು.ಲಾರಿ ಚಾಲಕ ಬೆಂಗಳೂರು ಆಸ್ಪತ್ರೆಗೆ ಸ್ಥಳಾಂತರ:
ಶುಕ್ರವಾರ ರಾತ್ರಿ ಹಾಸನದಲ್ಲಿ ಗಣೇಶೋತ್ಸವ ಮೆರವಣಿಗೆ ಮೇಲೆ ಲಾರಿ ಹತ್ತಿಸಿ, 10 ಜನರ ಸಾವಿಗೆ ಕಾರಣನಾದ ಲಾರಿ ಚಾಲಕನನ್ನು ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಅಪಘಾತ ನಡೆದ ತಕ್ಷಣವೇ ಚಾಲಕನನ್ನು ಪೊಲೀಸರು ಬಂಧಿಸಿದ್ದರು. ಅಪಘಾತದಲ್ಲಿ ಚಾಲಕನಿಗೆ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಪೆಟ್ಟಾಗಿತ್ತು. ಹೀಗಾಗಿ, ನಾಗಮಂಗಲದ ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ಮಧ್ಯೆ, ಶನಿವಾರ ರಾತ್ರಿಯೇ ಆತನನ್ನು ಇಲ್ಲಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಬಿಗಿ ಭದ್ರತೆ ನಡುವೆ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಈ ಮಧ್ಯೆ, ಸೋಮವಾರ ಆತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದೇ ವೇಳೆ, ಅಪಘಾತದ ವೇಳೆ ಚಾಲಕ ಮದ್ಯಪಾನ ಮಾಡಿ ಟ್ರಕ್ ಚಲಾಯಿಸಿದ್ದನೇ ಎಂಬುದಕ್ಕೆ ರಕ್ತ ಮಾದರಿ ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಲಾಗಿತ್ತು. ರಕ್ತ ಪರೀಕ್ಷೆಯ ವರದಿ ಕೂಡ ಸೋಮವಾರ ಬರುವ ಸಾಧ್ಯತೆ ಇದೆ.ಹಾಸನ ಸಂತ್ರಸ್ತರಿಗೆ ಪರಿಹಾರಕ್ಕೆ ಸರ್ಕಾರದಲ್ಲಿ ಹಣವಿಲ್ಲ: ಶೋಭಾ:ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜನ ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಮಾತ್ರ ಓಲೈಕೆ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.
ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಬಜೆಟ್‌ನಲ್ಲಿ ಒಂದಲ್ಲ ಒಂದು ಯೋಜನೆ ಮತ್ತು ಹಣವನ್ನು ಅಲ್ಪಸಂಖ್ಯಾತರಿಗೆ ಘೋಷಣೆ ಮಾಡುತ್ತಾರೆ. ಅಲ್ಪಸಂಖ್ಯಾತರಿಗಾಗಿ ಯೋಜನೆಗಳು ಮತ್ತು ಪರಿಹಾರ ಇರುತ್ತದೆ. ಕೇರಳದಲ್ಲಿ ಆನೆ ತುಳಿತದವರಿಗೆ ಪರಿಹಾರ ಇರುತ್ತದೆ. ಕೇರಳದ ವೈನಾಡಿನಲ್ಲಿ ಪ್ರಿಯಾಂಕ ಗಾಂಧಿ ಕ್ಷೇತ್ರಕ್ಕೆ ₹10 ಕೋಟಿ ಕೊಡುತ್ತಾರೆ. ಹಾಸನದ ಮೊಸಳೆ ಹೊಸಹಳ್ಳಿಯ ಗಣಪತಿ ಮೆರವಣಿಗೆಯಲ್ಲಿ ಸಾಯುವವರಿಗೆ ಗಾಯ ಗೊಳ್ಳುವರಿಗೆ ಹಣ ಕೊಡಲು ಇವರ ಬಳಿ ಇರಲ್ಲ ಎಂದು ಕುಟುಕಿದರು.ಆರ್‌ಸಿಬಿಯವರು ಕಪ್ ಗೆದ್ದರೆ ಅದರಿಂದ ಪ್ರಚಾರ ಪಡೆದುಕೊಳ್ಳಲು ವಿಧಾನಸೌಧ ಮೆಟ್ಟಿಲ ಮೇಲೆ ಸಿಎಂ, ಡಿಸಿಎಂ ಪೈಪೋಟಿ ಮೇಲೆ ಕಾರ್ಯಕ್ರಮ ಮಾಡಿದರು. ಕೊನೆಗೆ ಇವರ ಸಂಭ್ರಮಾಚರಣೆಗೆ 11 ಜನ ಬಲಿಯಾದರು. ಕಳೆದ ವರ್ಷ ನಾಗಮಂಗಲದಲ್ಲಿ ಅರೆಸ್ಟ್ ಮಾಡಿ ನಂತರ ಬಿಡುಗಡೆ ಮಾಡಿದರು. ಮದ್ದೂರಿನಲ್ಲಿ ನಾವೇನು ಮಾಡಿದರೂ ನಡಿಯುತ್ತದೆ ಎಂದು ಗಲಾಟೆ ಮಾಡಿದ್ದಾರೆ. ಎಲ್ಲಿ ಪೊಲೀಸರು ಅನುಮತಿ ನೀಡುತ್ತಾರೋ ಅಲ್ಲೇ ಮೆರವಣಿಗೆ ನಡೆಯುತ್ತದೆ. ಪೊಲೀಸರಿಗೆ ನಿಮ್ಮ ಗುಪ್ತಚರ ಇಲಾಖೆ ಅವರಿಗೆ ಕಲ್ಲುತೂರಾಟ ನಡೆಸುವುದು ಗೊತ್ತಾಗುವುದಿಲ್ಲವೇ? ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಹಿಂದೂ ವಿರೋಧಿ ಘಟನೆಗಳು ನಡೆಯುತ್ತಿವೆ. ಇದಕ್ಕೆಲ್ಲ ನೇರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಹೊಣೆ ಎಂದು ಹರಿಹಾಯ್ದರು.