ಹಾವೇರಿ: ಹಿಂದುಳಿದ ವರ್ಗದವರನ್ನು ಜಾಗೃತಿಗೊಳಿಸಿದ ಮಹಾನ್ ನಾಯಕ ಎಲ್.ಜಿ. ಹಾವನೂರ ಅವರು. ಹಾವನೂರ ಆಯೋಗವನ್ನು ಮತ್ತೆ ಅನುಷ್ಠಾನಕ್ಕೆ ತರುವುದು ಕೂಡ ಅವಶ್ಯಕತೆ ಇದೆ. ಅವರ ಹೆಸರಿನಲ್ಲಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆಯನ್ನು ಮಾಡಬೇಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟರು.ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಭಾನುವಾರ ನಗರದ ಪಿಡಬ್ಲ್ಯೂಡಿ ಕ್ವಾಟ್ರಸ್ ಬಳಿ ಇರುವ ವಾಲ್ಮೀಕಿ ವೃತ್ತದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಮಹರ್ಷಿ ಶ್ರೀ ವಾಲ್ಮೀಕಿ ಅವರ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಎಲ್.ಜಿ. ಹಾವನೂರ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಸ್ಥಳೀಯ ನಾಯಕರೂ ಮಾಡಲಿದ್ದಾರೆ ಎಂದರು. ಬಿಜೆಪಿ ಸರ್ಕಾರ ಇದ್ದಾಗ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚು ಮಾಡಿತು. ಆದರೆ ಅವರಿಗೆ ಅಭಿನಂದನೆ. ಆದರೆ ಈಗ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ನೀಡಿರುವುದು ನಮ್ಮ ಸರ್ಕಾರವಲ್ಲ. ನ್ಯಾಯಲಯವು ಇತ್ಯರ್ಥ ಮಾಡಬೇಕು. ನ್ಯಾ. ರವಿವರ್ಮಕುಮಾರ ಅವರನ್ನು ನೇಮಿಸಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಎನ್ನುವುದಕ್ಕಿಂತಲೂ ಸಮಾಜದ ಪರವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಬಾರದು ಎನ್ನುವ ನಿಯಮ ಇದೆ. ಹೀಗಾಗಿ ಸ್ಟೇ ಆಗಿದೆ. ಎಸ್ಟಿಯವರಿಗೆ ಶೆಡ್ಯೂಲ್ ಕಾಸ್ಟ್ 9ರ ಅಡಿಯಲ್ಲಿ ಸೇರ್ಪಡೆ ಮಾಡಿ ಮೀಸಲಾತಿ ಪ್ರಮಾಣ ಕೊಡಬೇಕೆಂದು ಒತ್ತಾಯಿಸಿದರು.ಸುರಪುರದ ಮಾಜಿ ಶಾಸಕ ರಾಜೂಗೌಡ ಮಾತನಾಡಿ, ಸಮಾಜಕ್ಕೆ ಒಳ್ಳೆಯ ಕೆಲಸವಾಗಬೇಕಾದರೆ ಯಾವುದೇ ರಾಜಕೀಯ ಪಕ್ಷದ ರಾಜಕಾರಣಿಗಳಿಂದ ಸಾಧ್ಯವಿಲ್ಲ, ಅದು ಆ ಸಮುದಾಯದ ಸ್ವಾಮೀಜಿಗಳಿಂದ ಮಾತ್ರ ಸಾಧ್ಯ. ಮೀಸಲಾತಿ ಹೋರಾಟದ ಕಿಚ್ಚು ನಿಮ್ಮ ನಿಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು. ಸಮಾಜದ ಮಕ್ಕಳು ವಿದ್ಯಾವಂತರಾಗಿ, ಉದ್ಯೋಗವಂತರಾಗಿ, ನೌಕರಿ ಪಡೆದಾಗ ಮಾತ್ರ ಸಮಾಜ ಉದ್ದಾರ ಆಗಲಿಕ್ಕೆ ಸಾಧ್ಯ ಇದೆ. ವಾಲ್ಮೀಕಿ ಸಮಾಜದವರು ಯಾರ ಪರ ಒಲವು ತೋರಿಸುತ್ತಾರೋ ಅದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು.ಈಗಿನ ಸಿಎಂ ಯಾವ ಸಮುದಾಯದವರು ಇದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಅವರು ನಮ್ಮ ಸಮಾಜವನ್ನು ನೋಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ಮುಂದಿನ ತಿಂಗಳು ನಿಮ್ಮ ಮಾತನ್ನು ಯಾರು ಕೇಳುತ್ತಾರೋ ಅವರು ರಾಜ್ಯದ ಮುಖ್ಯಮಂತ್ರಿಗಳು ಆಗಬೇಕು. ಮೀಸಲಾತಿ ಪಡೆಯಲು ಸೋಲುವುದಕ್ಕೂ ಸಿದ್ಧ, ಹೋರಾಟಕ್ಕೂ ಸಿದ್ಧ. ಶೆಡ್ಯೂಲ್ 9 ಎಂದು ಎಲ್ಲಿಯೂ ಹೇಳಬೇಡಿ ಎಂದು ಮನವಿ ಮಾಡಿದರು. ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಂಡವರಲ್ಲಿ ನಾನು ಒಬ್ಬರು. ಅಧಿಕಾರ ಇದ್ದಾಗಲೂ ಸರಿ, ಇಲ್ಲದಿದ್ದಾಗಲೂ ಸರಿ ಧೈರ್ಯದಿಂದ ಹೇಳುವ ಕೆಲಸ ಮಾಡಿದ್ದೇವೆ. ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತೀರಿ ಎಂದು ಭಾವಿಸಿದ್ದೇವೆ. ನೀವೆ ಸುಮ್ಮನೆ ಕೂತರೆ ಸಮಾಜ ಅಭಿವೃದ್ಧಿ ಆಗುವುದು ಹೇಗೆ. ಹಾಗಾಗಿ ನೀವು ಕೂಡ ಮುಖ್ಯಮಂತ್ರಿ ಆಗಬೇಕು. ಸಮಾಜದ ಅಭಿವೃದ್ಧಿ ಮಾಡಬೇಕು ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.ಸಮಾರಂಭದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ, ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು.ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಶಾಸಕ ಯಾಸೀರಖಾನ್ ಪಠಾಣ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿö, ಶ್ರೀಧರ ದೊಡ್ಡಮನಿ, ಚಂದ್ರಶೇಖರ ಸೇರಿದಂತೆ ಸಮಾಜದ ಅನೇಕ ಮುಖಂಡರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಹಿಂದುಳಿದ ವರ್ಗದವರನ್ನು ಜಾಗೃತಿಗೊಳಿಸಿದ ಮಹಾನ್ ನಾಯಕ ಹಾವನೂರ
ಹಿಂದುಳಿದ ವರ್ಗದವರನ್ನು ಜಾಗೃತಿಗೊಳಿಸಿದ ಮಹಾನ್ ನಾಯಕ ಎಲ್.ಜಿ. ಹಾವನೂರ ಅವರು. ಹಾವನೂರ ಆಯೋಗವನ್ನು ಮತ್ತೆ ಅನುಷ್ಠಾನಕ್ಕೆ ತರುವುದು ಕೂಡ ಅವಶ್ಯಕತೆ ಇದೆ. ಅವರ ಹೆಸರಿನಲ್ಲಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆಯನ್ನು ಮಾಡಬೇಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.