ಸಾರಾಂಶ
ಹಾವೇರಿ: ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ನೇಮಕವಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜಪ್ಪ ಬರೇಗಾರ ಅವರನ್ನು ಸೇವೆಯಿಂದ ವಜಾಗೊಳಿಸಿ ತೋಟಗಾರಿಕಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.ತೋಟಗಾರಿಕೆ ಇಲಾಖೆಯಲ್ಲಿ ಬಸವರಾಜಪ್ಪ ನಿಂಗಪ್ಪ ಬರೇಗಾರ ದಿನಗೂಲಿ ನೌಕರನಾಗಿದ್ದುಕೊಂಡು ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆ ಬಡ್ತಿ ಪಡೆದಿದ್ದರು. ೧೯೮೧ರಿಂದ ೧೯೯೧ರ ವರೆಗೆ ದಿನಗೂಲಿ ನೌಕರನಾಗಿ ಸೇವೆ ಸಲ್ಲಿಸಿದ್ದಾಗಿ ಸುಳ್ಳು ದಾಖಲೆ ನೀಡಿದ್ದರು. ಇದರಿಂದ ೧೯೯೨ರಲ್ಲಿ ತೋಟಗಾರ ಹುದ್ದೆಗೆ ನೇಮಕವಾಗಿದ್ದರು. ನಂತರ ೨೦೧೨ರಲ್ಲಿ ಜ್ಯೇಷ್ಠತೆಯನ್ನು ಪರಿಗಣಿಸಿ ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಮುಂಬಡ್ತಿ ನೀಡಲಾಗಿತ್ತು. ಆದರೆ ಇವರ ಹುದ್ದೆಯನ್ನು ನಿಯಮಬಾಹಿರವಾಗಿ ಸಕ್ರಮಗೊಳಿಸಲಾಗಿದೆ ಎಂದು ದೂರು ಸಲ್ಲಿಕೆಯಾಗಿತ್ತು.೧೯೮೧ರಿಂದ ೧೯೯೧ರವರೆಗೆ ದಿನಗೂಲಿ ನೌಕರನಾಗಿ ಕೆಲಸ ಮಾಡಿರುವುದಾಗಿ ದಾಖಲೆ ನೀಡಿದ್ದರು. ಆದರೆ, ಆ ಅವಧಿಯಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ರೆಗ್ಯುಲರ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದರು ಎಂಬುದು ದೃಢಪಟ್ಟಿದೆ. ೧೦ ವರ್ಷಗಳ ನಿರಂತರ ಸೇವೆ ಪೂರೈಸದೆ ಸಕ್ರಮಾತಿ ಷರತ್ತುಗಳನ್ನು ಉಲ್ಲಂಘಿಸಿ ನೇಮಕವಾಗಿರುವುದು ಸಮಿತಿ ಪರಿಶೀಲನೆ ವೇಳೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜಪ್ಪ ನಿಂಗಪ್ಪ ಬರೇಗಾರ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.