ತಾಂತ್ರಿಕ ಸಮಸ್ಯೆಗಳ ನಡುವೆಯೂ ಹಾವೇರಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ

| Published : Sep 29 2025, 03:02 AM IST

ತಾಂತ್ರಿಕ ಸಮಸ್ಯೆಗಳ ನಡುವೆಯೂ ಹಾವೇರಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ವೇಳೆ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆ ನಡುವೆಯೂ ಜಿಲ್ಲೆಯಲ್ಲಿ ಈವರೆಗೆ 74,284 (ಶೇ.18ರಷ್ಟು) ಮನೆಗಳ ಸಮೀಕ್ಷೆ ಪೂರ್ಣಗೊಳಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಹಾವೇರಿ: ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ವೇಳೆ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆ ನಡುವೆಯೂ ಜಿಲ್ಲೆಯಲ್ಲಿ ಈವರೆಗೆ 74,284 (ಶೇ.18ರಷ್ಟು) ಮನೆಗಳ ಸಮೀಕ್ಷೆ ಪೂರ್ಣಗೊಳಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಕಳೆದ ಸೆ. 22ರಿಂದ ಆರಂಭಗೊಂಡ ಸಮೀಕ್ಷೆಗೆ ಹಲವಾರು ತಾಂತ್ರಿಕ ಸಮಸ್ಯೆಗಳ ಎದುರಾಗಿದ್ದರೂ, ಜಿಲ್ಲೆಯಲ್ಲಿ ಸಮೀಕ್ಷಾನಿರತ ಗಣತಿದಾರರು ಗಣತಿ ಕಾರ್ಯದಲ್ಲಿ ತೊಡಗಿದ್ದು, ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆ ಗಣತಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಕೊಪ್ಪಳ (ಶೇ 16.49), ಮೂರನೇ ಸ್ಥಾನದಲ್ಲಿ ಗದಗ (ಶೇ.15.61) ಇದ್ದರೆ, ಬೆಂಗಳೂರು ನಗರ ಜಿಲ್ಲೆ(ಶೇ.1.27) ಕೊನೆಯ ಸ್ಥಾನದಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ 3777 ಬ್ಲಾಕ್ ರಚನೆ ಮಾಡಿ ಸಮೀಕ್ಷಾದಾರರನ್ನು ನಿಯೋಜಿಸಲಾಗಿದ್ದು, ಸಮೀಕ್ಷೆ ಆರಂಭಗೊಂಡ ದಿನದಿಂದಲೇ ಎದುರಾದ ತಾಂತ್ರಿಕ ಸಮಸ್ಯೆಯಿಂದ ಸಮೀಕ್ಷೆದಾರರು ಕಿರಿಕಿರಿ ಎದುರಿಸುವಂತಾಗಿತ್ತು. ತಾಂತ್ರಿಕ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಸಮೀಕ್ಷಾನಿರತರು ಪ್ರತಿಭಟನೆ ನಡೆಸಿ ಮನವಿ ಕೂಡ ಸಲ್ಲಿಸಿದ್ದರು. ಈ ಸಮಸ್ಯೆ ಮಧ್ಯೆಯೂ ಜಿಲ್ಲೆಯಲ್ಲಿ ಗಣತಿದಾರರು ಸಮೀಕ್ಷಾ ಕಾರ್ಯ ಕೈಗೊಂಡಿದ್ದರಿಂದ ಶೇ.18ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.74,284 ಮನೆಗಳ ಸಮೀಕ್ಷೆ ಪೂರ್ಣ: ಜಿಲ್ಲೆಯಲ್ಲಿ 4,12,695 ಮನೆಗಳನ್ನು ಸಮೀಕ್ಷೆಗೆ ಒಪಡಿಸಲಾಗಿದ್ದು, ಈವರೆಗೆ 74,284 ಮನೆಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಬ್ಯಾಡಗಿ ತಾಲೂಕಿನಲ್ಲಿ 7692, ಹಾನಗಲ್ಲ 11239, ಹಾವೇರಿ 12719, ಹಿರೇಕೆರೂರ 6200, ರಾಣಿಬೆನ್ನೂರ 14925, ರಟ್ಟಿಹಳ್ಳಿ 5718, ಸವಣೂರು 7048 ಹಾಗೂ ಶಿಗ್ಗಾಂವಿಯಲ್ಲಿ 9286 ಮನೆಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಜಿಲ್ಲೆಯಲ್ಲಿ 3777 ಬ್ಲಾಕ್ ರಚನೆ: ಸಮೀಕ್ಷೆ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 3777 ಬ್ಲಾಕ್ ರಚಿಸಲಾಗಿದೆ. ಬ್ಯಾಡಗಿ ತಾಲೂಕಿನಲ್ಲಿ 316 ಬ್ಲಾಕ್, ಹಾನಗಲ್ಲ 591, ಹಾವೇರಿ 694, ಹಿರೇಕೆರೂರು 288, ರಾಣಿಬೆನ್ನೂರ 807, ರಟ್ಟಿಹಳ್ಳಿ 261, ಸವಣೂರ 372 ಹಾಗೂ ಶಿಗ್ಗಾವಿಯಲ್ಲಿ 448 ಬ್ಲಾಕ್ ರಚಿಸಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಸಮೀಕ್ಷೆದಾರರಿಗೆ ಹಲವು ಸಮಸ್ಯೆ ಎದುರು: ಸಮೀಕ್ಷೆ ಆರಂಭಗೊಂಡ ಮೊದಲ ದಿನದಿಂದಲೇ ಸರ್ವರ್ ಸಮಸ್ಯೆ ಎದುರಿಸುವಂತಾಗಿದ್ದು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಒಟಿಪಿ ಬರದೇ ಗಣತಿದಾರರಿಗೆ ಕಿರಿಕಿರಿ ಅನುಭವಿಸುವಂತಾಗಿದೆ. ಇನ್ನೂ ಗಣತಿದಾರನಿಗೆ ಒಂದು ಊರಿನಲ್ಲಿ ಒಂದು ಮನೆ, ಮತ್ತೊಂದು ಊರಿನಲ್ಲಿ ಒಂದು ಮನೆ ಗಣತಿಗೆ ನೀಡಲಾಗಿದೆ. ಇದರಿಂದ ದಿನಕ್ಕೆ ಒಂದು ಮನೆ ಗಣತಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇನ್ನೊಂದಡೆ ಗಣತಿದಾರರಿಗೆ ಸಮೀಕ್ಷೆ ವೇಳೆ ತಾಂತ್ರಿಕ ಸಮಸ್ಯೆ ಎದುರಾದಾಗ ಮೇಲಾಧಿಕಾರಿಗಳಿಗೆ ಕರೆ ಮಾಡಿದರೆ, ಅವರು ಕರೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಈ ಎಲ್ಲ ಸಮಸ್ಯೆಗಳನ್ನು ದಾಟಿ ಗಣತಿ ಮಾಡುವ ಕೊನೆ ಹಂತಕ್ಕೆ ಬಂದು ಒಟಿಪಿ ಕೇಳಿದರೆ ಜನ ಒಟಿಪಿ ಹೇಳಲು ಹಿಂದೇಟು ಹಾಕುತ್ತಿದ್ದರಿಂದ ಸಮೀಕ್ಷೆದಾರರು ಸಮಸ್ಯೆ ಎದುರಿಸುವಂತಾಗಿದೆ. ಇನ್ನು ಕುಟುಂಬಸ್ಥರಿಗೆ ಆದಾಯ, ಖರ್ಚು ಮತ್ತು ಸರ್ಕಾರಿ ಯೋಜನೆಗಳ ಲಾಭ ಪಡೆದಿರುವ ಬಗ್ಗೆ ಕೇಳಿದಾಗ ಜನ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವ ಅಂಶಗಳು ಕಂಡು ಬರುತ್ತಿವೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಈವರೆಗೆ ಜಿಲ್ಲೆಯಲ್ಲಿ 74,284 (ಶೇ.18ರಷ್ಟು) ಮನೆಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಸಮೀಕ್ಷೆ ವೇಳೆ ಎದುರಾದ ತಾಂತ್ರಿಕ ಸಮಸ್ಯೆಗಳ ನಡುವೆಯೂ ಜಿಲ್ಲೆಯಲ್ಲಿ ಸಮೀಕ್ಷೆದಾರರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿಗದಿತ ಅವಧಿಯೊಳಗಾಗಿ ಸಮೀಕ್ಷೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.