ಸಾರಾಂಶ
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಘಟಾನುಘಟಿ ರಾಜಕಾರಣಿಗಳಿಗೇ ಸೋಲಿನ ರುಚಿ ತೋರಿಸಿದ ಕ್ಷೇತ್ರವಿದು. ನೀರಸಾಬ್ ಎಂದೇ ಖ್ಯಾತರಾಗಿದ್ದ ಅಬ್ದುಲ್ ನಜೀರಸಾಬ, ಸ್ವಾತಂತ್ರ್ಯ ಹೋರಾಟಗಾರ ಸಿದ್ದಪ್ಪ ಹೊಸಮನಿ, ವಿಧಾನಸಭೆಯ ಮಾಜಿ ಸ್ಪೀಕರ್ ಬಿ.ಜಿ. ಬಣಕಾರ, ಸಿ.ಎಂ.ಇಬ್ರಾಹಿಂ ಅವರಂಥ ಅನೇಕ ರಾಜಕೀಯ ನಾಯಕರನ್ನೇ ಸೋಲಿಸಿದ ಇತಿಹಾಸ ಹಾವೇರಿ ಲೋಕಸಭಾ ಕ್ಷೇತ್ರಕ್ಕಿದೆ.
ಅಂದಿನ ಧಾರವಾಡ ದಕ್ಷಿಣ ಹಾಗೂ ಇಂದಿನ ಹಾವೇರಿ ಕ್ಷೇತ್ರ ಇದುವರೆಗೆ ನಡೆದ ೧೭ ಚುನಾವಣೆಗಳಲ್ಲಿ ಹಲವು ವಿಶೇಷಗಳನ್ನು ಕಂಡಿದೆ. ಮತದಾರ ಯಾರಿಗೆ ಒಲಿಯುತ್ತಾನೆ ಎಂಬ ಸಣ್ಣ ಸುಳಿವು ಕೂಡ ಸಿಗದಂತೆ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದಾನೆ. ಆದ್ದರಿಂದ ಇಲ್ಲಿ ಗೆಲುವು ಸುಲಭ ಎಂದು ಬಂದವರು ಸೋಲು ಕಂಡಿದ್ದರೆ, ಸಾಮಾನ್ಯ ಕಾರ್ಯಕರ್ತರೂ ಸತತ ೫ ಬಾರಿ ಜಯಭೇರಿ ಬಾರಿಸಿದ ಚುನಾವಣಾ ಇತಿಹಾಸವನ್ನು ಕ್ಷೇತ್ರ ಹೊಂದಿದೆ.ಸಿದ್ದಪ್ಪ ಹೊಸ್ಮನಿಗೆ ಸೋಲು
೧೯೫೨ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಟಿ.ಆರ್. ನೇಸ್ವಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸಿದ್ದಪ್ಪ ಹೊಸ್ಮನಿ ಅವರನ್ನು ಸೋಲಿಸಿದ್ದರು. ಕಿಸಾನ್ ಮಜ್ದೂರ ಪ್ರಜಾ ಪಾರ್ಟಿಯಿಂದ ಸ್ಪರ್ಧಿಸಿದ್ದ ಸಿದ್ದಪ್ಪ ಹೊಸ್ಮನಿ ೫೦ ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು.ನೀರಸಾಬರಿಗೂ ನೀರು
ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರಾಗಿ, ಕೊಳವೆ ಬಾವಿ ಮೂಲಕ ನೀರಾವರಿ ಕ್ರಾಂತಿ ಮಾಡಿದ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿ ನೀರಸಾಬ್ ಎಂದೇ ಹೆಸರು ಮಾಡಿದ್ದ ಅಬ್ದುಲ್ ನಜೀರಸಾಬ್ ಈ ಕ್ಷೇತ್ರದಿಂದ ಸಂಸತ್ ಪ್ರವೇಶಿಸಲು ೧೯೮೪ರಲ್ಲಿ ಜನತಾಪಕ್ಷದಿಂದ ಕಣಕ್ಕಿಳಿದಿದ್ದರು. ಆದರೆ ಕಾಂಗ್ರೆಸ್‌ನ ಎ.ಎ. ಅಜೀಜ್ ಶೇಟ್ ಅವರಿಗೆ ಮತದಾರರು ಮಣೆ ಹಾಕುವ ಮೂಲಕ ಅಬ್ದುಲ್ ನಜೀರಸಾಬರಿಗೆ ನೀರು ಕುಡಿಸಿದರು. ಅಜೀಜ್ ಶೇಟ್ ೨.೫೭ ಲಕ್ಷ ಮತಗಳಿಸಿ ಆಯ್ಕೆಯಾದರೆ, ನಜೀರಸಾಬರು ೨ ಲಕ್ಷ ಮತಗಳಿಸಿದ್ದರು.ಬಣಕಾರಗೂ ಒಲಿಯಲಿಲ್ಲ
ಹಿರೇಕೆರೂರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಬಿ.ಜಿ. ಬಣಕಾರ ಅವರು ೧೯೮೦ (ಕಾಂಗ್ರೆಸ್-ಯು), ೧೯೮೯ (ಜನತಾದಳ), ೧೯೯೧ ಹಾಗೂ ೧೯೯೬ (ಬಿಜೆಪಿ) ಹೀಗೆ ಒಟ್ಟು ನಾಲ್ಕು ಬಾರಿ ಲೋಕಸಭೆಗೆ ಸ್ಪರ್ಧಿಸಿದರೂ ಒಮ್ಮೆಯೂ ಅವರಿಗೆ ಕ್ಷೇತ್ರದ ಮತದಾರ ಒಲಿಯಲಿಲ್ಲ. ೧೯೮೯ರಲ್ಲಿ ಜನತಾದಳದಿಂದ ಸ್ಪರ್ಧಿಸಿದಾಗ ಕೇವಲ ೨೮ ಸಾವಿರ ಮತಗಳ ಅಂತರದಲ್ಲಿ ಸೋತರು. ಈ ನಾಲ್ಕೂ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರು. ಆದರೆ, ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಮೊದಲ ಅಭ್ಯರ್ಥಿ ಬಿ.ಜಿ. ಬಣಕಾರ ಆ ಪಕ್ಷಕ್ಕೆ ಬುನಾದಿ ನಿರ್ಮಿಸಿದ್ದು ಈಗ ಇತಿಹಾಸ.ಅದೃಷ್ಟ ಪರೀಕ್ಷಿಸಿದ್ದ ಇಬ್ರಾಹಿಂ
ಅಲ್ಪಸಂಖ್ಯಾತ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದ ಈ ಕ್ಷೇತ್ರದಲ್ಲಿ ತಾವು ಸುಲಭ ಗೆಲುವು ಸಾಧಿಸಿ ಸಂಸತ್ ಪ್ರದೇಶಿಸಬಹುದು ಎಂಬ ಲೆಕ್ಕಾಚಾರದಲ್ಲಿ ೧೯೭೭ರಲ್ಲಿ ಸಿ.ಎಂ. ಇಬ್ರಾಹಿಂ ಭಾರತೀಯ ಲೋಕದಳ ಪಕ್ಷದಿಂದ ಅದೃಷ್ಠ ಪರೀಕ್ಷೆಗಿಳಿದಿದ್ದರು. ಆದರೆ ಕ್ಷೇತ್ರದ ಮತದಾರರು ಆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನೇ ಗೆಲ್ಲಿಸಿದರೂ ಸಿ.ಎಂ. ಇಬ್ರಾಹಿಂ ಕೈಹಿಡಿಯಲಿಲ್ಲ. ಕಾಂಗ್ರೆಸ್‌ನ ಎಫ್.ಎಚ್.ಮೊಹಿಸಿನ್ ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ೧೯೬೨ರಿಂದ ೧೯೮೦ರವರೆಗೆ ಸತತವಾಗಿ ೫ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೀರ್ತಿ ಮೊಹಿಸಿನ್ ಅವರಿಗಿದೆ.ಕೈ ಅಧಿಪತ್ಯಕ್ಕೆ ಮೆಣಸಿನಕಾಯಿ ಬ್ರೇಕ್
೧೯೫೨ರಿಂದ ಸತತವಾಗಿ ಗೆಲುವು ಸಾಧಿಸುತ್ತ ಬಂದು ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಕ್ಷೇತ್ರದಲ್ಲಿ ಆ ಪಕ್ಷದ ಗೆಲುವಿನ ಓಟಕ್ಕೆ ಮೊದಲ ಬಾರಿ ಬ್ರೇಕ್ ಬಿದ್ದಿದ್ದು ೧೯೯೮ರಲ್ಲಿ. ಲೋಕಶಕ್ತಿಯಿಂದ ಸ್ಪರ್ಧಿಸಿದ್ದ ಬಿ.ಎಂ.ಮೆಣಸಿನಕಾಯಿ ಅವರು ಕಾಂಗ್ರೆಸ್‌ನ ಐ.ಜಿ.ಸನದಿ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ಸೇತರ ಪಕ್ಷಕ್ಕೆ ಮೊದಲ ಬಾರಿಗೆ ಕ್ಷೇತ್ರದ ಮತದಾರ ಕೈಹಿಡಿದಿದ್ದರು. ೨೦೦೪ರಿಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತ ಬಂದಿದ್ದಾರೆ. ಮಂಜುನಾಥ ಕುನ್ನೂರ 2004 ರಲ್ಲಿ ಕಾಂಗ್ರೆಸ್‌ನ ಐ.ಜಿ. ಸನದಿ ಅವರನ್ನು ಸೋಲಿಸಿದ್ದರು.ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಹೊರತುಪಡಿಸಿ ಇನ್ನುಳಿದ ಐದು ಕ್ಷೇತ್ರಗಳನ್ನು ಒಳಗೊಂಡ ಹಾವೇರಿ ಲೋಕಸಭಾ ಕ್ಷೇತ್ರ ರಚನೆಯಾಯಿತು. ಅಲ್ಲಿಂದ ಸತತವಾಗಿ ಬಿಜೆಪಿಯ ಶಿವಕುಮಾರ ಉದಾಸಿ ಗೆಲುವು ಸಾಧಿಸುತ್ತ ಬಂದಿದ್ದಾರೆ. ಉದಾಸಿ ಅವರು ಎರಡು ಸಲ ಕಾಂಗ್ರೆಸ್‌ನ ಸಲೀಂ ಅಹ್ಮದ್ ಅವರನ್ನು ಸೋಲಿಸಿದರೆ, ಕಳೆದ ಚುನಾವಣೆಯಲ್ಲಿ ಡಿ.ಆರ್.ಪಾಟೀಲರನ್ನು ಮಣಿಸಿದ್ದರು. ಹೀಗೆ ಹತ್ತು ಹಲವು ವಿಶೇಷತೆ, ಖ್ಯಾತನಾಮರ ಸೋಲಿಗೆ ಕಾರಣವಾದ ಕ್ಷೇತ್ರ ಮತ್ತೊಂದು ಚುನಾವಣಾ ಅಖಾಡಕ್ಕೆ ಸಜ್ಜಾಗಿದೆ. ಈ ಸಲ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.