ಸಾರಾಂಶ
ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದ 7 ಜನ ಯಾತ್ರಿಕರು ಬದರೀನಾಥದಲ್ಲಿ ಭಾರೀ ಮಳೆಯಿಂದ ಭೂಕುಸಿತಗೊಂಡು ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಸಿಲುಕಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಹಾವೇರಿ
ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದ 7 ಜನ ಯಾತ್ರಿಕರು ಬದರೀನಾಥದಲ್ಲಿ ಭಾರೀ ಮಳೆಯಿಂದ ಭೂಕುಸಿತಗೊಂಡು ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಸಿಲುಕಿಕೊಂಡಿರುವ ಘಟನೆ ನಡೆದಿದೆ.ಸಂಪರ್ಕ ಕಡಿತದಿಂದ ಬದರೀನಾಥದಲ್ಲಿ ಸಾವಿರಾರು ಯಾತ್ರಿಕರು ಸಿಲುಕಿಕೊಂಡಿದ್ದು, ಅವರಲ್ಲಿ ಕನ್ನಡಿಗರೂ ಸೇರಿದ್ದಾರೆ. ಕಳೆದ ಕೆಲವು ದಿನಗಳಿಂದ ಆ ಭಾಗದಲ್ಲಿ ಮಳೆಯಾಗಿದ್ದರಿಂದ ಭೂಕುಸಿತವಾಗಿದೆ. ಇದರಿಂದ ಸಂಪರ್ಕ ಕಡಿತಗೊಂಡು ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದ 7 ಜನರ ತಂಡ ಸಿಲುಕಿಕೊಂಡಿದೆ. ಶ್ರೀಧರ ಹೊಳಲಕೇರಿ (62), ಪತ್ನಿ ಶಾಂತಾ ಹೊಳಲಕೇರಿ (57), ಅಶೋಕ ವಿ. ಎಸ್. (61), ಭಾರತಿ ಎ.ಎಸ್.(55), ವೆಂಕಟೇಶ ಪಂಪನ್ (62), ರಾಜೇಶ್ವರಿ ಪಂಪನ್ (60), ರಾಹುಲ್ ಪಂಪನ್ (35) ಬದರಿಯಲ್ಲಿ ಸಿಲುಕಿಕೊಂಡಿರುವ ಯಾತ್ರಿಗಳು. ಆದರೆ, ಯಾವುದೇ ಅಪಾಯವಾಗದೇ ಸುರಕ್ಷಿತ ಸ್ಥಳದಲ್ಲಿ ತಂಗಿದ್ದಾರೆ.
ಕನ್ನಡಪ್ರಭಕ್ಕೆ ಯಾತ್ರಿಕನಿಂದ ಮಾಹಿತಿ: ‘ಕನ್ನಡಪ್ರಭ’ಕ್ಕೆ ಘಟನೆ ಕುರಿತು ಮಾಹಿತಿ ನೀಡಿದ ಚಿಕ್ಕೇರೂರು ಗ್ರಾಮದ ಶ್ರೀಧರ ಹೊಳಲಕೇರಿ, ಜು.29ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ತೆರಳಿದ್ದ ನಾವು 5 ದಿನಗಳ ಹಿಂದೆ ಬದರೀನಾಥಕ್ಕೆ ಬಂದಿದ್ದೆವು. ನಂತರ ಭೂಕುಸಿತದಿಂದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಯಿತು. ಕೆಲ ಸಂಘಟನೆಯವರು ಆಹಾರ, ಊಟ ನೀಡಿದರು. ಸುಮಾರು ನಾಲ್ಕೈದು ಕಿ.ಮೀ. ನಡೆದು ಹೇಗೋ ಸುರಕ್ಷಿತ ಸ್ಥಳಕ್ಕೆ ಬಂದು ತಲುಪಿದೆವು. ನಮ್ಮೊಂದಿಗೆ ಮೂವರು ಮಹಿಳೆಯರೂ ಇದ್ದುದ್ದರಿಂದ ಹೋಟೆಲ್‌ಗೆ ಬಂದು ತಂಗಿದ್ದೇವೆ. ಮೊದಲು 800ರಿಂದ 1000 ರು.ಗೆ ಸಿಗುತ್ತಿದ್ದ ಕೊಠಡಿಗೆ ಈಗ 4ರಿಂದ 5000 ರು. ಕೇಳುತ್ತಿದ್ದಾರೆ. ಆಹಾರಕ್ಕೂ ಪರದಾಡುವಂತಾಗಿದೆ. ನಾವು ಹೋಟೆಲ್‌ನಲ್ಲಿ ತಂಗಿ 3 ದಿನಗಳಾದವು. ಇದುವರೆಗೆ ನಮ್ಮನ್ನು ಕರ್ನಾಟಕ ಸರ್ಕಾರದ ಪರವಾಗಿ ಯಾರೂ ಸಂಪರ್ಕಿಸಿಲ್ಲ. ಹೇಗಾದರೂ ನಮ್ಮನ್ನು ಸುರಕ್ಷಿತವಾಗಿ ಇಲ್ಲಿಂದ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು.