ಸಾರಾಂಶ
ದೆಹಲಿಯ ಕೆಂಪುಕೋಟೆ ಮೇಲೆ ಆ. 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಹಾವೇರಿ ತಾಲೂಕಿನ ಕೂರಗುಂದ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ ವಿದ್ಯಾರ್ಥಿನಿ ವಿಶೇಷ ಆಹ್ವಾನಿತಳಾಗಿ ಪಾಲ್ಗೊಳ್ಳುತ್ತಿದ್ದಾಳೆ.
ಹಾವೇರಿ: ದೆಹಲಿಯ ಕೆಂಪುಕೋಟೆ ಮೇಲೆ ಆ. 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಹಾವೇರಿ ತಾಲೂಕಿನ ಕೂರಗುಂದ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ ವಿದ್ಯಾರ್ಥಿನಿ ವಿಶೇಷ ಆಹ್ವಾನಿತಳಾಗಿ ಪಾಲ್ಗೊಳ್ಳುತ್ತಿದ್ದಾಳೆ.
ಪಿಎಂ ಶ್ರೀ ಯೋಜನೆಯಲ್ಲಿ ಆಯ್ಕೆಯಾಗಿರುವ ಕೂರಗುಂದ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಹಿರಿಯಮ್ಮ ಅಗಸರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೆರವೇರಿಸಲಿರುವ ರಾಷ್ಟ್ರ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾಳೆ. ಆಯ್ಕೆಯಾಗಿರುವ ಪ್ರೌಢಶಾಲೆಗಳ ಪೈಕಿ ರಾಜ್ಯದ ನಾಲ್ಕು ವಿಭಾಗಗಳಿಂದ ತಲಾ ಒಬ್ಬರಂತೆ ರಾಜ್ಯದಿಂದ ನಾಲ್ವರು ವಿದ್ಯಾರ್ಥಿಗಳು ಕೆಂಪುಕೋಟೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುತ್ತಿದ್ದಾರೆ. ಬೆಳಗಾವಿ ವಿಭಾಗದಿಂದ ಹಾವೇರಿ ಜಿಲ್ಲೆಯ ಕೂರಗುಂದ ಶಾಲೆಯ ಹಿರಿಯಮ್ಮ ಅಗಸರ ಆಯ್ಕೆಯಾಗಿದ್ದಾಳೆ.ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಬೆಂಗಳೂರಿಗೆ ತೆರಳಿರುವ ವಿದ್ಯಾರ್ಥಿನಿ, ಮಂಗಳವಾರ ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿ ತಲುಪಲಿದ್ದಾಳೆ. ಆ.15ರಂದು ಕೆಂಪುಕೋಟೆ ಮೇಲೆ ನಡೆಯಲಿರುವ ಐತಿಹಾಸಿಕ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಇವಳು ಸಾಕ್ಷಿಯಾಗಲಿದ್ದಾಳೆ.
ಕೆಂಪುಕೋಟೆ ಮೇಲೆ ನಡೆಯುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ತಮ್ಮ ಶಾಲೆಯ ವಿದ್ಯಾರ್ಥಿನಿ ಪಾಲ್ಗೊಳ್ಳುತ್ತಿರುವುದಕ್ಕೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಸ್ಥರು ಸಂಭ್ರಮಿಸುತ್ತಿದ್ದಾರೆ.2023-24ನೇ ಸಾಲಿನಲ್ಲಿ ಪಿಎಂ ಶ್ರೀ ಯೋಜನೆಯಲ್ಲಿ ನಮ್ಮ ಶಾಲೆಯೂ ಆಯ್ಕೆಯಾಗಿತ್ತು. ಅದರಂತೆ ಈ ಸಲ ಪ್ರಧಾನಿ ಮೋದಿಯವರು ಧ್ವಜಾರೋಹಣ ನೆರವೇರಿಸಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತಳಾಗಿ ಪಾಲ್ಗೊಳ್ಳಲು ನಮ್ಮ ಶಾಲೆಯ ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ನಮಗೆಲ್ಲ ಖುಷಿಯಾಗಿದೆ ಎಂದು ಕೂರಗುಂದ ಪ್ರೌಢಶಾಲೆ ಮಖ್ಯಾಧ್ಯಾಪಕ ಶಿವಲೀಲಾ ವಾಣಿ ಹೇಳಿದರು.