ಗಂಭೀರ ಸಮಸ್ಯೆ ಎದುರಿಸುತ್ತಿದೆ ಹವ್ಯಕ ಸಮಾಜ: ಸ್ವರ್ಣವಲ್ಲೀಶ್ರೀ

| Published : Feb 13 2024, 12:53 AM IST

ಸಾರಾಂಶ

ನಮ್ಮ ಸಂಸ್ಕಾರಗಳು ಕ್ಷೀಣಿಸುತ್ತಿದ್ದು, ಆಹಾರ ಸೇವನೆಯಲ್ಲಿಯೂ ನಾವು ಸರಿಯಾಗಿರದೇ ಅನ್ಯಾಹಾರ ಸೇವನೆ ಮಾಡುತ್ತಿದ್ದೇವೆ. ವಿವಾಹ ವಿವಿಧ ಕಾರ್ಯಕ್ರಮಗಳಲ್ಲಿ ಸಂಸ್ಕಾರಗಳಿಗಿಂತ ಆಡಂಬರವೇ ಹೆಚ್ಚಾಗುತ್ತಿದೆ.

ಯಲ್ಲಾಪುರ:ಹವ್ಯಕ ಸಮಾಜವು ಪ್ರಸ್ತುತ ಅತ್ಯಂತ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಭವಿಷ್ಯದ ಹಿತದೃಷ್ಟಿಯಿಂದ ಸಂಘಟನೆ ಮತ್ತಷ್ಟು ಬಲಗೊಳ್ಳುವ ಅಗತ್ಯವಿದೆ. ವೈವಾಹಿಕ, ಮಿತಸಂತಾನ, ಆಸ್ತಿ ಮಾರಾಟ ಮುಂತಾದ ಸಂಗತಿಗಳು ಸಮಾಜದ ಅವನತಿಗೆ ಕಾರಣವಾಗಿ ತೀವೃ ಆತಂಕ ಸೃಷ್ಟಿಯಾಗಿದೆ ಎಂದು ಸೋಂದಾ ಸ್ವರ್ಣವಲ್ಲಿಯ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.ಪಟ್ಟಣದ ಶ್ರೀ ಶಕ್ತಿಗಣಪತಿ ದೇವಸ್ಥಾನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಹಮ್ಮಿಕೊಂಡಿದ್ದ ಪ್ರತಿಬಿಂಬ ಕಾರ್ಯಕ್ರಮದ ಸಮಾರೋಪದಲ್ಲಿ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿ ಆಶೀರ್ವಚನ ನೀಡಿದರು. ಸಾಧಕರ ಸಾಧನೆಯ ಪ್ರತಿಬಿಂಬ ಸಮಾಜದಲ್ಲಿ ಕಾಣುತ್ತದೆ. ಪ್ರತಿಬಿಂಬ ಸರಿಯಾಗಿ ಕಾಣಬೇಕೆಂದರೆ ಬಿಂಬ ಸಮರ್ಪಕವಾಗಿರಬೇಕಾಗುತ್ತದೆ. ಈ ಎಲ್ಲ ಸಾಧಕರೂ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಶ್ರೀಗಳು ಆಶಿಸಿದರು.ನಮ್ಮ ಸಂಸ್ಕಾರಗಳು ಕ್ಷೀಣಿಸುತ್ತಿದ್ದು, ಆಹಾರ ಸೇವನೆಯಲ್ಲಿಯೂ ನಾವು ಸರಿಯಾಗಿರದೇ ಅನ್ಯಾಹಾರ ಸೇವನೆ ಮಾಡುತ್ತಿದ್ದೇವೆ. ವಿವಾಹ ವಿವಿಧ ಕಾರ್ಯಕ್ರಮಗಳಲ್ಲಿ ಸಂಸ್ಕಾರಗಳಿಗಿಂತ ಆಡಂಬರವೇ ಹೆಚ್ಚಾಗುತ್ತಿದೆ. ಶಂಕರರು ನೀಡಿದ ಮಾರ್ಗದರ್ಶನದಂತೆ ನಾವು ಮುನ್ನಡೆದರೆ ಮಾತ್ರ ನಮ್ಮ ಸಮಾಜ, ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ. ಸಂಘಟನೆ, ಜನಸಂಖ್ಯೆ, ಸಂಸಾರ ಈ ಮೂರಕ್ಕೂ ಪ್ರಥಮ ಆದ್ಯತೆ ನೀಡಬೇಕಾಗಿದೆ. ಈ ದೃಷ್ಟಿಯಿಂದ ಮಹಾಸಭೆ ಉತ್ತಮ ಕಾರ್ಯ ಮಾಡುತ್ತಿದೆ. ಯಲ್ಲಾಪುರದಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠಗೊಳ್ಳಲಿ. ನಮ್ಮ ಕೃಷಿ ಜಮೀನು ಮಾರಾಟವಾಗದಂತೆ ಶ್ರೀಮಠದ ವತಿಯಿಂದ ಪ್ರತಿ ಸೀಮಾ ಮಟ್ಟದಲ್ಲಿ ಸಮಿತಿ ರಚಿಸಿ, ಜಮೀನು ಮಾಲಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ಶ್ರೀ ಅಖಿಲ ಹವ್ಯಕ ಮಹಾಸಭೆ ಉಪಾಧ್ಯಕ್ಷ ಆರ್.ಎನ್. ಹೆಗಡೆ ಬಾಳೇಸರ ಮಾತನಾಡಿ, ದೇಶದಲ್ಲಿರುವ ಬ್ರಾಹ್ಮಣರ ಸಂಖ್ಯೆ ಚಿಕ್ಕದಾಗಿದ್ದರೂ, ದೈವದತ್ತವಾಗಿಯೇ ಪ್ರಾಪ್ತವಾಗಿರುವ ಪ್ರತಿಭೆ, ಶ್ರೇಷ್ಠ ಸಂಸ್ಕಾರಗಳಿಂದ ನಾವು ಗಮನಾರ್ಹವಾಗಿ ಮುಂದಿದ್ದೇವೆ. ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಯುವಜನಾಂಗ ಬೆಂಗಳೂರಿನಂತಹ ಮಹಾನಗರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವುದರಿಂದ ಪಾಲಕರು ತಮ್ಮ ಜಮೀನನ್ನು ಕಂಡಕಂಡವರಿಗೆ ಮಾರುತ್ತಿದ್ದಾರೆ. ಹಾಗೆ ಮಾರಾಟವಾಗದಂತೆ ನಮ್ಮ ಸಂಘಟನೆ ಮತ್ತು ಸಮಾಜ ಪ್ರಯತ್ನ ನಡೆಸಬೇಕಾಗಿದೆ ಎಂದರು.ಹಿರಿಯ ಜ್ಯೋತಿಷ್ಯ ವಿದ್ವಾಂಸ ನಾಗೇಂದ್ರ ಭಟ್ಟ ಹಿತ್ಲಳ್ಳಿ, ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ವಿಪ್ರ ಸಮಾಜದ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ನಗರ ಸೀಮಾ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ಮಹಾಸಭಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ನಿರ್ದೇಶಕ ಪ್ರಶಾಂತ ಹೆಗಡೆ ಸಂಕಲ್ಪ, ಪ್ರತಿಬಿಂಬ ಸಂಚಾಲಕ ಅನಂತ ಗಾಂವ್ಕರ ಕಂಚೀಪಾಲ ಉಪಸ್ಥಿತರಿದ್ದರು. ಈ ವೇಳೆ ವಿವಿಧ ಕ್ಷೇತ್ರಗಳ ಸಾಧನೆಗೈದ ವಿ. ವಿಘ್ನೇಶ್ವರ ಭಟ್ಟ ಬಿಸಗೋಡು, ವಿ. ಮಂಜುನಾಥ ಭಟ್ಟ ಮೊಟ್ಟೇಗದ್ದೆ, ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಡಾ. ಎಸ್.ಎನ್. ಭಟ್ಟ ಅಸ್ತಾಳ, ರಾಮಚಂದ್ರ ಹೆಗಡೆ ಕಂಚನಳ್ಳಿ, ಅನಂತ ಹೆಗಡೆ ದಂತಳಿಗೆ, ನರಸಿಂಹ ಭಟ್ಟ ಹಂಡ್ರಮನೆ ಮುಂತಾದವರನ್ನು ಶ್ರೀಗಳು ಸನ್ಮಾನಿಸಿದರು.ವೇ.ಮೂ. ವೆಂಕಟರಮಣ ಭಟ್ಟ, ವೇ.ಮೂ. ಗುರುಪ್ರಸಾದ ಭಟ್ಟ ವೇದಘೋಷ ಪ್ರಸ್ತುತಪಡಿಸಿದರು. ಮಹಾಸಭೆಯ ನಿರ್ದೇಶಕ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸುಬ್ರಾಯ ಭಟ್ಟ ಆನೇಜಡ್ಡಿ, ಚನ್ನಾಪುರ ಸೀಮಾ ಮಾತೃಮಂಡಳಿ ಅಧ್ಯಕ್ಷೆ ಲಕ್ಷ್ಮೀ ಸಾಂಬೇಮನೆ ನಿರ್ವಹಿಸಿದರು. ಸದಸ್ಯತ್ವ ಅಭಿಯಾನದ ಸಂಚಾಲಕ ವಿ.ಟಿ.ಹೆಗಡೆ ತೊಂಡೇಕೆರೆ ವಂದಿಸಿದರು.