ಕಾಂಗ್ರೆಸ್‌ನಲ್ಲಿ ಸೀಡಿಗಳ ಲೈಬ್ರರಿಯೇ ಇದೆ. ಅದರಲ್ಲಿ ಸಂಪುಟದಲ್ಲಿರುವ ಬಹುತೇಕರ ಬಂಡವಾಳ ಅಡಗಿದೆ. ಸಿದ್ದರಾಮಯ್ಯನವರ ಬೆಂಬಲಿಗರಿಗೂ ಅದನ್ನೇ ತೋರಿಸಿ ಬಾಯಿ ಮುಚ್ಚಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ನಿಂದಿಸುತ್ತಿರುವ ಐದಾರು ಮಂತ್ರಿಗಳ ಸೀಡಿಗಳೂ ಇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ನಿಂದಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಮಂತ್ರಿ ಮಂಡಲದಲ್ಲಿರುವ ಐದಾರು ಮಂತ್ರಿಗಳೂ ಸ್ಟಿಂಗ್‌ಗೆ ಒಳಗಾಗಿದ್ದಾರೆ. ಅವರನ್ನು ಛೂ ಬಿಟ್ಟು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೌನಿಯಾಗಿದ್ದಾರೆ. ತಮ್ಮ ಗಲೀಜನ್ನು ಮುಚ್ಚಿಕೊಳ್ಳುವ ಸಲುವಾಗಿ ಕುಮಾರಸ್ವಾಮಿ ವಿರುದ್ಧ ಕೆಲ ಸಚಿವರು ನಾಲಿಗೆ ಹರಿಯಬಿಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಆರೋಪಿಸಿದರು.

ಕಾಂಗ್ರೆಸ್‌ನಲ್ಲಿ ಸೀಡಿಗಳ ಲೈಬ್ರರಿಯೇ ಇದೆ. ಅದರಲ್ಲಿ ಸಂಪುಟದಲ್ಲಿರುವ ಬಹುತೇಕರ ಬಂಡವಾಳ ಅಡಗಿದೆ. ಸಿದ್ದರಾಮಯ್ಯನವರ ಬೆಂಬಲಿಗರಿಗೂ ಅದನ್ನೇ ತೋರಿಸಿ ಬಾಯಿ ಮುಚ್ಚಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ನಿಂದಿಸುತ್ತಿರುವ ಐದಾರು ಮಂತ್ರಿಗಳ ಸೀಡಿಗಳೂ ಇವೆ. ಅದನ್ನೆಲ್ಲಿ ಬಿಡುಗಡೆ ಮಾಡುವರೋ ಎಂದು ಹೆದರಿ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂಷಿಸಿದರು.

ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಪ್ಪನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ತಾವು ಮಾಡಿರುವ ತಪ್ಪನ್ನು ಜೆಡಿಎಸ್ ಕಡೆ ತಿರುಗಿಸುವ ಸಂಚು ನಡೆಸುತ್ತಿದೆ. ಸ್ಟಿಂಗ್ ಆಪರೇಷನ್ ಮಾಡಿದ್ದು ಸ್ವತಃ ನಾನೇ ಎಂದು ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದರೂ ಆತನನ್ನು ಬಂಧಿಸುವ ಎದೆಗಾರಿಕೆ ಪ್ರದರ್ಶಿಸುತ್ತಿಲ್ಲ. ಆತನಿಗೆ ಜಾಮೀನು ದೊರಕಿಸಿ ರಕ್ಷಣೆ ಮಾಡುವುದಕ್ಕೆ ಸರ್ಕಾರವೇ ಬೆನ್ನೆಲುಬಾಗಿ ನಿಂತಿದೆ ಆಪಾದಿಸಿದರು.

ಸಚಿವ ಎನ್.ಚಲುವರಾಯಸ್ವಾಮಿ ಅವರು ಕುಮಾರಸ್ವಾಮಿ ಅವರ ವಿಧಾನಸಭೆಯಲ್ಲಿ ತಪ್ಪೊಪ್ಪಿಕೊಂಡ ರೀತಿಯಲ್ಲೇ ಬೇರೆಯವರೂ ತಪ್ಪೊಪ್ಪಿಕೊಳ್ಳಬೇಕೆ ಎಂದು ಹೇಳಿದ್ದಾರೆ. ಹಾಗಾದರೆ ಮಾಜಿ ಸಿಎಂ ಸಿದ್ದರಾಮಯ್ಯನವರು ತಪ್ಪು ಮಾಡಿದ್ದಾರೆ ಎನ್ನುವುದು ಈ ಮಾತಿನ ಹಿಂದಿನ ಅರ್ಥವೇ. ಸಿದ್ದರಾಮಯ್ಯನವರ ಆಶೀರ್ವಾದದಿಂದ ಚುನಾವಣೆಯಲ್ಲಿ ಗೆದ್ದು ಸಚಿವರಾಗಿರುವ ನೀವು ಹಿರಿಯ ನಾಯಕರೆಂಬ ಗೌರವ, ಕೃತಜ್ಞತೆ ಇಲ್ಲದೆ ಈ ರೀತಿ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಳ್ಳುವ ಸಮಯದಲ್ಲಿ ಅವರ ಪರ ಮಾತನಾಡಲಿಲ್ಲ. ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಅಧಿಕಾರಕ್ಕಾಗಿ ಅವರನ್ನು ಇಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದೀರಿ. ನೀವು ಅಧಿಕಾರ ಉಳಿಸಿಕೊಳ್ಳಲು ಯಾರನ್ನು ಬೇಕಾದರೂ ಬಲಿ ಕೊಡುತ್ತೀರಿ ಎನ್ನುವುದಕ್ಕೆ ಇದು ಸಾಕ್ಷಿಯಲ್ಲವೇ ಎಂದು ಕುಟುಕಿದರು.

ಕುಮಾರಸ್ವಾಮಿ ಅವರನ್ನು ಗಲೀಜು ಎನ್ನುವುದಾಗಿ ಸಚಿವರು ಸಂಬೋಧಿಸಿದ್ದಾರೆ. ೨೦೦೪ರಲ್ಲಿ ಮಂತ್ರಿ ಮಾಡುವಂತೆ ಕುಮಾರಸ್ವಾಮಿ ಕಾಲು ಹಿಡಿದಿದ್ದಿರಿ. ಈಗ ಕುಮಾರಸ್ವಾಮಿ ಅವರನ್ನು ನಿಂದಿಸುತ್ತಿರುವ ನಿಮ್ಮ ಗಲೀಜೆಷ್ಟಿದೆ ಎಂದು ಅರ್ಥ ಮಾಡಿಕೊಳ್ಳಿ. ನೀವೆಲ್ಲರೂ ಮಾಡಿರುವ ಗಲೀಜನ್ನು ಕುಮಾರಸ್ವಾಮಿ ತೊಳೆಯುತ್ತಿದ್ದಾರೆ. ಅವರು ಶ್ರೀಗಂಧದಂತೆ ಇದ್ದಾರೆ ಎಂದು ಬಣ್ಣಿಸಿದರು.

ಕಾಂಗ್ರೆಸ್ ಪಕ್ಷದೊಳಗೆ ಸೀಡಿ ಫ್ಯಾಕ್ಟರಿಯೇ ಇದೆ ಎಂಬುದಾಗಿ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಐದು ವರ್ಷ ನಾನೇ ಸಿಎಂ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದ ಸಿದ್ದರಾಮಯ್ಯನವರನ್ನು ದೆಹಲಿಗೆ ಕರೆಸಿಕೊಂಡು ರಾಜೀನಾಮೆ ನೀಡುವಂತೆ ಮಾಡಿದಿರಿ. ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಸ್ಟಿಂಗ್ ತಂತ್ರ ಮಾಡಿದ್ದೀರಿ. ಇದನ್ನು ಮಾಡಿಸಿದವರು ಯಾರು, ಹಿಂದಿನ ಉದ್ದೇಶವೇನು ಎನ್ನುವುದು ರಾಜ್ಯದ ಜನತೆಗೆ ತಿಳಿಯಬೇಕಾದರೆ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸುವಂತೆ ಒತ್ತಾಯಿಸಿದರು.

ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು. ಹಾಗಂತ ಅವರು ಪರಸ್ಪರ ಭೇಟಿಯಾಗುವುದರಲ್ಲಿ ತಪ್ಪೇನಿದೆ. ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಹೇಗೆ ಕೆಳಗೆ ಇಳಿಸಿದಿರಿ, ಏನೇಲ್ಲಾ ಪ್ಲ್ಯಾನ್ ಮಾಡಿದ್ದೀರಿ ಎಂಬ ಬಗ್ಗೆ ಹೇಳಬೇಕೆಲ್ಲವೇ ಎಂದು ನಯವಾಗಿಯೇ ಚುಚ್ಚಿದರು.

ನಿಜವಾದ ರೈತಪರ ನಾಯಕರೆಂದರೆ ಕುಮಾರಸ್ವಾಮಿ. ೨೦೧೮ರಲ್ಲಿ ಸಿದ್ದರಾಮಯ್ಯ ಜಾರಿಗೊಳಿಸಿದ ಕಾರ್ಯಕ್ರಮಗಳನ್ನೂ ಮುಂದುವರೆಸಿ ರೈತರ ೨೫ ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದರು. ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರ ಮನೆಗಳಿಗೆ ತೆರಳಿ ನೆರವು ನೀಡಿದರು. ೨೦೨೩ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಎಷ್ಟು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಷ್ಟು ಮಂದಿ ರೈತರಿಗೆ ಹಣಕಾಸಿನ ನೆರವು ನೀಡಿದ್ದೀರಿ. ೨೫೦೦ ರು. ಬರಪರಿಹಾರ ಘೋಷಿಸಿ ಇದುವರೆಗೂ ಕೊಡದಿರುವುದಕ್ಕೆ ಕಾರಣವೇನು. ಕುಮಾರಸ್ವಾಮಿ ಮಾಡಿರುವ ರೈತಪರ ಕಾರ್ಯದಲ್ಲಿ ಒಂದನ್ನು ಸಚಿವ ಚಲುವರಾಯಸ್ವಾಮಿ ಮಾಡಿ ತೋರಿಸಿದ್ದಾರೆಯೇ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಹೆಚ್.ಟಿ.ಮಂಜು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಬಿ.ಆರ್.ರಾಮಚಂದ್ರ ಇದ್ದರು.

ಸರ್ಕಾರದಿಂದ ತನಿಖೆ ದಿಕ್ಕುತಪ್ಪಿಸುವ ತಂತ್ರ: ಎಚ್.ಟಿ.ಮಂಜು

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ಟಿಂಗ್ ಮಾಡಿದ್ದು ನಾನೇ ಎಂದು ನೇರವಾಗಿ ತಪ್ಪೊಪ್ಪಿಕೊಂಡಿರುವ ವ್ಯಕ್ತಿಯನ್ನು ಬಿಟ್ಟು ಬೇರೆಯವರನ್ನು ಬಂಧಿಸುವ ಮೂಲಕ ತನಿಖೆಯನ್ನು ದಿಕ್ಕುತಪ್ಪಿಸುವ ಕೆಲಸ ಸರ್ಕಾರದಿಂದ ನಡೆಯುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ಆರೋಪಿಸಿದರು.

ಸ್ಟಿಂಗ್ ಆಪರೇಷನ್ ಮಾಡಿಸಿದವರು ಯಾರು, ಏಕೆ ಮಾಡಿಸಿದರು ಎಂಬ ದಿಕ್ಕಿನಲ್ಲಿ ತನಿಖೆಯನ್ನೇ ನಡೆಸದೆ ಜೆಡಿಎಸ್‌ನವರನ್ನು ಗುರಿಯಾಗಿಸಿಕೊಂಡು ಬಂಧನ ಮಾಡಲಾಗುತ್ತಿದೆ. ಪ್ರಮುಖ ಆರೋಪಿಯ ರಕ್ಷಣೆಗೆ ಸರ್ಕಾರವೇ ನಿಂತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಇದರಿಂದ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಕುಮಾರಸ್ವಾಮಿ ಅವರು ಸ್ಟಿಂಗ್ ಹಿಂದೆ ಯಾರಿದ್ದಾರೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತಿದ್ದಾರೆ. ಆದರೂ, ಸತ್ಯದ ಹಾದಿಯಲ್ಲಿ ತನಿಖೆಯನ್ನೇ ನಡೆಸುತ್ತಿಲ್ಲ. ಗೃಹ ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತನಿಖೆಯನ್ನು ಹಳ್ಳ ಹಿಡಿಸುವುದೇ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದ ಅವರು, ಅನೇಕ ಇಲಾಖೆ ಅಧಿಕಾರಿಗಳನ್ನೂ ಹನಿಟ್ರ್ಯಾಪ್‌ಗೆ ಒಳಪಡಿಸಿಟ್ಟುಕೊಂಡಿದ್ದೀರಿ. ಈ ಹಂತದಲ್ಲಿ ಸರ್ಕಾರದ ಬಗ್ಗೆ ನಮಗೆ ಭರವಸೆ, ನಂಬಿಕೆ ಇಲ್ಲ. ಸ್ಟಿಂಗ್ ಆಪರೇಷನ್ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯಬೇಕಾದರೆ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.