ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿರವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆಂದು ಹಗುರವಾಗಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಕುಟುಂಬದವರು ಕೇತಗಾನಹಳ್ಳಿ ತೋಟದಲ್ಲಿ ಆಲೂಗಡ್ಡೆ, ಬದನೆಕಾಯಿ ಬೆಳೆದು ನೂರಾರು ಕೋಟಿ ಸಂಪಾದನೆ ಮಾಡಿದ್ದಾರಾ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ, ಮಾಜಿ ಶಾಸಕ ಕೆ.ರಾಜು ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು 2004ರಲ್ಲಿ ರಾಮನಗರ ಕ್ಷೇತ್ರಕ್ಕೆ ಬಂದಾಗ ಅವರ ಆರ್ಥಿಕ ಪರಿಸ್ಥಿತಿ ಏನಿತ್ತು. ಈಗ ಏನಿದೆ ಎಂಬುದನ್ನು ಅವಲೋಕಿಸಲಿ. ಅವರ ಪತ್ನಿ ಅನಿತಾ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಬಳಿ ನೂರಾರು ಕೋಟಿ ರುಪಾಯಿ ಆಸ್ತಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಕುಟುಂಬದವರು ನೂರಾರು ಕೋಟಿ ರುಪಾಯಿ ಆಸ್ತಿ ಸಂಪಾದನೆ ಮಾಡಿದರೂ ಅವರೆಲ್ಲರು ಸತ್ಯಹರಿಶ್ಚಂದ್ರರು. ಬೇರೆಯವರು ಆಸ್ತಿ ಮಾಡಿದರೆ ಲೂಟಿಕೋರರು. ಕೇತಗಾನಹಳ್ಳಿ ತೋಟದಲ್ಲಿ ಆಲೂಗಡ್ಡೆ ಮತ್ತು ಬದನೆಕಾಯಿ ಬೆಳೆದು ಹೇಗೆ ನೂರಾರು ಕೋಟಿ ಸಂಪಾದನೆ ಮಾಡಬಹುದು ಎಂಬುದನ್ನು ರೈತರಿಗೂ ಹೇಳಿಕೊಡಲಿ ಎಂದು ಲೇವಡಿ ಮಾಡಿದರು.

ರೈತನ ಮಗ ಅಂತ ಹೇಳಿಕೊಂಡು ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದು ಎರಡು ಬಾರಿ ಮುಖ್ಯಮಂತ್ರಿಯಾದರು. ಈ ಎರಡೂ ಕ್ಷೇತ್ರಗಳಲ್ಲಿ ಒಂದೇ ಒಂದು ನೀರಾವರಿ ಯೋಜನೆ ಜಾರಿಗೆ ತರಲಿಲ್ಲ. ರೈತರನ್ನು ಉದ್ಧಾರ ಮಾಡಲು ಜನ್ಮ ತಾಳಿರುವ ದೇವೇಗೌಡರ ಕುಟುಂಬದ ಮಗ ಮಾಡಲಾಗದ ನೀರಾವರಿ ಕೆಲಸವನ್ನು ಸಾಮಾನ್ಯ ಶಿಕ್ಷಕನ ಮಗನಾದ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಡಿ ತೋರಿಸಿದ್ದಾರೆ ಎಂದರು.

ಕುಮಾರಸ್ವಾಮಿ ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಅನುಭವದ ಕೊರತೆಯಿಂದ ಬಿಡದಿ ಟೌನ್ ಶಿಪ್ ಘೋಷಣೆ ಮಾಡಿದ್ದರೆಂದು ಒಪ್ಪಿಕೊಳ್ಳೋಣ. 2018ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗಲಾದರು ಟೌನ್ ಶಿಪ್ ಯೋಜನೆ ಕೈಬಿಟ್ಟು ಏಕೆ ರೈತರ ಹಿತ ಕಾಪಾಡಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ 19 ವರ್ಷಗಳಿಂದ ಭೂಮಿ ಮಾರಾಟ ಮಾಡಲಾಗದೆ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ನ್ಯಾಯ ಒದಗಿಸಬೇಕೆಂದು ಟೌನ್ ಶಿಪ್ ಯೋಜನೆಗೆ ವೇಗ ನೀಡಿದೆ.


ಈ ಯೋಜನೆ ಸಾಕಾರಗೊಂಡರೆ ಡಿ.ಕೆ.ಶಿವಕುಮಾರ್ ಅವರಿಗೆ ಹೆಸರು ಬರುತ್ತದೆ. ಇದನ್ನು ಸಹಿಸದ ಕುಮಾರಸ್ವಾಮಿ ತಮ್ಮ ಅನುಯಾಯಿಗಳು ಮತ್ತು ಕಾರ್ಯಕರ್ತರನ್ನು ಛೂ ಬಿಟ್ಟು ಜನರಿಗೆ ಮನರಂಜನೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಡಿಕೆಶಿ ಅವರನ್ನು ಟೀಕೆ ಮಾಡುತ್ತಿರುವ ಪ್ರತಿಯೊಬ್ಬರ ಹಿನ್ನೆಲೆ ಏನೆಂದು ಹೇಳಿದರೆ ಅವರೆಲ್ಲರು ಕ್ಷೇತ್ರಕ್ಕೆ ಕಾಲಿಡಲು ಆಗುವುದಿಲ್ಲ ಎಂದು ಕೆ.ರಾಜು ಟಾಂಗ್ ನೀಡಿದರು.

ರೈತರಿಗೆ ಅನ್ಯಾಯ ಮಾಡಿದ್ದು ಡಿಕೆಶಿ ಅಲ್ಲ ಎಚ್ಡಿಕೆ :

ಬಮೂಲ್ ನಿರ್ದೇಶಕ ಪಿ.ನಾಗರಾಜ್ ಮಾತನಾಡಿ, ಬಿಡದಿ ಟೌನ್ ಶಿಪ್ ಯೋಜನೆ ಜಾರಿಗೆ ತಂದು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಭಾಗದ ಭೂಮಿಯನ್ನು ರೆಡ್ ಜೋನ್ ಮಾಡಿದರು. ಅಂದಿನಿಂದ ಇಲ್ಲಿವರೆಗೆ ಭೂಮಿ ಬೆಲೆ ಎಕರೆಗೆ 30 - 40 ಲಕ್ಷ ರುಪಾಯಿ ಇದೆ. ರೆಡ್ ಜೋನ್ ಇಲ್ಲದೆ ಹೋಗಿದ್ದರೆ ಎಕೆರೆಗೆ 5-6 ಕೋಟಿ ರುಪಾಯಿ ಬೆಲೆ ಸಿಗುತ್ತಿತ್ತು. ಭೂಮಿ ಬೆಲೆ ಕುಸಿಯಲು ಕುಮಾರಸ್ವಾಮಿ ಹೊಣೆಗಾರರು ಎಂದು ಟೀಕಿಸಿದರು.

ಡಿ.ಕೆ.ಶಿವಕುಮಾರ್ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ರೈತರ ಭೂಮಿ ಕಸಿದುಕೊಳ್ಳಲು ಹೊರಟಿಲ್ಲ. ಬದಲಿಗೆ ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯಯುತವಾದ ಬೆಲೆ ಕೊಡಿಸಲು ಹೋರಾಟ ಮಾಡುತ್ತಿದ್ದಾರೆ. ಆ ಭಾಗದ ರೈತರಿಗೆ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆಯೇ ಹೊರತು ಡಿ.ಕೆ.ಶಿವಕುಮಾರ್ ಅಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ಯಾರೂ ಆಸ್ತಿ ಮಾಡಿಲ್ಲವೇ? ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ಕೇತಗಾನಹಳ್ಳಿ ಮತ್ತು ಬೈರಮಂಗಲದಲ್ಲಿರುವ ಜಮೀನನ್ನು ರೈತರಿಗೆ ವಾಪಸ್ ಕೊಟ್ಟು ಬಿಡಿ ನೋಡೋಣ ಎಂದು ಪಿ.ನಾಗರಾಜ್ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ನಿಜಾಮುದ್ದೀನ್, ಆಯಿಷಾ ಬಾನು, ಕೆಪಿಸಿಸಿ ಸದಸ್ಯ ರಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಎಚ್. ರಾಜು, ಮುಖಂಡರಾದ ನರಸಿಂಹಮೂರ್ತಿ, ಜಯಣ್ಣ, ಪ್ರಾಣೇಶ್, ಸಿಎನ್ ಆರ್ ಗಂಗಾಧರ್, ಪರ್ವೀಜ್ ಪಾಷ, ಪ್ರಭು, ರೈಡ್ ನಾಗರಾಜ್, ಬೈರೇಗೌಡ, ಕೆ.ರವಿ, ಗುರುಪ್ರಸಾದ್, ಗಿರೀಶ್, ರಂಜಿತ್, ಶಿವಶಂಕರ್ , ರವಿಕುಮಾರ್, ಗುಡ್ಡೆ ವೆಂಕಟೇಶ್ ಇದ್ದರು.

ಕೋಟ್ ..........

ಡಿ.ಕೆ.ಶಿವಕುಮಾರ್ ಸೋಲಿಲ್ಲದ ಸರದಾರನಾಗಿ 8 ಬಾರಿ ವಿಧಾನಸಭೆ ಪ್ರವೇಶಿಸಿದವರು. ವಿವಿಧ ಖಾತೆಗಳ ಸಚಿವರಾಗಿ ನಾಡಿನ ಅಭಿವೃದ್ಧಿಗಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಕಾಲಿನ ಧೂಲಿಗೂ ಸಮನಲ್ಲದ ಹಾಗೂ ರಾಜಕಾರಣದಲ್ಲಿ ಇನ್ನೂ ಕಣ್ಣು ಬಿಡದ ಬಾಲಂಗೋಚಿಗಳು ಹಗುರವಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದ.

-ಚೇತನ್ ಕುಮಾರ್, ಅಧ್ಯಕ್ಷರು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ

ಕೋಟ್ ...

ಡಿ.ಕೆ.ಶಿವಕುಮಾರ್ ಉಸಿರಿರುವರೆಗೂ ಮಾಜಿ ಆಗಲ್ಲ. ಇನ್ನು ಬೇಕಾದರೆ ಮೂರು ಬಾರಿ ಪಲ್ಟಿ ಹೊಡೆದಿರುವ ನೀನು (ನಿಖಿಲ್ ಮತ್ತೆ ಪಲ್ಟಿ ಹೊಡೆಯುತ್ತೀಯಾ. ಹಿರಿಯ ನಾಯಕರು ಮತ್ತು ಜನರಿಗೆ ಗೌರವ ಕೊಡುವುದನ್ನು ಕಲಿ. ನಮಗೂ ವಾರ್ನಿಂಗ್ ಕೊಡೋದು ಗೊತ್ತು , ಕೌಂಟರ್ ಅಟ್ಯಾಕ್ ಮಾಡೋದು ಗೊತ್ತು. ನೀವೆಲ್ಲಾ ಮಳೆಗಾಲದ ಚಿಟ್ಟೆಗಳಂತೆ ಸಾಮಾಜಿಕ ಜಾಲತಾಣಗಲ್ಲಿ ಹಾರಾಡಬಹುದು ಅಷ್ಟೆ. ಜನರ ಮಧ್ಯೆ ಹೈಲೆಟ್ ಆಗಲು ಸಾಧ್ಯವಿಲ್ಲ.

- ಪಿ.ನಾಗರಾಜ್, ನಿರ್ದೇಶಕರು, ಬಮೂಲ್

25ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ, ಮಾಜಿ ಶಾಸಕ ಕೆ.ರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.