ಸಾರಾಂಶ
ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿ ಅವರೇ ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದು, ಬಿಡದಿ ಟೌನ್ ಶಿಪ್ ಅನಿವಾರ್ಯ, ರೈತರಿಗೆ ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಶೇ. 40ರಷ್ಟು ಭೂಮಿ ಕೊಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ಹೀಗಾಗಿ ಅವರ ಕನಸನ್ನು ನಾವು ನನಸು ಮಾಡುತ್ತಿದ್ದೇವೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು.
ಬಿಜಿಎಸ್ ವೃತ್ತದಲ್ಲಿ ಬಿಡದಿ ಮುಖ್ಯ ರಸ್ತೆಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಗೆ ಭೂಮಿ ನೀಡಿದ ರೈತರಿಗೆ ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಶೇ. 40ರಷ್ಟು ಭೂಮಿ ಕೊಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ಆದರೆ, ನಮ್ಮ ಸರ್ಕಾರ ಕುಮಾರಸ್ವಾಮಿ ಹೇಳಿದಕ್ಕಿಂತಲೂ ಶೇಕಡ 10ರಷ್ಟು ಹೆಚ್ಚುವರಿ ಅಂದರೆ ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಶೇ.50ರಷ್ಟು ಭೂಮಿ, ವಾಣಿಜ್ಯ ಕಟ್ಟಡ ನಿರ್ಮಾಣದಲ್ಲಿ ಶೇ.45ರಷ್ಟು ಕೊಡಲು ಆದೇಶಿಸಿದೆ. ಹೀಗಿದ್ದರೂ ರೈತರನ್ನು ಎತ್ತಿಕಟ್ಟಿ ರಾಜಕೀಯ ಮಾಡುವುದು ಸರಿಯಲ್ಲ. ಜೆಡಿಎಸ್‌ನವರೇ ನಮಗೆ ಬೆಂಬಲ ಕೊಡಬೇಕು ಎಂದರು.ಕುಮಾರಸ್ವಾಮಿ 2ನೇ ಬಾರಿ ಮುಖ್ಯಮಂತ್ರಿ ಆದಾಗಲೂ ಬೈರಮಂಗಲ ಕ್ರಾಸ್‌ನಲ್ಲಿ ಬಿಡದಿ ಟೌನ್ ಶಿಪ್ ನನ್ನ ಕನಸಿನ ಕೂಸು. ಯೋಜನೆ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಕುಮಾರಸ್ವಾಮಿ ಕನಸನ್ನು ನಾವು ನನಸು ಮಾಡುತ್ತಿದ್ದೇವೆ.
ಟೌನ್ ಶಿಪ್ ಯೋಜನೆಗೆ ನೋಟಿಫಿಕೇಷನ್ ಮಾಡದೆ ಆ ಭಾಗದ ಭೂಮಿ ರೆಡ್ ಜೋನ್ ಗೆ ಹೇಗೆ ಸೇರ್ಪಡೆಯಾಯಿತು ಎಂದು ಪ್ರಶ್ನಿಸಿದರು.ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಗಳ ರೈತರ ಅಭಿಪ್ರಾಯಗಳು, ಅನಿಸಿಕೆಗಳ ಮಾಹಿತಿ ಪಡೆದಿದ್ದೇನೆ. ಅವರ ಅಪೇಕ್ಷೆಯಂತೆ ಭೂಮಿಗೆ ಸೂಕ್ತ ದರ ನಿಗದಿ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇನೆ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್ ಯೋಜನೆಯನ್ನು ಒಪ್ಪಿದ್ದಾರೆ ಎಂದು ತಿಳಿಸಿದರು.
ಬೇನಾಮಿ ಆಸ್ತಿ ಮಾಡಿರುವ ದಾಖಲೆಗಳಿದ್ದರೆ ಕುಮಾರಸ್ವಾಮಿ ಸಿಬಿಐ ತನಿಖೆಗೆ ನೀಡಲಿ. ನಾವೇನು ಮಾಡಲು ಆಗಲ್ಲ. ಅವರ ಪತ್ನಿ ಮತ್ತು ಪುತ್ರ ಬರೆದಿರುವುದನ್ನು ನೋಡಿದ್ದೀರಾ. ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿರುವುದು ಜಗಜ್ಜಾಹೀರಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಕೊಟ್ಟಿರುವವರು ಯಾರೆಂದು ಅವರಿಗೆ ಗೊತ್ತಿದೆ. ಬರೀ ರಾಜಕೀಯಕ್ಕಾಗಿ ಮಾತನಾಡಬಾರದು, ನಾವೆಲ್ಲರೂ ಗಾಜಿನ ಮನೆಯಲ್ಲಿ ಕುಳಿತಿದ್ದೇವೆ ಎಂಬುದನ್ನು ಅವರು ಮರೆಯಬಾರದು ಎಂದು ಬಾಲಕೃಷ್ಣ ತಿರುಗೇಟು ನೀಡಿದರು.ಬಿಡದಿ ಪುರಸಭೆ ವ್ಯಾಪ್ತಿಯ ಎಲ್ಲ ರಸ್ತೆಗಳ ಅಭಿವೃದ್ದಿ, 10 ಕೋಟಿ ವೆಚ್ಚದಲ್ಲಿ ನೆಲ್ಲಿಗುಡ್ಡಾ ಕೆರೆ ಅಭಿವೃದ್ಧಿ, ಪಾರ್ಕ್, ವಾಕಿಂಗ್ ಪಾಥ್ ನಿರ್ಮಾಣ ಮಾಡುವ ಮೂಲಕ ಬಿಡದಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಲಾಗುತ್ತಿದೆ ಎಂದರು.
ಪುರಸಭೆ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 2 ಕೋಟಿ ರು. , ಪಟ್ಟಣದಲ್ಲಿ 45 ಕೋಟಿ ವೆಚ್ಚದಲ್ಲಿ ಯುಜಿ ಕೇಬಲ್ ಕಾಮಗಾರಿ ಸೇರಿದಂತೆ 100 ಕೋಟಿ ವೆಚ್ಚದ ಕಾಮಗಾರಿಗಳ ಶಂಕು ಸ್ಥಾಪನೆಗೆ ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿಗಳನ್ನು ಆಹ್ವಾನಿಸಲಾಗುವುದು ಎಂದು ಬಾಲಕೃಷ್ಣ ಹೇಳಿದರು.ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ ಮಾತನಾಡಿ, ಹಲವು ದಿನಗಳಿಂದ ಬಹುಮುಖ್ಯವಾಗಿ ಆಗಬೇಕಿರುವ ಬಿಡದಿ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ 1.66 ಕೋಟಿ ರು., ಕೇತಿಗಾನಹಳ್ಳಿ ಮುಖ್ಯ ರಸ್ತೆಗೆ 50 ಲಕ್ಷ ರು., ಅನ್ನಪೂರ್ಣೇಶ್ವರಿ ದೇವಾಲಯದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 50 ಲಕ್ಷ ರು., ವಾರ್ಡ್ ನಂ.11ರ ಸರ್ಕಾರಿ ಶಾಲೆಯ ಕಾಂಪೌಂಡ್ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿಗೆ 20 ಲಕ್ಷ ರು., ವಾರ್ಡ್ ನಂ.13 ಯೋಗೇಶ್ವರ್ ಬಡಾವಣೆಯ ರಸ್ತೆ ಅಭಿವೃದ್ಧಿಗೆ 90 ಲಕ್ಷ ರು.ಗಳ ಅಭಿವೃದ್ಧಿ ಕೆಲಸಗಳಿಗೆ ಶಾಸಕರು ಚಾಲನೆ ನೀಡಿದ್ದು ಶಾಶ್ವತ ಕೆಲಸಗಳಾಗಿವೆ ಎಂದು ಹೇಳಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ದೇವರಾಜು, ಹೊಂಬಯ್ಯ, ಎನ್.ಕುಮಾರ್, ಬಿಂದಿಯಾ, ನವೀನ್ ಕುಮಾರ್ , ಶ್ರೀನಿವಾಸ್, ನಾಮ ನಿರ್ದೇಶಿತ ಸದಸ್ಯರಾದ ರಮೇಶ್, ರೇಣುಕಯ್ಯ, ಮುಖಂಡರಾದ ರಂಗಸ್ವಾಮಣ್ಣ, ಕೆ.ಟಿ.ರವಿ, ಬೆಟ್ಟಸ್ವಾಮಿಗೌಡ, ಉರಗಹಳ್ಳಿಸ್ವಾಮಿ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ಶೋಭಾ, ಮುಖ್ಯಾಧಿಕಾರಿ ಮೀನಾಕ್ಷಿ, ಎಂಜಿನಿಯರ್ ಶಿಲ್ಪ ಹಾಜರಿದ್ದರು.( ಕೋಟ್ ಅನ್ನು ಪ್ಯಾನಲ್‌ನಲ್ಲಿ ಬಳಸಿ)
ಕೋಟ್...............ಬಿಡದಿ ಟೌನ್‌ಶಿಪ್ ವಿಷಯವಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾದಾಗ ಎಷ್ಟು ಬಾರಿ ರೈತರ ಸಭೆಗಳನ್ನು ನಡೆಸಿದ್ದಾರೆ. ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಪೊಳ್ಳು ಭಾಷಣ ಮಾಡಿಕೊಂಡು ಸುಳ್ಳು ಹೇಳುವುದು ಸರಿಯಲ್ಲ. ದರ ನಿಗದಿ ಆದ ಮೇಲೆ ಪತ್ರಿಕಾಗೋಷ್ಠಿಯಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ.
-ಬಾಲಕೃಷ್ಣ, ಮಾಗಡಿ ಶಾಸಕರು29ಕೆಆರ್ ಎಂಎನ್ 9.ಜೆಪಿಜಿ
ಬಿಜಿಎಸ್ ವೃತ್ತದಲ್ಲಿ ಬಿಡದಿ ಮುಖ್ಯ ರಸ್ತೆಗೆ ಶಾಸಕ ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು.