ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಮೈಕ್ರೋ ಫೈನಾನ್ಸ್ ಹಾವಳಿಯಿಂದ ಕೆಲವು ಹಳ್ಳಿಗಳ ಜನರು ಗ್ರಾಮ ತೊರೆಯವುದರ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಈ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೇಂದ್ರದ ಉಕ್ಕು, ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.ಪಟ್ಟಣದ ಪುರಸಭೆ ಬಯಲು ರಂಗಮಂದಿರದ ಆವರಣದಲ್ಲಿ ಜೆಡಿಎಸ್ ವತಿಯಿಂದ ಕ್ಷೇತ್ರದ ಮತದಾರರಿಗೆ ಅಯೋಜಿಸಿದ್ದ ಕೃತಜ್ಞತೆ ಮತ್ತು ತಮಗೆ ಏರ್ಪಡಿಸಿದ್ದ ಅಭಿಮಾನದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾತ್ತೇತ್ತಿದರೆ ಚಾಮರಾಜನಗರಕ್ಕೆ 28 ಬಾರಿ ಹೋಗಿದ್ದೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಲ್ಲಿನಜನರು ಮೈಕ್ರೋ ಪೈನಾನ್ಸ್ ಹಾವಳಿಗೆ ಊರನ್ನೆ ತೊರೆಯುತ್ತಿದ್ದು, ಅಲ್ಲಿಗೆ ನಿಮ್ಮ ಸಂಪುಟದ ಯಾವೊಬ್ಬ ಸದಸ್ಯನು ತೆರಳಿ ಸಮಸ್ಯೆ ಆಲಿಸುತ್ತಿಲ್ಲ, ಈಗಾಲಾದರು ಅಲ್ಲಿನನೊಂದ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡಿ ಅವರಿಗೆ ನಿಮ್ಮ ನುಡಿದಂತೆ ನಡೆದಿದ್ದೇವೆ ಎಂಬ ಹೇಳಿಕೆಯ ಮಾತು ಬೇಡ ಎಂದರು.ದೇಶದಲ್ಲಿಯೇ ಲಜ್ಜೆಗೆಟ್ಟ ಇಂತಹ ರಾಜ್ಯ ಸರ್ಕಾರ ನೋಡಿಲ್ಲ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಂತಹ ಕೆಟ್ಟ ಮತ್ತು ಭ್ರಷ್ಟ ಸರ್ಕಾರ ಹಿಂದೆ ಇರಲಿಲ್ಲ, ಮುಂದೆಯು ಬರುವುದಿಲ್ಲ ಎಂದು ವ್ಯಂಗ್ಯವಾಡಿದ ಕೇಂದ್ರ ಸಚಿವರು, ದೇಶದಲ್ಲಿಯೇ ಲಜ್ಜೆಗೆಟ್ಟ ಇಂತಹ ರಾಜ್ಯ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದು ಟೀಕಿಸಿದರು.ನಾನು ಕೇಂದ್ರ ಸಚಿವನಾದ ನಂತರ ರಾಜ್ಯದ ಹಲವು ಕಾರ್ಖಾನೆಗಳ ಪುನಶ್ಚೇತನ ಮತ್ತು ಪುನಾರಂಭಕ್ಕೆ ಒತ್ತುನೀಡಿದರೆ, ಅದಕ್ಕೆ ಅಡ್ಡಗಾಲು ಹಾಕುತ್ತಿರುವ ರಾಜ್ಯ ಸರ್ಕಾರ ಅಭಿವೃದ್ಧಿ ವಿರೋಧಿ ನೀತಿ ಅನುಸರಿಸುತ್ತಿದ್ದು, ಈವರೆಗೆ ನನ್ನ ಇಲಾಖೆಯಿಂದ ಕರ್ನಾಟಕಕ್ಕೆ ಅನುದಾನಕೇಳಲು ಮುಖ್ಯಮಂತ್ರಿ ಆದಿಯಾಗಿ ಯಾವೊಬ್ಬ ಸಚಿವನು ನನ್ನ ಭೇಟಿಯಾಗದಿರುವುದು ದುರುಂತ ವಿಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖಾಸಾಗಿ ಹಣಕಾಸು ಸಂಸ್ಥೆಗಳು ಮತ್ತು ಲೇವಾದೇವಿದಾರಿಂದ ಸಾಲಗಾರರು ಮತ್ತು ಬಡವರಿಗೆ ಮುಕ್ತಿ ದೊರಕಿಸಿ ಕೊಡಲು 2018ರಲ್ಲಿ ಋಣಮುಕ್ತಿ ಕಾಯ್ದೆ ಜಾರಿಗೆ ತರಲು ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಿ ಅದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದಾಗ ಅಧಿಕಾರದಿಂದ ಕೆಳಗಿಳಿಸಿದ ಕಾಂಗ್ರೆಸ್ ದುರ್ವರ್ತನೆ ಫಲವನ್ನು ಅನುಭವಿಸುವಂತೆ ಆಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಮಾತ್ತೆತ್ತಿದರೆ ನನ್ನ ಜೀವನತೆರದ ಪುಸ್ತಕವಾಗಿದ್ದು, ಯಾವುದೇ ಕಪ್ಪು ಚುಕ್ಕೆಗಳ ಇಲ್ಲದಿರುವುದರಿಂದ ಸತ್ಯ ಮೇವ ಜಯತೆ ಎನ್ನವವರ ಪುಸ್ತಕದ ಬದನೆಕಾಯಿ ಮತ್ತು ಬಂಡವಾಳ ಬಟ ಬಯಲಾಗಿದೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಟುಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಏಳಿಗೆ ಮತ್ತು ಇಂದಿನ ಸ್ಥಿತಿಗೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಾರಣರಾಗಿದ್ದು, ಅವರನ್ನು ರಾಜಕೀಯ ಮೂಲೆ ಗುಂಪು ಮಾಡಿ, ಮಾಜಿ ಪ್ರಧಾನ ಮಂತ್ರಿಗಳ ಎಚ್.ಡಿ. ದೇವೇಗೌಡರ ಬಗ್ಗೆಯೂ ರಾಜಕೀಯ ದ್ವೇಷ ಬೆಳಸಿಕೊಂಡಿದ್ದು ಇದು ಎಷ್ಟು ಸರಿಎಂದು ಕೇಳಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ನಂತರ ಮಾಜಿ ಸಚಿವ ಸಾ.ರಾ. ಮಹೇಶ್ ಅವರಿಗೆ ರಾಜಕೀಯ ಅಸಕ್ತಿ ಕಡಿಮೆಯಾಗಿದೆ, ಅವರಿಗೆ ರಾಜಕಾರಣ ಬೇಡದಿರಬಹುದು, ಆದರೆ ಅವರ ಅವಶ್ಯಕತೆ ಮತ್ತು ಸೇವೆ ಜಿಲ್ಲೆಯ ಜನತೆಗೆ ಅಗತ್ಯವಿದ್ದು, ಸಾ.ರಾ. ಮಹೇಶ್ ಮುಂದೆ ಸಕ್ರಿಯವಾಗಿ ಇರುತ್ತಾರೆ ಎಂದು ಪ್ರಕಟಿಸಿದರು.ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕ್ಷೇತ್ರದ ಜೆಡಿಎಸ್ ವತಿಯಿಂದ ಮತದಾರರ ಪರವಾಗಿ ಅವರದೇ ಭಾವಚಿತ್ರವಿರುವ ಬೆಳ್ಳಿಕಟ್ಟಿನ ಭಾರತ ಭೂಪಟ ನೀಡಿ ಅಭಿಮಾನದ ಅಭಿನಂದನೆ ಸಲ್ಲಿಸಲಾಯಿತು, ಅಲ್ಲದೆ ಎಲ್ಲ ವರ್ಗದ ಮತದಾರರ ಪರವಾಗಿ ಒಂದೊಂದು ಸಮುದಾಯದವರನ್ನು ಗೌರವಿಸಲಾಯಿತು.
ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಸಾ.ರಾ. ಮಹೇಶ್, ಎಂ.ಪಿ. ನಾಡಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಕೆ. ವಿವೇಕಾನಂದ, ಸಿ.ಎನ್. ಮಂಜೇಗೌಡ, ಮಾಜಿ ಸಂಸದ ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ಕೆ. ಮಹದೇವ್, ಕೆ. ಅನ್ನದಾನಿ, ಅಶ್ವಿನ್ ಕುಮಾರ್, ಎಂ.ಪಿ. ನಾಡಗೌಡ, ಕೆ.ಟಿ. ಶ್ರೀಕಂಠೇಗೌಡ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್ ಇದ್ದರು.