ಜಿಲ್ಲಾ ಸಚಿವರ ಆಸ್ಪತ್ರೆಯಲ್ಲೇ ಹುಟ್ಟಿದ್ದು, ದಾಖಲೆ ಪರಿಶೀಲಿಸಲಿ

| Published : Mar 29 2024, 12:51 AM IST

ಜಿಲ್ಲಾ ಸಚಿವರ ಆಸ್ಪತ್ರೆಯಲ್ಲೇ ಹುಟ್ಟಿದ್ದು, ದಾಖಲೆ ಪರಿಶೀಲಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವರ ಒಡೆತನದ ಆಸ್ಪತ್ರೆಯಲ್ಲೇ ನಾನು ಹುಟ್ಟಿದ್ದು, ಬೇಕಿದ್ದರೆ ದಾಖಲಾತಿಗಳನ್ನು ಪರಿಶೀಲಿಸಲಿ. ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ಸಚಿವರು ನೀಡಬಾರದು ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಗೂ ಅಹಿಂದ ಯುವ ನಾಯಕ ವಿನಯ್‌ಕುಮಾರ್ ಜಿ.ಬಿ. ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಹೊನ್ನಾಳಿ

ಜಿಲ್ಲಾ ಉಸ್ತುವಾರಿ ಸಚಿವರ ಒಡೆತನದ ಆಸ್ಪತ್ರೆಯಲ್ಲೇ ನಾನು ಹುಟ್ಟಿದ್ದು, ಬೇಕಿದ್ದರೆ ದಾಖಲಾತಿಗಳನ್ನು ಪರಿಶೀಲಿಸಲಿ. ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ಸಚಿವರು ನೀಡಬಾರದು ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಗೂ ಅಹಿಂದ ಯುವ ನಾಯಕ ವಿನಯ್‌ಕುಮಾರ್ ಜಿ.ಬಿ. ಹೇಳಿದರು.

ತಾಲೂಕಿನ ದಿಡಗೂರು, ಹರಳಹಳ್ಳಿ, ಬಿ.ಜೋಗಟ್ಟೆ, ಒಡೆಯರ ಹತ್ತೂರು, ಬೆನಕನಹಳ್ಳಿ ಗ್ರಾಮಗಳಲ್ಲಿ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮತದಾರರ ಪರಿಚಯವಿಲ್ಲದೆ ಹಾಗೂ ಕ್ಷೇತ್ರದ ಹಳ್ಳಿಗಳ ಪರಿಚಯ ಇಲ್ಲದಂಥವರಿಗೆ ಪಕ್ಷ ಮನ್ನಣೆ ನೀಡಿದರೆ, ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ಅಭ್ಯರ್ಥಿಯನ್ನು ಕ್ಷೇತ್ರಕ್ಕೆ ನೀಡಿದಂತಾಗುತ್ತದೆ ಎಂದರು.

ಜನಾಭಿಪ್ರಾಯ ಪರವಾಗಿ ಅವರ ಅಪೇಕ್ಷೆಯಂತೆ ಅಭ್ಯರ್ಥಿ ಇದ್ದಾಗ ಮಾತ್ರ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿಯಾಗಲು ಸಾಧ್ಯ. ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉದ್ಯೋಗ ಸೃಷ್ಟಿಯ ಅವಕಾಶಗಳಿದ್ದರೂ ಕುಟುಂಬ ರಾಜಕಾರಣವಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೇವಲ ಸ್ಥಾನಮಾನಗಳಿಗೆ ಮಾತ್ರ ಮೀಸಲಾಗಿರುವುದು ದುರಂತವಾಗಿದೆ. ಜಿಲ್ಲೆಯಲ್ಲಿ ಬಡತನ, ನಿರುದ್ಯೋಗ, ಜನರ ನಾಡಿಮಿಡಿತ ಅರಿತವರಿಗೆ ಮಾತ್ರ ಇಂತಹ ಸಮಸ್ಯೆಗಳು ಗಮನಕ್ಕೆ ಬರುತ್ತವೆ. ಸಮಸ್ಯೆಗಳಿಗೆ ಪರಿಹಾರ ಕೊಡಿಸಿದಾಗ ಮತದಾರರಿಗೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಅವಕಾಶಗಳು ಸಾಕಷ್ಟಿವೆ. ಗ್ರಾಮೀಣ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ದೊರೆಯದೇ ಹಾಗೂ ವಿದ್ಯಾವಂತ ಯುವಜನರು ಅವಕಾಶಗಳು ಸಿಗದೇ ಹಳ್ಳಿಗಳಲ್ಲಿ ಉಳಿದಿದ್ದಾರೆ. ಇದು ಪ್ರಜಾಪ್ರಭುತ್ವದ ದೊಡ್ಡ ದುರಂತ ಎಂದರು.

ಸ್ಪರ್ಧೆಗೆ ಗ್ರಾಮಸ್ಥರ ಒತ್ತಾಯ:

ದಿಡಗೂರು ಗ್ರಾಮಸ್ಥರು ಮಾತನಾಡಿ, ಯಾವುದೇ ಕಾರಣಕ್ಕೂ ಯಾವುದೇ ಒತ್ತಡಕ್ಕೂ ಮಣಿಯದೇ ಚುನಾವಣಾ ಸ್ಪರ್ಧೆಯಿಂದ ನೀವು ಹಿಂದೆ ಸರಿಯಬಾರದು. ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂದು ಒತ್ತಡ ಹಾಕಿದರೂ, ನಮಗೆ ನಿಮ್ಮಂಥ ಅಭಿವೃದ್ಧಿ ಕನಸನ್ನು ಹೊತ್ತು ಅಭಿವೃದ್ಧಿಯ ಕ್ಷೇತ್ರವನ್ನು ಮಾಡುವಂಥ ಯುವನಾಯಕರು ಬೇಕಾಗಿದ್ದಾರೆ. ಕೇವಲ ಸ್ಥಾನ-ಮಾನಗಳಿಗೆ ಸೀಮಿತವಾಗಿ ಕ್ಷೇತ್ರವೇ ಮರೆಯುವಂತಹ ಅಭ್ಯರ್ಥಿಗಳು ನಮಗೆ ಬೇಕಾಗಿಲ್ಲ. ಈ ಕ್ಷೇತ್ರದ ಅಭಿವೃದ್ಧಿ ಆಗಬೇಕಾಗಿದೆ. ನೀವು ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂದು ವಿನಯಕುಮಾರ್‌ ಅವರನ್ನು ಒತ್ತಾಯಿಸಿದರು.

ರಥೋತ್ಸವದಲ್ಲಿ ಭಾಗಿ:

ಹೊನ್ನಾಳಿ ತಾಲೂಕಿನ ಬೆನಕನಹಳ್ಳಿಯಲ್ಲಿ ಶ್ರೀ ಬೆನಕೇಶ್ವರಸ್ವಾಮಿ ಸೇವಾ ಸಮಿತಿ ವತಿಯಿಂದ ಬೆನಕೇಶ್ವರಸ್ವಾಮಿ ರಥೋತ್ಸವ ನಡೆಯಿತು. ಅನ್ನ ಸಂತರ್ಪಣೆ, ಚೌಲ ಇತ್ಯಾದಿ ಧಾರ್ಮಿಕ ಕಾರ್ಯಗಳಲ್ಲಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ ರೀಚ್ ವಿಭಾಗದ ಕರ್ನಾಟಕ ಉಪಾಧ್ಯಕ್ಷರೂ, ಅಹಿಂದ ಯುವ ನಾಯಕ ಜಿ.ಬಿ. ವಿನಯಕುಮಾರ್‌ ಪಾಲ್ಗೊಂಡು ದರ್ಶನ ಪಡೆದರು.

- - --27ಎಚ್.ಎಲ್.ಐ3ಎ.: ಬೆನಕನಹಳ್ಳಿ ರಥೋತ್ಸವದಲ್ಲಿ ಅಹಿಂದ ಯುವನಾಯಕ ವಿನಯಕುಮಾರ್ ಪಾಲ್ಗೊಂಡರು.