ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ, ಹಲವರಿಗೆ ಗಾಯ

| Published : Aug 19 2024, 12:53 AM IST

ಸಾರಾಂಶ

ಬಸ್‌ ಚಾಲಕರ ಕೈ ಮತ್ತು ಕಾಲುಗಳಿಗೆ ತೀವ್ರ ಸ್ವರೂಪರ ಗಾಯಗಳಾಗಿವೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಲವರ ತಲೆಗೆ ಗಾಯಗಳಾಗಿವೆ. ಇನ್ನೂ ಹಲವರ ಹಲ್ಲು ಮುರಿದು, ಮುಖಕ್ಕೆ ಗಾಯವಾಗಿರುವ ಘಟನೆ ಸಂಭವಿಸಿದೆ

ಲಕ್ಷ್ಮೇಶ್ವರ: ಸಮೀಪದ ಗೋವನಾಳ ಮತ್ತು ಯಲುವಿಗಿ ಗ್ರಾಮದ ಹತ್ತಿರ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರೂ ಚಾಲಕರು ಸೇರಿದಂತೆ ಸುಮಾರು 15 ಜನರಿಗೆ ಗಾಯಗಳಾಗಿರುವ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಸಮೀಪದ ಯಲುವಿಗಿ ರೈಲ್ವೆ ಕೆಳಸೇತುವೆಯ ಕೆಳಭಾಗದಲ್ಲಿ ಗದಗ-ಬೆಂಗಳೂರು ಹಾಗೂ ಹಾವೇರಿ-ಗದಗ ಕಡೆಗೆ ಹೊರಟಿದ್ದ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರ ಕೈಕಾಲು ಮುರಿದಿವೆ. ಬಸ್‌ ಚಾಲಕರ ಕೈ ಮತ್ತು ಕಾಲುಗಳಿಗೆ ತೀವ್ರ ಸ್ವರೂಪರ ಗಾಯಗಳಾಗಿವೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಲವರ ತಲೆಗೆ ಗಾಯಗಳಾಗಿವೆ. ಇನ್ನೂ ಹಲವರ ಹಲ್ಲು ಮುರಿದು, ಮುಖಕ್ಕೆ ಗಾಯವಾಗಿರುವ ಘಟನೆ ಸಂಭವಿಸಿದೆ.

ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಈರಣ್ಣ ರಿತ್ತಿ ಹಾಗೂ ಗೋವನಾಳ ಗ್ರಾಮದ ನಿರ್ಗಮಿತ ಅಧ್ಯಕ್ಷ ಮಂಜನಗೌಡ ಕೆಂಚನಗೌಡರ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಸಮೀಪದ ಲಕ್ಷ್ಮೇಶ್ವರ ಹಾಗೂ ಸವಣೂರಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಿದ್ದಾರೆ.

ಅಪಘಾತಕ್ಕೆ ಕಾರಣ: ಯಲುವಿಗಿ ರೈಲ್ವೆ ಕೆಳಸೇತುವೆಯಲ್ಲಿ ಎರಡು ಭಾಗಗಳಿದ್ದು, ಬಸ್‌ಗಳು ಒಂದೇ ಮಾರ್ಗದಲ್ಲಿ ಸಂಚಾರ ಮಾಡಿದ್ದು ಹಾಗೂ ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂದು ಬಸ್‌ನಲ್ಲಿದ್ದ ಪ್ರಯಾಣಿಕರು ದೂರಿದರು.