ಬೈಕ್ ಗಳ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

| Published : May 28 2024, 01:02 AM IST

ಸಾರಾಂಶ

ಗುರುಮಠಕಲ್ ಪಟ್ಟಣದ ಸರಕಾರಿ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಗಾಯಾಳುಗಳ ಆರೋಗ್ಯವನ್ನು ಶಾಸಕ ಶರಣಗೌಡ ಕಂದಕೂರು ಅವರು ವಿಚಾರಿಸಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಪಟ್ಟಣದ ಚಪೇಟ್ಲಾ ಕ್ರಾಸ್ ಹತ್ತಿರ ಎರಡು ಬೈಕ್ ಗಳು ಪರಸ್ಪರ ಡಿಕ್ಕಿ ಹೊಡೆದು ರಸ್ತೆ ಮಧ್ಯೆದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಗಾಯಾಳುಗಳನ್ನು ಕಂಡು ಶಾಸಕ ಶರಣಗೌಡ ಕಂದಕೂರು ಅವರು ಆಸ್ಪತ್ರೆಗೆ ಸೇರಿಸಿ, ಸೂಕ್ತ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಯಾದಗಿರಿಯಿಂದ ಗುರುಮಠಕಲ್ ಶಾಸಕರ ಜನ ಸಂಪರ್ಕ ಕಚೇರಿಗೆ ಶಾಸಕ ಶರಣಗೌಡ ಕಂದಕೂರು ಅವರು ಆಗಮಿಸುತ್ತಿದ್ದ ವೇಳೆ, ದಾರಿಯಲ್ಲಿ ಬೈಕ್ ಗಳು ಮುಖಾನುಕಿ ಡಿಕ್ಕಿ ಹೊಡೆದು ಸವಾರರಿಬ್ಬರು ಬಿದ್ದಿರುವುದನ್ನು ಕಂಡು ವಾಹನದಿಂದ ಕೆಳಗಿಳಿದು ತ್ವರಿತವಾಗಿ ಆಂಬುಲೆನ್ಸ್ ಕರೆಸಿ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿ ಖುದ್ದಾಗಿ ತಾವೇ ಮುಂದೆ ನಿಂತು ಆರೋಗ್ಯ ತಪಾಸಣೆ ಮಾಡಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

ಚಿತ್ತಾಪುರ ತಾಲೂಕಿನ ರಾಮತೀರ್ಥ ಗ್ರಾಮದ ಯಲ್ಲಾಲಿಂಗ (28) ಹಾಗೂ ಯಾದಗಿರಿ ತಾಲೂಕಿನ ಕೆ. ಹೊಸಳ್ಳಿ ಗ್ರಾಮದ ಸಂಜು ಯೇಸು (18) ಬೈಕ್ ಅಪಘಾತದಲ್ಲಿ ಗಾಯಗೊಂಡವರು.

ಯಲ್ಲಾಲಿಂಗ ರ ಕಾಲಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕಳುಹಿಸಿದರೆ ಸಂಜು ಅವರನ್ನು ಯಾದಗಿರಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಯಿತು.

ಯಲ್ಲಾಲಿಂಗ ವ್ಯಕ್ತಿಯ ಪರಿಚಯ ಪಡೆದ ಶಾಸಕರು, ಅವರ ಕುಟುಂಬಕ್ಕೆ ಸಂಪರ್ಕಿಸಿ ಸಾಂತ್ವನ ಹೇಳಿ ಧೈರ್ಯ ನೀಡಿದರು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ತೆರಳಲು ವ್ಯವಸ್ಥೆ ಮಾಡಿದ್ದು, ಅಲ್ಲದೆ ಅಲ್ಲಿನ ವೈದ್ಯರಿಗೆ ಕರೆ ಮಾಡಿ ತ್ವರಿತವಾಗಿ ಚಿಕಿತ್ಸೆ ನೀಡಬೇಕೆಂದು ಸೂಚಿಸಿರುವುದಾಗಿ ತಿಳಿಸಿದರು. ಶಾಸಕರಿಂದ ಮೃತ ಕುಟುಂಬಸ್ಥರಿಗೆ ಸಾಂತ್ವನ: ಪಟ್ಟಣದಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಕಾಂಗ್ರೆಸ್ ಮುಖಂಡ ಹಾಗೂ ಪುರಸಭೆ ಸದಸ್ಯೆ ರೇಣುಕಾ ಅವರ ಪತಿ ವೀರಪ್ಪ ಪಡಿಗೆ ಅವರ ಮನೆಗೆ ತೆರಳಿ ಶಾಸಕ ಶರಣಗೌಡ ಕಂದಕೂರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಭಾನುವಾರ ಗಾಳಿ ಮಳೆಗೆ ಮನೆಯ ಪತ್ರಾಸ ಮೇಲಿನ ಕಲ್ಲು ಬಿದ್ದು ಮೃತಪಟ್ಟಿರುವ ಪುಟ್ಟ ಬಾಲಕಿ ಮಾನಸ ತಿಮ್ಮಪ್ಪ ಯಾದವ್ (4) ಅವರ ಮನೆಗೆ ಹಾಗೂ ಇತ್ತೀಚಿಗೆ ಮರಣಹೊಂದಿದ ನಾಗಣ್ಣ ಭೂಮ ಅವರ ಮನೆಗೆ ಭೇಟಿ ನೀಡಿ ಶಾಸಕರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ವೇಳೆ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶರಣು ಅವುಂಟಿ, ಬ್ಲಾಕ್ ಅಧ್ಯಕ್ಷ ಪ್ರಕಾಶ್ ನೀರೆಟಿ, ಮಾಜಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಸದಸ್ಯರಾದ ಬಾಲಪ್ಪ ದಾಸರಿ, ಮುಖಂಡರಾದ ಜ್ಞಾನೇಶ್ವರ ರೆಡ್ಡಿ, ರವೀಂದ್ರರೆಡ್ಡಿ ಗವಿನೋಲ್, ರಾಜೇಶ್ವರರೆಡ್ಡಿ, ನವಾಜ್ ರೆಡ್ಡಿ, ನರಸಪ್ಪ ವಕೀಲ್, ಬಾನು ಪ್ರಕಾಶ್ ಸೇರಿದಂತೆ ಇತರರಿದ್ದರು.