ಕೊರೋನಾ ಕಾಲಘಟ್ಟದಲ್ಲಿ ಶಾಲೆಗೆ ಇದ್ದ ಶಿಕ್ಷಕರು ಪ್ರತಿ ವರ್ಷ ನಡೆಯುವ ಬಡ್ತಿ ಮತ್ತು ವರ್ಗಾವಣೆ ಕಾರಣಕ್ಕೆ ಮಧ್ಯದಲ್ಲೇ ಶಾಲೆ ಬಿಟ್ಟಿದ್ದರಿಂದ ಮುಖ್ಯ ಶಿಕ್ಷಕನಾಗಿದ್ದರೂ ಆರೂ ವಿಷಯ ಬೋಧಿಸಿ, ಶಾಲೆ ಫಲಿತಾಂಶದಲ್ಲೂ ಸಾಕಷ್ಟು ಸುಧಾರಣೆ ತಂದ, ದಾಖಲಾತಿ ಹೆಚ್ಚಿಸಿ, ಮಕ್ಕಳಿಗೆ ಕಲೆ, ಕ್ರೀಡೆ, ಸಾಹಿತ್ಯಾಸಕ್ತಿ ಮೂಡಿಸುವ ಕೆಲಸವನ್ನು ಜಿಲ್ಲೆಯ ದೂರದ ಹಳ್ಳಿಯೊಂದರ ಶಾಲೆ ಶಿಕ್ಷಕ ಸದ್ದಿಲ್ಲದೇ ಮಾಡಿದ್ದಾರೆಂದರೆ ನಂಬಲೇಬೇಕು.

- ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಗ್ರಾಮದ ಸರ್ಕಾರಿ ಶಾಲೆಯ ಆಸ್ತಿಯಾದ ಎಚ್ಎಂ!

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೊರೋನಾ ಕಾಲಘಟ್ಟದಲ್ಲಿ ಶಾಲೆಗೆ ಇದ್ದ ಶಿಕ್ಷಕರು ಪ್ರತಿ ವರ್ಷ ನಡೆಯುವ ಬಡ್ತಿ ಮತ್ತು ವರ್ಗಾವಣೆ ಕಾರಣಕ್ಕೆ ಮಧ್ಯದಲ್ಲೇ ಶಾಲೆ ಬಿಟ್ಟಿದ್ದರಿಂದ ಮುಖ್ಯ ಶಿಕ್ಷಕನಾಗಿದ್ದರೂ ಆರೂ ವಿಷಯ ಬೋಧಿಸಿ, ಶಾಲೆ ಫಲಿತಾಂಶದಲ್ಲೂ ಸಾಕಷ್ಟು ಸುಧಾರಣೆ ತಂದ, ದಾಖಲಾತಿ ಹೆಚ್ಚಿಸಿ, ಮಕ್ಕಳಿಗೆ ಕಲೆ, ಕ್ರೀಡೆ, ಸಾಹಿತ್ಯಾಸಕ್ತಿ ಮೂಡಿಸುವ ಕೆಲಸವನ್ನು ಜಿಲ್ಲೆಯ ದೂರದ ಹಳ್ಳಿಯೊಂದರ ಶಾಲೆ ಶಿಕ್ಷಕ ಸದ್ದಿಲ್ಲದೇ ಮಾಡಿದ್ದಾರೆಂದರೆ ನಂಬಲೇಬೇಕು.

ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಸುರೇಶ ಈ ಸಾಧನೆ ಹಿಂದಿನ ಶಕ್ತಿ. ಬಹುಮುಖ ಪ್ರತಿಭೆಯಾದ ಇವರು ತಮ್ಮ ಸಾಮರ್ಥ್ಯವನ್ನೇ ಧಾರೆ ಎರೆಯುವ ಮೂಲಕ ಸರಿಯಾಗಿ ಸಾರಿಗೆ ವ್ಯವಸ್ಥೆಯೂ ಇಲ್ಲದ ರಾಜ್ಯ ಮುಖ್ಯ ಹೆದ್ದಾರಿಯಿಂದ ನಾಲ್ಕೈದು ಕಿಮೀ ಒಳಗಿರುವ ಗ್ರಾಮವೊಂದರ ಕಡೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಕುತೂಹಲದಿಂದ ನೋಡುವಂತೆ ಮಾಡಿದ್ದಾರೆ. ಈ ಹೊಗಳಿಕೆಗೆ, ಅದರಲ್ಲೇನೂ ವಿಶೇಷವಿಲ್ಲ, ಅದು ತನ್ನ ಬದ್ಧತೆ ಅಂತಾರೆ ಟಿ.ಸುರೇಶ.

ಸಾಮಾನ್ಯವಾಗಿ ಶಿಕ್ಷಕರು ಪದವಿಯಲ್ಲಿ ತಾವು ಓದಿದ ವಿಷಯವನ್ನಷ್ಟೇ ಬೋಧಿಸುತ್ತಾರೆ. ಆದರೆ, ಅಣಬೇರು ಹೈಸ್ಕೂಲ್ ಮುಖ್ಯ ಶಿಕ್ಷಕ ಟಿ.ಸುರೇಶ ಎಲ್ಲರಿಗಿಂತ ಡಿಫರೆಂಟ್‌. ಇವರು ಆರೂ ವಿಷಯಗಳನ್ನೂ ಬೋಧಿಸುತ್ತಾರೆ! 2020ರಲ್ಲಿ ಗ್ರಾಮದ ಶಾಲೆಗೆ ಸೇವೆಗೆ ಹಾಜರಾದ ಸುರೇಶ್ ತಮ್ಮ ಶಾಲೆಗೆ 2020ರಲ್ಲಿ ಬಡ್ತಿ, ವರ್ಗಾವಣೆ ಪ್ರಕ್ರಿಯೆ ಕಾರಣಕ್ಕೆ ಮಧ್ಯದಲ್ಲೇ ಶಿಕ್ಷಕರ ಕೊರತೆಯಾಯಿತು. ವರ್ಗಾವಣೆ ಮೂಲಕ ಯಾವುದೇ ಶಿಕ್ಷಕರೂ ಶಾಲೆಗೆ ಬರಲಿಲ್ಲ. ಅತಿಥಿ ಶಿಕ್ಷಕರೂ ಗ್ರಾಮ, ಸುತ್ತಮುತ್ತ ಸಿಗಲಿಲ್ಲ. ಆಗ ತಾವೇ ಆರೂ ವಿಷಯಗಳ ಬೋಧಿಸಲು ಮುಂದಾಗಿ, ಅದರಲ್ಲಿ ಸುರೇಶ ಯಶಸ್ಸನ್ನೂ ಕಂಡರು.

ಪಾಠ ಬೋಧನೆಗಷ್ಟೇ ಸೀಮಿತರಾಗದ ಮುಖ್ಯ ಶಿಕ್ಷಕ ಟಿ.ಸುರೇಶ ಯೋಗ, ಕಲೆ, ಕ್ರೀಡೆಯಲ್ಲೂ ಮಕ್ಕಳಿಗೆ ಆಸಕ್ತಿ ಮೂಡಿಸಿದರು. ಸ್ವತಃ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವ ಇವರು ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆಗಳನ್ನೂ ಸುಶ್ರಾವ್ಯವಾಗಿ ಹಾಡಬಲ್ಲರು. ಕನ್ನಡ, ಹಿಂದಿ, ತೆಲುಗು ಹಾಡುಗಳೆಂದರೆ ಸುರೇಶರ ಕಂಠದಲ್ಲೇ ಕೂತಿರುತ್ತವೆ.

ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವನ, ನಾಟಕ ಬರೆಯುವ ಅಭ್ಯಾಸವಿದ್ದ ಸುರೇಶ್‌, 2000ರಲ್ಲಿ ಮೌನಗೀತೆ ಕವನ ಸಂಕಲನ ಹೊರತಂದಿದ್ದಾರೆ.

2013ರಲ್ಲಿ ಆವಿಷ್ಕಾರ, 2015ರಲ್ಲಿ ಇಸ್ರೋ, ನಮ್ಮ ಹೆಮ್ಮೆ, 2015ರಲ್ಲಿ ನೀನೇಕೆ ಗೆಲ್ಲಲಾರೆ ಕೃತಿ, 2016ರಲ್ಲಿ ನೀನನ್ನನೇನನ್ನೂ ಎಂಬ ಕವನ ಸಂಕಲ ಬಿಡುಗಡೆ ಮಾಡಿದ್ದಾರೆ. ಸಾಹಿತ್ಯ ಚಟುವಟಿಕೆಗಳಲ್ಲೂ ಪಾಲ್ಗೊಂಡು, ಮಕ್ಕಳಿಗೂ ಅಂತಹ ಆಸಕ್ತಿ ಮೂಡಿಸುತ್ತಾರೆ. 365 ದಿನಗಳಲ್ಲಿನ ವಿಜ್ಞಾನಿಗಳ ವಿಶೇಷ ಪರಿಚಯ ಕೃತಿಗೆ ಐಐಎಸ್‌ಸಿ ಸಂಸ್ಥೆಯ ಪ್ರಸಿದ್ಧ ವಿಜ್ಞಾನಿ ಡಾ.ಹರಿಶ್ಚಂದ್ರ ಮುನ್ನುಡಿ ಬರೆದಿದ್ದಾರೆ. ದೇಶದ ಸರ್ವಶ್ರೇಷ್ಠ ವಿಜ್ಞಾನಿ ಡಾ. ಸಿ.ಎನ್‌.ಆರ್‌. ರಾವ್‌ ಅವರಿಂದ ಅಭಿನಂದನಾ ಪತ್ರ, ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್‌ ಅವರಿಂದ ವಿಜ್ಞಾನಿಗಳ ಕುರಿತ ಪುಸ್ತಕ ರಾಜ್ಯದ ಪ್ರತಿ ಶಾಲೆಗೆ ತಲುಪುವಂತೆ ವ್ಯವಸ್ಥೆ ಆಗಿದ್ದು ಸುರೇಶ ಕಾಳಜಿ, ಬದ್ಧತೆಗೆ ಸಾಕ್ಷಿ.

ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ, ಇನ್‌ಸ್ಪೈರ್ ಅವಾರ್ಡ್‌ ಸ್ಪರ್ಧೆ, ರಸಪ್ರಶ್ನೆಗೆ ತೀರ್ಪುಗಾರರಾಗಿ ಭಾಗಿಯಾಗಿದ್ದಾರೆ. ಶಿಕ್ಷಣ ಇಲಾಖೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಮುಖ್ಯ ಶಿಕ್ಷಕ ಟಿ.ಸುರೇಶ ಒಬ್ಬ ಶಿಕ್ಷಕ, ಕಲಾವಿದ, ಗಾಯಕ, ಸಂಪನ್ಮೂಲ ಶಿಕ್ಷಕ, ಕವಿ, ಸಾಹಿತಿ, ಯೋಗಪಟು, ಉತ್ತಮ ವಾಕ್ಪಟು, ಸಂವಹನಾಕಾರರಾಗಿ ಅಷ್ಟೇ ಅಲ್ಲ, ಇಲಾಖೆ ವಹಿಸುವ ಎಲ್ಲ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ತಾವು ಕಾರ್ಯನಿರ್ವಹಿಸುವ ಅಣಬೇರು ಸರ್ಕಾರಿ ಪ್ರೌಢಶಾಲೆಗೆ ಸುಮಾರು 60 ಲಕ್ಷದ ಕಾಮಗಾರಿ ಮಾಡಿಸಿದ್ದಾರೆ. ಪಾಲಕರು, ಹಳೆಯ ವಿದ್ಯಾರ್ಥಿಗಳಿಂದ ಕೊಡುಗೆಗಳನ್ನು ಕೊಡಿಸಿದ್ದಲ್ಲದೇ, ಅಗತ್ಯವಿದ್ದಾಗಲೆಲ್ಲಾ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ, ಶಾಲೆಯ ಅಭಿವೃದ್ಧಿಗೆ, ಮಕ್ಕಳ ಅಭ್ಯುದಯಕ್ಕೆ ಟಿ.ಸುರೇಶ ಕಾರಣರಾಗುತ್ತಿದ್ದಾರೆ.

- - -

-2ಕೆಡಿವಿಜಿ14: ಅಣಬೇರು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಟಿ.ಸುರೇಶ ಮಕ್ಕಳಿಗೆ ಬೋಧನೆ ಮಾಡುತ್ತಿರುವುದು.

-2ಕೆಡಿವಿಜಿ15: ಅಣಬೇರು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಟಿ.ಸುರೇಶ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸುತ್ತಿರುವುದು.

-2ಕೆಡಿವಿಜಿ16: ಅಣಬೇರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಸುರೇಶ.